Advertisement

Operation Sarp Vinaash 2.0: ಉಗ್ರರ ವಿರುದ್ದ ಅತಿ ದೊಡ್ಡ ಕಾರ್ಯಾಚರಣೆ ಆರಂಭಿಸಿದ ಸೇನೆ

08:26 PM Jul 25, 2024 | Team Udayavani |

ಹೊಸದಿಲ್ಲಿ: ಜಮ್ಮು ಕಾಶ್ಮೀರದಲ್ಲಿ ಕಳೆದ ಕೆಲವು ವಾರಗಳಿಂದ ಹೆಚ್ಚುತ್ತಿರುವ ಉಗ್ರ ಚಟುವಟಿಕೆಗಳನ್ನು ದಮನ ಮಾಡಲು ಭಾರತೀಯ ಸೇನೆ ಮುಂದಾಗಿದೆ. ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಜಮ್ಮು ವಿಭಾಗದಲ್ಲಿ 55 ಸಕ್ರಿಯ ಭಯೋತ್ಪಾದಕರನ್ನು ಗುರಿಯಾಗಿಸಿಕೊಂಡು ಭಾರತೀಯ ಸೇನೆಯು ಆಪರೇಷನ್ ಸರ್ಪ್ ವಿನಾಶ್ 2.0 (Operation Sarp Vinaash 2.0) ಎಂಬ ಕಾರ್ಯಾಚರಣೆ ಪ್ರಾರಂಭಿಸಿದೆ.

Advertisement

ಆಪರೇಷನ್ ಸರ್ಪ್ ವಿನಾಶ್ 2.0 ಕಳೆದ 21 ವರ್ಷಗಳಲ್ಲೇ ಅತಿದೊಡ್ಡ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಾಗಿದೆ. ಇದನ್ನು ಪ್ರಧಾನಿ ಕಚೇರಿ ನೇರವಾಗಿ ಮೇಲ್ವಿಚಾರಣೆ ನಡೆಸುತ್ತಿದೆ. ಆಪರೇಶನ್ ನ ವರದಿಗಳನ್ನು ನೇರವಾಗಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಮತ್ತು ಸೇನಾ ಮುಖ್ಯಸ್ಥರಿಗೆ ಕಳುಹಿಸಲಾಗುತ್ತಿದೆ.

ಕಳೆದ ಎರಡು ವರ್ಷಗಳಲ್ಲಿ ಜಮ್ಮುವಿನಲ್ಲಿ ಭಯೋತ್ಪಾದಕ ದಾಳಿಗಳ ತೀವ್ರ ಏರಿಕೆಗೆ ಈ ಕಾರ್ಯಾಚರಣೆಯು ಪ್ರತಿಕ್ರಿಯೆಯಾಗಿದೆ. ಕಳೆದ ಎರಡು ವರ್ಷಗಳಲ್ಲಿ 48 ಸೇನಾ ಸಿಬ್ಬಂದಿಗಳನ್ನು ಬಲಿ ತೆಗೆದುಕೊಂಡಿದೆ.

ದೇಶಕ್ಕೆ ಕಂಟಕವಾಗಿರುವ ಉಗ್ರರನ್ನು ದಮನ ಮಾಡಲು ಭಾರತೀಯ ಸೇನೆಯು 3,000 ಹೆಚ್ಚುವರಿ ಪಡೆಗಳನ್ನು, 200 ಸ್ನೈಪರ್ ಗಳನ್ನು ಮತ್ತು ಪಾರಾ ಕಮಾಂಡೋಗಳನ್ನು ಜಮ್ಮುವಿನಲ್ಲಿ ನಿಯೋಜನೆ ಮಾಡಲಾಗಿದೆ. ಇತರ ಭದ್ರತಾ ಏಜೆನ್ಸಿಗಳ ಸಹಯೋಗದೊಂದಿಗೆ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ. ಅದರ ಪ್ರಗತಿಯನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರ ಮತ್ತು ಸೇನಾ ಮುಖ್ಯಸ್ಥರಿಗೆ ನೇರವಾಗಿ ವರದಿ ಮಾಡಲಾಗುತ್ತಿದೆ.

Advertisement

1995ರಿಂದ 2003ರವರೆಗೆ ಜಮ್ಮುವಿನಲ್ಲಿ ಉಗ್ರರ ವಿರುದ್ದ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಿಲೇಜ್ ಡಿಫೆನ್ಸ್ ಗಾರ್ಡ್ಸ್ (Village Defense Guards) ನ ಸಹಾಯವನ್ನು ಭಾರತೀಯ ಸೇನೆ ಪಡೆದು ಕೊಂಡಿದೆ. ವಿ.ಡಿ.ಜಿಗಳು ಸ್ಥಳೀಯ ಪ್ರದೇಶಗಳ ನಿಖರ ಮಾಹಿತಿ ಹೊಂದಿದ್ದು, ಆದ್ದರಿಂದ ಭಯೋತ್ಪಾದಕರು ಅಡಗಿರುವ ಕಷ್ಟಕರವಾದ ಭೂಪ್ರದೇಶಗಳನ್ನು ತಲುಪಲು ಸೇನೆ ಮತ್ತು ಭದ್ರತಾ ಪಡೆಗಳು ತಮ್ಮ ಸಹಾಯವನ್ನು ತೆಗೆದುಕೊಳ್ಳುತ್ತವೆ.

ಆಪರೇಷನ್ ಸರ್ಪ್ ವಿನಾಶ್ 2.0 ಕಾರ್ಯಾಚರಣೆಯು ಭಯೋತ್ಪಾದಕರಿಗೆ ಆಹಾರ, ಆಶ್ರಯ ಮತ್ತು ಶಸ್ತ್ರಾಸ್ತ್ರಗಳನ್ನು ಒಳಗೊಂಡಂತೆ ವ್ಯವಸ್ಥಾಪನಾ ಬೆಂಬಲವನ್ನು ಒದಗಿಸುವ ಓವರ್ ಗ್ರೌಂಡ್ ವರ್ಕರ್ (OGW) ನೆಟ್‌ ವರ್ಕ್ ಅನ್ನು ಕಿತ್ತುಹಾಕುವ ಗುರಿಯನ್ನು ಹೊಂದಿದೆ. ಅದಕ್ಕಾಗಿಯೇ ಕಾರ್ಯಾಚರಣೆಯು ಈ ಅಸ್ತಿತ್ವದಲ್ಲಿರುವ ಭಯೋತ್ಪಾದನೆಯ ಜಾಲವನ್ನು ನಿರ್ಮೂಲನೆ ಮಾಡುವತ್ತ ಗಮನಹರಿಸುತ್ತದೆ. ಅಂತಾರಾಷ್ಟ್ರೀಯ ಗಡಿ ಮತ್ತು ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ನುಸುಳುವಿಕೆಯನ್ನು ತಡೆಯಲು ಸೇನೆಯು ಕಾರ್ಯ ನಿರ್ವಹಿಸುತ್ತಿದೆ. ಅಲ್ಲಿ ಬಿಎಸ್‌ಎಫ್ ಮತ್ತು ಸೇನಾ ಸಿಬ್ಬಂದಿ ಕಟ್ಟೆಚ್ಚರ ವಹಿಸಿದ್ದಾರೆ.

ದೊಡಾ, ಕಥುವಾ, ಉಧಂಪುರ, ರಜೌರಿ, ಪೂಂಛ್ ಮತ್ತು ರಿಯಾಸಿ ಜಿಲ್ಲೆಗಳಲ್ಲಿ ಆಪರೇಷನ್ ಸರ್ಪ್ ವಿನಾಶ್ 2.0 ಕಾರ್ಯಾಚರಣೆ ನಡೆಸುತ್ತಿದೆ. ಈ ಪ್ರದೇಶಗಳಲ್ಲಿ 55 ಉಗ್ರರು ಅಡಗಿದ್ದಾರೆ ಎಂಬ ಮಾಹಿತಿಯಿದೆ. ಭಯೋತ್ಪಾದಕ ಬೆದರಿಕೆಯನ್ನು ತೊಡೆದು ಹಾಕಲು ಮತ್ತು ಜಮ್ಮುವನ್ನು ಭಯೋತ್ಪಾದನೆಯ ಕೇಂದ್ರವನ್ನಾಗಿ ಮಾಡುವ ಪಾಕಿಸ್ತಾನದ ಯೋಜನೆಗಳನ್ನು ವಿಫಲಗೊಳಿಸಲು ಸೇನೆಯು ನಿರ್ಧರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next