ಪೇಶಾವರ: ಪಾಕಿಸ್ತಾನದ ಖೈಬರ್ ಪ್ರಾಂತ್ಯದಲ್ಲಿ ಅಲ್ಲಿನ ಭದ್ರತಾ ಪಡೆಗಳು ಆರು ಮಂದಿ ಉಗ್ರರನ್ನು ಹೊಡೆದುರುಳಿಸಿವೆ ಎಂದು ಪಾಕ್ ಸೇನೆಯ ಮಾಧ್ಯಮ ವಿಭಾಗ ತಿಳಿಸಿದೆ. ಗುಪ್ತಚರ ಮಾಹಿತಿ ಮೇರೆಗೆ, ಅಫಘಾನಿಸ್ತಾನದ ಗಡಿ ಸಮೀಪದ ಉತ್ತರ ವಜರಿಸ್ತಾನದ ಬುಡಕಟ್ಟು ಪ್ರದೇಶವಾದ ದತ್ತಖೇಲ್ ಪ್ರದೇಶದಲ್ಲಿ ಬುಧವಾರ ಕಾರ್ಯಚರಣೆ ನಡೆಸಿದ ಪಾಕ್ ಭದ್ರತಾ ಪಡೆ, ವಿವಿಧ ಪ್ರಕರಣಗಳಲ್ಲಿ ಬೇಕಾಗಿದ್ದ ಆರು ಮಂದಿ ಉಗ್ರರನ್ನು ಹತ್ಯೆ ಮಾಡಿವೆ. ನಾಗರಿಕರು ಮತ್ತು ಭದ್ರತಾ ಸಿಬ್ಬಂದಿಯ ಬಲಿ ಪಡೆದಿದ್ದ ಈ ಉಗ್ರರು, ಪಾಕಿಸ್ತಾನದಲ್ಲಿ ನಡೆದ ವಿವಿಧ ದಾಳಿಗಳಲ್ಲಿ ಭಾಗಿಯಾಗಿದ್ದರು. ಕಾರ್ಯಚರಣೆ ವೇಳೆ ಉಗ್ರರಿಂದ ಶಸ್ತ್ರಾಸ್ತ್ರಗಳು ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪಾಕ್ ಸೇನೆ ಮಾಹಿತಿ ನೀಡಿದೆ.
“ಕಾರ್ಯಾಚರಣೆಯಲ್ಲಿ ಉಗ್ರ ಸಂಘಟನೆ ತೆಹ್ರಿಕಿ ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ)ಗೆ ಸೇರಿದ ಆರು ಉಗ್ರರು ಹತರಾಗಿದ್ದಾರೆ. ಇವರು ವಜರಿಸ್ತಾನ್ ಜಿಲ್ಲೆಯ ಅಬ್ಟಾಸ್ಸಾ ಖಟ್ಟಕ್ ಪೊಲೀಸ್ ಪೋಸ್ಟ್ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಲಾಯಿತು,’ ಎಂದು ಪಾಕ್ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.