ಪುಲ್ವಾಮಾ ದಾಳಿಗೆ ಸಂಬಂಧಿಸಿ ನೇರವಾಗಿ ಸರಕಾರದ ವಿರುದ್ಧ ವಾಗ್ಧಾಳಿ ನಡೆಸದೇ ಇರಲು ತೀರ್ಮಾನಿಸಿದ್ದ ಕಾಂಗ್ರೆಸ್, ಈಗ ಅಂದರೆ ಘಟನೆ ನಡೆದ 6 ದಿನಗಳ ಬಳಿಕ ಕೇಂದ್ರ ಸರಕಾರದ ವಿರುದ್ಧ ಮುಗಿಬಿದ್ದಿದೆ. ಮಂಗಳವಾರ ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಘ್ವಿ, ಪುಲ್ವಾಮಾ ದಾಳಿಗೆ ಭದ್ರತಾ ವೈಫಲ್ಯವೇ ಕಾರಣ ಎಂದು ಆರೋಪಿಸಿದ್ದಾರೆ. 2014ಕ್ಕಿಂತ ಮೊದಲು ಸಣ್ಣ ಪುಟ್ಟ ಘಟನೆಗಳಿಗೂ ಪ್ರಧಾನಿ ಮನಮೋಹನ್‌ಸಿಂಗ್ ರಾಜೀನಾಮೆ ನೀಡಬೇಕು ಎಂದು ಮೋದಿ ಕೇಳುತ್ತಿದ್ದರು. ಆದರೆ, ನಾವು ಅಂಥ ಯಾವುದೇ ಹೇಳಿಕೆ ನೀಡಿಲ್ಲ. ಉರಿ ದಾಳಿ, ಪಠಾಣ್‌ಕೋಟ್ ದಾಳಿ, ಪುಲ್ವಾಮಾ ದಾಳಿಯಾದಾಗಲೂ ನಾವು ಜವಾಬ್ದಾರಿಯುತವಾಗಿ ವರ್ತಿಸಿದ್ದೆವು ಎಂದಿದ್ದಾರೆ ಸಿಂಘ್ವಿ. ಅಲ್ಲದೆ, ಪುಲ್ವಾಮಾ ದಾಳಿಯು ಭದ್ರತಾ ವೈಫಲ್ಯ ಎನ್ನುವುದು ಸ್ಪಷ್ಟವಾಗುತ್ತಿದೆ ಎಂದಿರುವ ಅವರು, “ಏಕಕಾಲದಲ್ಲಿ 2500 ಯೋಧರನ್ನು 78 ವಾಹನಗಳಲ್ಲಿ ಸಾಗಿಸುವಂಥ ಅಸಮರ್ಪಕ ಐಡಿಯಾ ಕೊಟ್ಟಿದ್ದಾದರೂ ಯಾರು, ಯೋಧರು ಸಾಗುತ್ತಿರುವಾಗ ಅದೇ ರಸ್ತೆಯಲ್ಲಿ ನಾಗರಿಕ ವಾಹನ ಸಾಗಲು ಅನುಮತಿ ಕೊಟ್ಟಿದ್ದೇಕೆ, ಜೈಶ್ ಆತ್ಮಾಹುತಿ ದಾಳಿ ನಡೆಯಬಹುದು ಎಂದು ಗುಪ್ತಚರ ಮಾಹಿತಿಯಿದ್ದರೂ ನಿರ್ಲಕ್ಷ್ಯ ವಹಿಸಿದ್ದೇಕೆ’ ಎಂಬ ಪ್ರಶ್ನೆಗಳನ್ನೂ ಹಾಕಿದ್ದಾರೆ.