ಬೀಜಿಂಗ್:ಪ್ರಾಥಮಿಕ ಶಾಲೆಯ ಭದ್ರತಾ ಸಿಬ್ಬಂದಿಯೊಬ್ಬ ಏಕಾಏಕಿ ಚೂರಿಯಿಂದ ದಾಳಿ ನಡೆಸಿದ ಪರಿಣಾಮ 40 ಮಂದಿ ಮಕ್ಕಳು ಹಾಗೂ ಶಾಲೆಯ ಸಿಬ್ಬಂದಿಗಳು ಗಾಯಗೊಂಡಿರುವ ಘಟನೆ ಚೀನಾದಲ್ಲಿ ಗುರುವಾರ ನಡೆದಿದರುವುದಾಗಿ ವರದಿ ತಿಳಿಸಿದೆ.
ಚೀನಾದ ದಕ್ಷಿಣ ಗುವಾಂಕ್ಸಿ ಪ್ರಾಂತ್ಯದ ಶಾಲೆಯೊಂದರಲ್ಲಿ ಈ ಘಟನೆ ನಡೆದಿರುವುದಾಗಿ ಚೀನಾ ಸರ್ಕಾರ ಪ್ರಾಯೋಜಕತ್ವದ ದೈನಿಕದ ವರದಿ ವಿವರಿಸಿದೆ.
ಮೂವರು ಪುಟ್ಟ ಮಕ್ಕಳ ಸ್ಥಿತಿ ಗಂಭೀರವಾಗಿರುವುದಾಗಿ ಸಿಜಿಟಿಎನ್ ಟಿವಿ ವರದಿ ಮಾಡಿದೆ. ಚೂರಿಯಿಂದ ದಾಳಿ ನಡೆಸಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದು, ಗಾಯಗೊಂಡಿರುವ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ.
ಮಕ್ಕಳು, ಶಿಕ್ಷಕ ಸಿಬ್ಬಂದಿ ಸೇರಿದಂತೆ ಎಲ್ಲರನ್ನೂ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ ಗಾಯಗೊಂಡಿರುವ ಬಹುತೇಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿ ಹೇಳಿದೆ. ಪ್ರಾಥಮಿಕ ಶಾಲೆ ಬೆಳಗ್ಗೆ 8.30ಕ್ಕೆ ಆರಂಭಗೊಂಡಾಗ ಮಕ್ಕಳೆಲ್ಲರು ತರಗತಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ 50 ವರ್ಷದ ಸೆಕ್ಯೂರಿಟಿ ಗಾರ್ಡ್ ಚೂರಿಯಿಂದ ಮಕ್ಕಳ ಮೇಲೆ ದಾಳಿ ನಡೆಸಿರುವುದಾಗಿ ವರದಿ ವಿವರಿಸಿದೆ.
ಮಾರಣಾಂತಿಕ ಕೋವಿಡ್ 19 ವೈರಸ್ ನಿಂದ 40-50 ದಿನಗಳ ಕಾಲ ಲಾಕ್ ಡೌನ್ ತೆರವುಗೊಂಡ ನಂತರ ಮೇ ತಿಂಗಳಿನಲ್ಲಿ ಶಾಲೆಗಳನ್ನು ಚೀನಾದ ಕೆಲವೆಡೆ ಪುನರಾರಂಭಿಸಲಾಗಿತ್ತು ಎಂದು ವರದಿ ತಿಳಿಸಿದೆ.