ಪಂಚಕುಲ : ಇಬ್ಬರು ಸಾಧ್ವಿಗಳನ್ನು ಅತ್ಯಾಚಾರಗೈದ ಅಪರಾಧಕ್ಕಾಗಿ ಈಗಾಗಲೇ 20 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಡೇರಾ ಸಚ್ಚಾ ಸೌಧಾ ಇದರ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ಸಿಂಗ್ ವಿರುದ್ಧದ ಎರಡು ಕೊಲೆ ಕೇಸುಗಳ ವಿಚಾರಣೆ ಇಂದು ಶನಿವಾರ ಪಂಚಕುಲ ಕೋರ್ಟಿನಲ್ಲಿ ನಡೆಯಲಿದ್ದು ಆ ಪ್ರಯುಕ್ತ ಪಟ್ಟಣದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.
ಗುರ್ಮಿತ್ ರಾಮ್ ರಹೀಮ್ ಸಿಂಗ್ ವಿರುದ್ಧದ ಸಿಬಿಐ ಕೋರ್ಟ್ ವಿಚಾರಣೆಯು ಇಂದು ವಿಡಿಯೋ ಕಾನ್‌ಫರೆನ್ಸಿಂಗ್ ಮೂಲಕ ನಡೆಯಲಿದೆಯಾದರೂ ಪಂಚಕುಲದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಎಂದು ಹರಿಯಾಣ ಪೊಲೀಸರು ತಿಳಿಸಿದ್ದಾರೆ.
ಪಂಚಕುಲ ಕೋರ್ಟ್ ಆವರಣದ ಒಳಗೆ, ಹೊರಗೆ ಮತ್ತು ಪಟ್ಟಣದ ಹಲವೆಡೆ ಅರೆ ಸೈನಿಕ ದಳ ಮತ್ತು ಪೊಲೀಸ್ ಪಡೆಯ ಸಿಬಂದಿಗಳನ್ನು ಭಾರೀ ಸಂಖ್ಯೆಯಲ್ಲಿ ನಿಯೋಜಿಸಲಾಗಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ.
“ಗುರ್ಮಿತ್ ರಾಮ ರಹೀಮ್ ವಿರುದ್ಧದ ಕೊಲೆ ಕೇಸುಗಳ ವಿಚಾರಣೆ ಆರಂಭವಾಗುವುದಕ್ಕೆ ಮುನ್ನವೇ ನಾವು ಪರ್ಯಾಪ್ತ ಭದ್ರತಾ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದೇವೆ; ಸಾಕಷ್ಟು ದೊಡ್ಡ ಸಂಖ್ಯೆಯಲ್ಲಿ ಭದ್ರತಾ ಸಿಬಂದಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ’ ಎಂದು ಹರಿಯಾಣ ಪೊಲೀಸ್ ಮಹಾ ನಿರ್ದೇಶಕ ಬಿ ಎಸ್ ಸಂಧು ತಿಳಿಸಿದ್ದಾರೆ.
ಗುರ್ಮಿತ್ ರಾಮ್ ರಹೀಮ್ ಸಿಂಗ್‌ನನ್ನು ಪ್ರಕೃತ ರೋಹಟಕ್‌ನ ಸುನೇರಿಯಾ ಜೈಲಿನಲ್ಲಿ ಇಡಲಾಗಿದೆ; ಅಲ್ಲಿಂದಲೇ ಕೋರ್ಟ್ ವಿಚಾರಣೆಯ ವಿಡಿಯೋ ಕಾನ್‌ಫರೆನ್ಸಿಂಗ್ ನಡೆಯಲಿದೆ ಎಂದು ಸಂಧು ಹೇಳಿದ್ದಾರೆ.