Advertisement
ಉಪ್ಪಿನಂಗಡಿ ಮಠ ಎಂಬಲ್ಲಿ ಬಾವ ಕುಂಞಿ ಅವರ ಒಂದು ಮಹಡಿಯ ಸುಮಾರು 2,800 ಚದರ ಅಡಿ ವಿಸ್ತೀರ್ಣದ ಮನೆ ಗುಡ್ಡ ಪ್ರದೇಶದಲ್ಲಿದೆ. ಮನೆಯ ಕೆಳಭಾಗಕ್ಕೆ ಹಾನಿ ಆಗ ಬಾರದೆಂದು ಸುಮಾರು 15 ಲಕ್ಷ ರೂ. ವೆಚ್ಚದಲ್ಲಿ ಭದ್ರವಾದ ತಡೆಗೋಡೆಯನ್ನು ನಿರ್ಮಿಸಲಾಗಿತ್ತು. ಆದರೆ, ಈ ಬಾರಿಯ ಮಳೆಗಾಲದಲ್ಲಿ ಸುರಿದ ಭಾರೀ ಮಳೆಯ ಪರಿಣಾಮ ತಡೆಗೋಡೆಯೇ ಒಂದು ಅಡಿಯಷ್ಟು ವಾಲಿಕೊಂಡು ಮನೆಯೂ ಅಪಾಯಕ್ಕೆ ತುತ್ತಾಗುವ ಸಾಧ್ಯತೆ ಕಂಡು ಬಂದಿತ್ತು. ತಡೆಗೋಡೆ ವಾಲಿಕೊಂಡು ಬಿದ್ದರೆ ಕೆಳಭಾಗದ ಮನೆಯೂ ಸಂಪೂರ್ಣ ಹಾನಿಯಾಗುವ ಭೀತಿ ಒಂದೆಡೆಯಾದರೆ, ಜೀವಮಾನದ ಕನಸಿನ ಸೌಧ ಕುಸಿದರೆ ಎಲ್ಲವೂ ನಾಶವಾಗುವ ಸಂಕಷ್ಟ ಇನ್ನೊಂದೆಡೆ.
ಒಂದು ಮಹಡಿಯ ಮನೆಯನ್ನು 7 ಅಡಿಯಷ್ಟು ಸ್ಥಳಾಂತರಗೊಳಿಸಿ, 10 ಅಡಿಯಷ್ಟು ತಗ್ಗು ಪ್ರದೇಶದಲ್ಲಿ ಯಥಾಸ್ಥಿತಿಯಲ್ಲಿ ಸ್ಥಾಪಿಸಬೇಕಾಗಿದೆ. ಅದಕ್ಕಾಗಿ ಈ ಮನೆಯ ಕರ್ಗಲ್ಲಿನ ಕಲ್ಲಿನ ಅಡಿಪಾಯವನ್ನು ಸಂಪೂರ್ಣವಾಗಿ ತೆಗೆದು, ಪಂಚಾಂಗಕ್ಕೆ ಕಾಂಕ್ರೀಟ್ ಬೀಮ್ ಅಳವಡಿಸಿ, ಸದ್ಯ ಜಾಕ್ ಮೂಲಕ ನಿಲ್ಲಿಸಲಾಗಿದೆ. ಏಳು ಅಡಿಯಷ್ಟು ದೂರದಲ್ಲಿ 10 ಅಡಿ ಆಳಕ್ಕೆ ಸಮತಟ್ಟು ಸ್ಥಳವನ್ನು ನಿರ್ಮಿಸಿ, ಅಲ್ಲಿಗೆ ಮನೆಯನ್ನು ಸ್ಥಳಾಂತರಿಸುವ ಕಾರ್ಯ ಮಾಡಲಾಗುತ್ತಿದೆ. ಹರಿಯಾಣದ ಟಿಡಿಬಿ ಎಂಜಿನಿಯರಿಂಗ್ ಸಂಸ್ಥೆ ಇದರ ಹೊಣೆ ಹೊತ್ತಿದ್ದು, ಪ್ರತಿ ಚದರ ಅಡಿ ವಿಸ್ತೀರ್ಣದ ನೆಲೆಗಟ್ಟಿನ ಆಧಾರದಲ್ಲಿ ಶುಲ್ಕ ವಿಧಿಸಲಾಗುತ್ತಿದೆ.