Advertisement

ಅಮರನಾಥ ಯಾತ್ರೆ ಭದ್ರತೆಗೆ ಅತ್ಯಾಧುನಿಕ ಸಾಧನಗಳು

09:41 PM Jun 09, 2022 | Team Udayavani |

ನವದೆಹಲಿ: ಜೂ.30ರಿಂದ ವಿಶ್ವಪ್ರಸಿದ್ಧ ಅಮರನಾಥ ದೇಗುಲ ಯಾತ್ರೆ ಶುರುವಾಗಲಿದೆ. ಎರಡು ವರ್ಷಗಳ ಕಾಲ ಕೊರೊನಾ ಕಾರಣಕ್ಕೆ ನಿಂತುಹೋಗಿದ್ದ ಈ ಯಾತ್ರೆಗೆ ಮತ್ತೆ ಚಾಲನೆ ಸಿಕ್ಕಿರುವ ಹೊತ್ತಿನಲ್ಲೇ; ಭದ್ರತಾಪಡೆಗಳು ತೀವ್ರ ನಿಗಾವಹಿಸಿವೆ. ಉಗ್ರರು ಸ್ಟಿಕ್ಕಿ ಬಾಂಬ್‌ಗಳನ್ನು (ಅಂಟಿಸಲ್ಪಡುವ ಆಯಸ್ಕಾಂತೀಯ ಬಾಂಬ್‌ಗಳು) ಬಳಸಿ ವಾಹನಗಳನ್ನು ಸ್ಫೋಟಿಸುವ ಸುಳಿವು ಸಿಕ್ಕಿರುವುದರಿಂದ ಅತ್ಯಾಧುನಿಕ ಸಾಧನಗಳನ್ನು ಯೋಧರು ಬಳಸುತ್ತಿದ್ದಾರೆ. ಭದ್ರತಾ ಕಾರಣಗಳಿಂದ ಈ ಸಾಧನಗಳ  ಹೆಸರುಗಳನ್ನು ಸೇನೆ ಬಹಿರಂಗಪಡಿಸಿಲ್ಲ.

Advertisement

ಈ ಸಾಧನಗಳನ್ನು ಇಸ್ರೇಲ್‌ನಿಂದ ತರಿಸಿಕೊಳ್ಳಲಾಗಿದೆ. ಅವುಗಳನ್ನು ಅಮರನಾಥ ಯಾತ್ರಾರ್ಥಿಗಳು ಸಾಗುವ ಮಾರ್ಗದಲ್ಲೆಲ್ಲ ಅಳವಡಿಸಲಾಗಿದೆ. ಪೆಹಲ್ಗಾಮ್‌, ಬಾಲ್ತಾಲ್‌ ಮಾರ್ಗದಲ್ಲೇ 50ಕ್ಕೂ ಅಧಿಕ ಡ್ರೋನ್‌ಗಳನ್ನು ಕಣ್ಗಾವಲಿಗಾಗಿ ನಿಯೋಜಿಸಲಾಗಿದೆ. ಒಟ್ಟಾರೆ ಡ್ರೋನ್‌ಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಸೇನೆ, ಸಿಆರ್‌ಪಿಎಫ್, ಜಮ್ಮುಕಾಶ್ಮೀರ ಪೊಲೀಸರು, ಜಮ್ಮುಕಾಶ್ಮೀರ ಆಡಳಿತ, ಅಮರನಾಥ ದೇಗುಲ ಮಂಡಳಿಗಳು ಒಗ್ಗಟ್ಟಾಗಿ ಭದ್ರತೆಗಾಗಿ ಶ್ರಮವಹಿಸಿವೆ.

ಸ್ಟಿಕ್ಕಿ ಬಾಂಬ್‌ಗಳೆಂದರೆ? :

ಇತ್ತೀಚೆಗೆ ಭದ್ರತಾಪಡೆಗಳು ಸ್ಟಿಕ್ಕಿ ಬಾಂಬ್‌ಗಳನ್ನು ಜಮ್ಮುಕಾಶ್ಮೀರದ ಹಲವೆಡೆ ವಶಪಡಿಸಿಕೊಂಡಿವೆ. ಅದರ ಆಧಾರದಲ್ಲಿ ಉಗ್ರರು ಸ್ಟಿಕ್ಕಿ ಬಾಂಬ್‌ಗಳನ್ನು ಬಳಸುವ ಸಾಧ್ಯತೆಯನ್ನು ಭದ್ರತಾಪಡೆಗಳು ಕಂಡುಕೊಂಡಿವೆ. ಕಾಶ್ಮೀರದಲ್ಲಿರುವ ಹಲವು ಉಗ್ರ ಸಂಘಟನೆಗಳಿಗೆ ಈಗಾಗಲೇ ಸ್ಟಿಕ್ಕಿ ಬಾಂಬ್‌ಗಳು ತಲುಪಿವೆ ಎಂದು ಊಹಿಸಲಾಗಿದೆ. ಈ ಬಾಂಬ್‌ಗಳು ಗಾತ್ರದಲ್ಲಿ ಚಿಕ್ಕವು. ಆಯಸ್ಕಾಂತೀಯ ಬಾಂಬ್‌ಗಳೆಂದರೂ ತಪ್ಪಿಲ್ಲ. ಇವನ್ನು ನಿರ್ದಿಷ್ಟಕಡೆ ಅಂಟಿಸಲು ಸಾಧ್ಯವಿರುವುದೇ ಇದಕ್ಕೆ ಕಾರಣ. ದೂರದಿಂದಲೇ ಸ್ಫೋಟಿಸಬಹುದು. ಮುಖ್ಯವಾಗಿ ಯಾತ್ರಾರ್ಥಿಗಳಿರುವ ವಾಹನಕ್ಕೆ ಸಿಕ್ಕಿಸುವ ಸಾಧ್ಯತೆ ದಟ್ಟವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next