ಚಿಂಚೋಳಿ: ಮೀಸಲು ವಿಧಾನಸಭಾ ಮತಕ್ಷೇತ್ರದ ಶಾಸಕ ಡಾ| ಉಮೇಶ ಜಾಧವ ಅವರು ಶಾಸಕಾಂಗ ಸಭೆಗೆಅ ನಾರೋಗ್ಯದ ಹಿನ್ನೆಲೆಯಲ್ಲಿ ಗೈರಾಗಿದ್ದು, ಕಾಂಗ್ರೆಸ್ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ ಪಟ್ಟಣದ ಚಂದಾಪುರ ನಗರದಲ್ಲಿರುವ ಅವರ ನಿವಾಸಕ್ಕೆ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಮಾಜಿ ಸಿಎಂ ಸಿದ್ದರಾಮಯ್ಯನವರು ಬೆಂಗಳೂರಿನಲ್ಲಿ ಕರೆದಿದ್ದ ಶಾಸಕಾಂಗ ಸಭೆಯಲ್ಲಿ ಶಾಸಕರು ಹಾಜರಾಗಬೇಕಿತ್ತು. ಅನಾರೋಗ್ಯದ ನೆಪ ಹೇಳಿ, ಫ್ಯಾಕ್ಸ್ ಮೂಲಕ ತಿಳಿಸಿ, ಸಭೆಗೆ ಗೈರು ಆಗಿದ್ದರು. ಹೀಗಾಗಿ, ಶಾಸಕ ಡಾ.ಉಮೇಶ ಜಾಧವ ಅವರು ಬಿಜೆಪಿ ತೆಕ್ಕೆಗೆ ಜಾರಿದ್ದಾರೆ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎರಡು ದಿನದ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಶಾಸಕರು ಬಿಜೆಪಿ ಕುದುರೆ ವ್ಯಾಪಾರಕ್ಕೆ 50 ಕೋಟಿ ರೂ.ಗೆ ಮಾರಾಟ ಆಗಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಕಲಬುರಗಿಯಲ್ಲಿನ ಶಾಸಕರ ನಿವಾಸದ ಎದುರು ಪ್ರತಿಭಟನೆ ನಡೆಸಿದ್ದರು. ಹೀಗಾಗಿ, ಮುಂಬೈನಿಂದ ಹೈದ್ರಾಬಾದ್‌ಗೆ ವಿಮಾನದ ಮೂಲಕ ಆಗಮಿಸಿ, ಗಡಿಗ್ರಾಮ ಕುಂಚಾವರಂ ನಲ್ಲಿ ವಾಸ್ತವ್ಯ ಹೂಡಿ ಕಾರ್ಯಕರ್ತರೊಂದಿಗೆ ಬಿಜೆಪಿಗೆ ಸೇರ್ಪಡೆ ಕುರಿತು ಸಭೆ ನಡೆಸುವವರಿದ್ದರು. ಕಲಬುರಗಿಯಲ್ಲಿ ಪ್ರತಿಭಟನೆ ಸುದ್ದಿ ಕೇಳಿ ಪುನ: ಮುಂಬೈಗೆ ತೆರಳಿದ್ದರು. ಹೀಗಾಗಿ, ಚಂದಾಪುರ ನಿವಾಸಕ್ಕೆ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಈ ಕುರಿತು ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅನೀಲಕುಮಾರ ಜಮಾದಾರ “ಉದಯವಾಣಿ’ ಜತೆ ಮಾತನಾಡಿ, ನಮ್ಮ ಶಾಸಕರು ಎಲ್ಲಿದ್ದಾರೆ ಎನ್ನುವುದು ನಮಗೆ ಗೊತ್ತಿಲ್ಲ. ನಮಗೆ ಪಕ್ಷ ಮುಖ್ಯ, ಶಾಸಕರಲ್ಲ. ಪಕ್ಷ ಸೂಚಿಸಿದಂತೆ ನಾವು ಕೆಲಸ ಮಾಡುತ್ತೇವೆ. ಶಾಸಕರು ಎಲ್ಲಿದ್ದಾರೆ ಎಂದು ನನ್ನನ್ನು ಕೇಳಬೇಡಿ ಎಂದು ತಿಳಿಸಿದ್ದಾರೆ.