Advertisement

ರಾಜ್ಯದ ಎಲ್ಲ ಹಿಂದೂ ದೇಗುಲಗಳಿಗೆ ಭದ್ರತೆ

10:03 AM Nov 04, 2019 | mahesh |

ಸುಬ್ರಹ್ಮಣ್ಯ: ರಾಜ್ಯದ ಎಲ್ಲ ದೇವಸ್ಥಾನಗಳಿಗೂ ಭದ್ರತೆ ಒದಗಿಸಲು ಸರಕಾರ ಬದ್ಧವಾಗಿದೆ. ಈ ಸಂಬಂಧ ಧಾರ್ಮಿಕ ಪರಿಷತ್‌ ಸಭೆ ನಡೆಸಿ ಚರ್ಚಿಸಲಾಗಿದೆ. ಗೃಹ ಇಲಾಖೆಯ ಮೂಲಕ ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶವನ್ನೂ ನೀಡಿದ್ದೇವೆ. ಭದ್ರತೆ ಕೊರತೆ ಇರುವಲ್ಲಿ ಭದ್ರತಾ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮುಜರಾಯಿ ಮತ್ತು ಬಂದರು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Advertisement

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಶನಿವಾರ ಆಗಮಿಸಿ ದೇವರ ದರ್ಶನ ಪಡೆದ ಬಳಿಕ ಕ್ಷೇತ್ರದ ಅಭಿವೃದ್ಧಿ ಯೋಜನೆಗಳ ಪರಿಶೀಲನೆ ಸಭೆ ನಡೆಸಿ ಪತ್ರಕರ್ತರ ಜತೆ ಮಾತನಾಡಿದರು.
ಕೊಲ್ಲೂರು, ಕಟೀಲು ಕುಕ್ಕೆ ಮೊದಲಾದ ದೇಗುಲಗಳಲ್ಲಿ ಭದ್ರತೆಗೆ ಆರ್ಥಿಕ ಸಮಸ್ಯೆ ಇಲ್ಲ. ಧಾರ್ಮಿಕ ಶ್ರದ್ಧಾ ಕೇಂದ್ರಗಳ ದೇಗುಲಗಳಲ್ಲಿ ಆಭರಣ, ವಿಗ್ರಹ ಕಳವು ಪ್ರಕರಣಗಳು ಹೆಚ್ಚು ತ್ತಿರುವುದರಿಂದ ಆರ್ಥಿಕ ಭದ್ರತೆ ಇಲ್ಲದ ದೇಗುಲ ಗಳಿಗೂ ಸೂಕ್ತ ಭದ್ರತೆ ನೀಡಲು ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ಶೀಘ್ರ ಕುಕ್ಕೆ ಪೊಲೀಸ್‌ ಠಾಣೆಗೆ ಎಸ್‌ಐ ನೇಮಕಾತಿ ಆಗಲಿದೆ ಎಂದರು.

ನಾಮನಿರ್ದೇಶನ ಸದಸ್ಯರ ನೇಮಕ
ಮುಜರಾಯಿ ಇಲಾಖೆಯ ಅವಧಿ ಮುಗಿದ 90 ಎ ದರ್ಜೆ ದೇವಸ್ಥಾನಗಳ ಆಡಳಿತ ಮಂಡಳಿ ಗಳಿಗೆ ನಾಮನಿರ್ದೇಶನ ಸದಸ್ಯರ ನೇಮಕ ಅರ್ಜಿ ಶೀಘ್ರ ಕರೆಯಲಾಗುತ್ತದೆ. ಎರಡು ಮೂರು ದಿನಗಳಲ್ಲಿ ಪ್ರಕಟನೆ ಹೊರಡಿಸಲಾಗುತ್ತದೆ. ಕಳೆದ ವಾರವಷ್ಟೆ ಧಾರ್ಮಿಕ ಪರಿಷತ್‌ ಸಭೆ ನಡೆಸಿದ್ದೇನೆ. ಅರ್ಜಿ ಸ್ವೀಕಾರದ ಬಳಿಕ ಪರಿಶೀಲನೆ ಪ್ರಕ್ರಿಯೆಗಳು ಮುಗಿದು 9 ಮಂದಿ ನಾಮನಿರ್ದೇಶಿತರ ಹೆಸರನ್ನು ಧಾರ್ಮಿಕ ಪರಿಷತ್‌ ಅಂತಿಮಗೊಳಿಸುತ್ತದೆ. ಮುಂದಿನ ಒಂದು ತಿಂಗಳೊಳಗೆ ಈ ಕೆಲಸ ಪೂರ್ಣವಾಗುತ್ತದೆ ಎಂದರು.

ಸರಕಾರದಿಂದಲೇ ಕುಕ್ಕೆಗೆ ಚಿನ್ನದ ರಥ
ಕುಕ್ಕೆ ದೇಗುಲಕ್ಕೆ ಚಿನ್ನದ ರಥವನ್ನು ಸರಕಾರದ ವತಿಯಿಂದಲೇ ಪಾರದರ್ಶಕವಾಗಿ ಮಾಡ ಲಾಗುತ್ತದೆ. ಈಗಾಗಲೇ ಸರಕಾರ ಅನುಮೋದನೆ ನೀಡಿದೆ. ಯೋಜನ ವೆಚ್ಚ ಎಲ್ಲವನ್ನು ಪರಿಶೀಲಿಸಿ ಶೀಘ್ರ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು. ಭಕ್ತರು ನೀಡಿದ ಬ್ರಹ್ಮರಥ ಕೊಡುಗೆಯನ್ನು ಸ್ವಾಗತಿ ಸುತ್ತೇವೆ. ನೂತನ ಬ್ರಹ್ಮರಥವನ್ನು ಈ ವಾರ್ಷಿಕ ಜಾತ್ರೆಗೆ ಎಳೆಯಲಾಗುವುದು ಎಂದರು. ಕುಕ್ಕೆ ದೇಗುಲದಲ್ಲಿ ಭಕ್ತರ ಹಿತರಕ್ಷಣೆಯ ಜತೆಗೆ ಮೂಲಸೌಕರ್ಯಕ್ಕೆ ಒತ್ತು ನೀಡಲಾಗುವುದು ಈ ಸಂಬಂಧ ಶೀಘ್ರ ಮತ್ತೂಂದು ಸುತ್ತಿನ ಮರುಪರಿಶೀಲನೆ ಸಭೆ ಮುಂದಿನ 15ರೊಳಗೆ ನಡೆಸಲಾಗುವುದು ಎಂದರು.

ಸ್ವಂತ ಜಾಗ ಅಭಿವೃದ್ಧಿ
ಬೆಂಗಳೂರು ಮತ್ತು ಮೈಸೂರಿನಲ್ಲಿ ಕುಕ್ಕೆ ದೇವಸ್ಥಾನಕ್ಕೆ ಖರೀದಿಸಿದ ಸ್ವಂತ ಜಾಗವಿದೆ. ಅವುಗಳನ್ನು ದೇವಸ್ಥಾನದ ಮೂಲಸೌಕರ್ಯಕ್ಕೆ ಬಳಸಿಕೊಂಡು ಅಭಿವೃದ್ಧಿ ಪಡಿಸಲಾಗುತ್ತದೆ. ಈ ಸಂಬಂಧ ಸ್ಥಳಿಯ ಶಾಸಕರ ಜತೆ ಸ್ಥಳ ಪರಿಶೀಲನೆ ನಡೆಸಿ ಮುಂದಿನ ಅಭಿವೃದ್ಧಿಗಳನ್ನು ಕೈಗೊಳ್ಳುತ್ತೇವೆ. ದೇವಸ್ಥಾನದ ಸಿಬಂದಿಗೆ ಆರನೇ ವೇತನ ಜಾರಿಗೆ ತರುವಂತೆ ಶಾಸಕರ ಸಲಹೆ ಮೇರೆ ಧಾರ್ಮಿಕ ಪರಿಷತ್‌ ಸಭೆ ಕರೆದು ಜಾರಿಗೆ ತರುತ್ತೇವೆ. ಸಂಚಿತ‌ ಕಾರ್ಯಾರ್ಥ ದಿನಕೂಲಿ ನೌಕರರ ಖಾಯಂ ಬಗ್ಗೆ ಕಡತ ವಿಲೆವಾರಿಗೊಳಿಸಲು ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದರು.

Advertisement

ಜಾತ್ರೆ: ಪೂರ್ವಸಿದ್ಧತೆ
ವಾರ್ಷಿಕ ಜಾತ್ರೆಯ ಪೂರ್ವಭಾವಿಯಾಗಿ ನ. 4ರಂದು ಶಾಸಕರ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ಕರೆದು ಕುಮಾರಧಾರೆಯಿಂದ ದೇವಸ್ಥಾನದ ವರೆಗೆ ಬೀದಿ ಮಡೆಸ್ನಾನ ನಡೆಸಲು ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು. ಜಾತ್ರೆಯ ಸಂದರ್ಭ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಸಚಿವರು ತಿಳಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್‌ ವಳಲಂಬೆ, ಪ್ರಮುಖರಾದ ವೆಂಕಟ್‌ ದಂಬೆಕೋಡಿ, ಸುಬೋಧ ಶೆಟ್ಟಿ ಮೇನಾಲ, ದಿನೇಶ್‌ ಸಂಪ್ಯಾಡಿ, ಶ್ರೀಕುಮಾರ, ಸುಬ್ರಹ್ಮಣ್ಯ ಭಟ್‌ ಮಾನಾಡು, ಅಶೋಕ ಆಚಾರ್ಯ, ಉಪಸ್ಥಿತರಿದ್ದರು.

ಪ್ರಾಧಿಕಾರ ಕುರಿತು ಅಂತಿಮವಾಗಿಲ್ಲ
ಕುಕ್ಕೆ ಕ್ಷೇತ್ರವನ್ನು ಪ್ರಾಧಿಕಾರವನ್ನಾಗಿಸುವ ಕುರಿತು ಶಾಸಕರು ಪ್ರಸ್ತಾವ ಇರಿಸಿದ್ದಾರೆ. ಸಾಧಕ ಬಾಧಕ ನೋಡಿಕೊಂಡು ಸರಕಾರ ಮಟ್ಟದಲ್ಲಿ ಮುಂದೆ ನಿರ್ಧಾರಿಸುತ್ತದೆ. ಕುಕ್ಕೆ ದೇಗುಲಕ್ಕೆ ಖಾಯಂ ಅಧಿಕಾರಿಯನ್ನು ಶೀಘ್ರ ನೇಮಕ ಮಾಡಲಾಗುತ್ತದೆ. ಮಠ ಮಠದ ಕೆಲಸವನ್ನು ಮಾಡುತ್ತದೆ. ದೇವಸ್ಥಾನ ಅದರದೇ ಕೆಲಸ ಮಾಡುತ್ತದೆ, ಭಕ್ತರು ನೆಮ್ಮದಿಯಿಂದ ಇದ್ದಾರೆ ಎಂದವರು ಮಠ ಹಾಗೂ ದೇವಸ್ಥಾನದ ವಿವಾದಕ್ಕೆ ಸಂಬಂದಿಸಿದ ಪ್ರಶ್ನೆಗೆ ಉತ್ತರಿಸಿದರು.

ಅನರ್ಹ ಶಾಸಕ ಕುಕ್ಕೆಯಲ್ಲಿ
ಈ ನಡುವೆ ಅನರ್ಹಗೊಂಡ ಶಾಸಕ ಮಾಜಿ ಅರಣ್ಯ ಸಚಿವ ಶಂಕರ್‌ ಅವರು ಪತ್ನಿ ಮಕ್ಕಳ ಜತೆ ಕುಟುಂಬ ಸಮೇತ ಶನಿವಾರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ದೇವರಿಗೆ ಅಭಿಷೇಕ ನೆರವೇರಿಸಿ ತೆರಳಿದರು. ಮಾಜಿ ಸಚಿವ ಭೇಟಿಯನ್ನು ಗುಪ್ತವಾಗಿಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next