ಸೇಡಂ: ಅಕ್ರಮ ಮರಳುಗಾರಿಕೆ ರಾಜ್ಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದ್ದರೂ ತಾಲೂಕಿನಲ್ಲಿ ಇನ್ನು ರಾಜಾರೋಷವಾಗಿ ನಡೆಯುತ್ತಿದೆ.
ಅಕ್ರಮ ತಡೆಯಲು ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೆ ತಂದರೂ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೆ ಸಾಗಿದೆ. ಟ್ರ್ಯಾಕ್ಟರ್‌ಗಳ ಮೂಲಕ ಮರಳುಗಾರಿಕೆ ಮಾಡುವಂತಿಲ್ಲ. ಆದರೂ ರಾತ್ರೋರಾತ್ರಿ 50 ರಿಂದ 80 ಟ್ರ್ಯಾಕ್ಟರ್‌ಗಳು ನದಿಯಿಂದ ಮರಳು ಹೊತ್ತು ಸಾಗಿಸುತ್ತಿವೆ.
ಕುಕ್ಕುಂದಾ, ಬಿಬ್ಬಳ್ಳಿ, ಮೀನಹಾಬಾಳ, ಮದರಾನಾಗಸನಪಲ್ಲಿ, ಮಳಖೇಡ, ಸಂಗಾವಿ, ರಂಜೋಳ, ಕುರಕುಂಟಾ ಹಾಗೂ ನದಿ ಪಾತ್ರದ ಅನೇಕ ಗ್ರಾಮಗಳಲ್ಲಿ ಅಕ್ರಮ ಮರಳುಗಾರಿಗೆ ನಡೆಯುತ್ತಿದೆ. ಅಲ್ಲದೇ ಯಾದಗಿರಿ, ಗುರುಮಠಕಲ್, ಹಂದರಕಿ ಮಾರ್ಗವಾಗಿ ಪ್ರತಿನಿತ್ಯ ಹತ್ತಾರು ಟಿಪ್ಪರ್‌ಗಳ ಮೂಲಕ ಮರಳು ಸೇಡಂ ತಲುಪುತ್ತಿದೆ.
ಪ್ರತಿನಿತ್ಯ ಲಕ್ಷಾಂತರ ರೂ. ಸರ್ಕಾರದ ಬೊಕ್ಕಸಕ್ಕೆ ಹಾನಿ ಉಂಟಾಗುತ್ತಿದ್ದರೂ ಅಧಿಕಾರಿಗಳು ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ. ಕಣ್ಣೆದುರೇ ಅಕ್ರಮ ನಡೆಯುತ್ತಿದ್ದರೂ ಕ್ಯಾರೆ ಎನ್ನುತ್ತಿಲ್ಲ. ಅಕ್ರಮ ಮರಳುಗಾರಿಕೆಯಿಂದ ನದಿಗಳು ತಮ್ಮ ಶಕ್ತಿ ಕಳೆದುಕೊಳ್ಳುತ್ತಿವೆ. ಬರುವ ದಿನಗಳಲ್ಲಿ ನೀರಿನ ಅಭಾವ ಸೃಷ್ಟಿಯಾಗುವ ಸಾಧ್ಯತೆಗಳಿವೆ. ಅಧಿಕಾರಿಗಳು ಎಚ್ಚೆತ್ತುಕೊಳ್ಳದೇ ಇದ್ದಲ್ಲಿ ಸಮಸ್ಯೆ ಕಟ್ಟಿಟ್ಟ ಬುತ್ತಿಯಾಗಿದೆ.
ಕೃಷಿ ಬಿಟ್ಟ ರೈತ: ಕೃಷಿ ಮೂಲಕ ಜೀವನ ಕಟ್ಟಿಕೊಂಡಿದ್ದ ರೈತರು ಹಣದ ಆಸೆಗೆ ಬಿದ್ದು ಗಳೆ ಹೊಡೆಯುವ ಎತ್ತುಗಳ ಮೂಲಕ ಬಂಡಿಗಳಲ್ಲಿ ಮರಳು ಸಾಗಾಟ ನಡೆಸಿದ್ದಾರೆ. ಪ್ರತಿನಿತ್ಯ ಮುಂಜಾವು ಮತ್ತು ಸಂಜೆ ಸಾಲುಗಟ್ಟಿ ನೂರಾರು ಎತ್ತಿನ ಬಂಡಿಗಳು ಮರಳಿನ ಚೀಲಗಳನ್ನು ಹೊತ್ತು ಪಟ್ಟಣದತ್ತ ಬರುವ ದೃಶ್ಯ ಸರ್ವೇ ಸಾಮಾನ್ಯವಾಗಿದೆ.
ತಾಲೂಕಿನಲ್ಲಿ ಅಕ್ರಮ ಮರಳುಗಾರಿಕೆ ನಡೆದಿದೆ. ಈ ಕುರಿತು ಅನೇಕ ದೂರುಗಳು ಬಂದಿವೆ. ದೂರು ಬಂದಾಗಲೊಮ್ಮೆ ಸ್ಥಳಕ್ಕೆ ಹೋಗಿ ಪರಿಶೀಲಿಸಿದ್ದೇನೆ. ರಾತ್ರಿ-ಹಗಲು ಎನ್ನದೆ ಮರಳುಗಳ್ಳರನ್ನು ಹಿಡಿಯಲು ಪ್ರಯತ್ನಿಸಿದ್ದೇನೆ. ಅವರ ಹಿಂದೆ ಬಿದ್ದು ನಮ್ಮ ಆರೋಗ್ಯ ಹಾಳಾಗಿದೆ. ಯಾರೂ ಸಿಗ್ತಿಲ್ಲ. ದೂರು ಬಂದ ತಕ್ಷಣ ಗ್ರಾಮ ಲೆಕ್ಕಿಗರ ತಂಡ ಕಳುಹಿಸಿದರೂ ಯಾರೂ ಸಿಗುತ್ತಿಲ್ಲ. ಚುನಾವಣೆ ಮುಗಿಯುವವರೆಗೆ ಸುಮ್ಮನೆ ಇರ್ತೆವೆ. ಮುಂದೆ ನೊಡೋಣ.
•
ವೀರಮಲ್ಲಪ್ಪ ಪೂಜಾರ,
ಸಹಾಯಕ ಆಯುಕ್ತರು, ಸೇಡಂ
•
ಶಿವಕುಮಾರ ಬಿ. ನಿಡಗುಂದಾ