Advertisement

ಜಾತ್ಯತೀತ ಜನ ನಾಯಕ, ಅಜಾತ ಶತ್ರುಧರ್ಮಸಿಂಗ್‌

01:25 PM Jul 28, 2017 | |

ನೆಲೋಗಿ (ಜೇವರ್ಗಿ):  ಹಣಮಂತರಾವ ಭೈರಾಮಡಗಿ ಧರ್ಮಸಿಂಗ್‌ ಅಜಾತ ಶತ್ರು. ಜಾತ್ಯತೀತ ನಾಯಕ. ಕಾಂಗ್ರೆಸ್‌ನ ಹಿರಿಯ ನಾಯಕರಾಗಿದ್ದರೂ ಪ್ರತಿಪಕ್ಷಗಳ ಎಲ್ಲ ಮುಖಂಡರೊಂದಿಗೂ ಉತ್ತಮ ಸ್ನೇಹ, ಬಾಂಧವ್ಯ ಹೊಂದಿದ್ದರು. 2004ರಲ್ಲಿ ಸಮ್ಮಿಶ್ರ ಸರ್ಕಾರ ರಚನೆ ಹಾಗೂ ಮುಖ್ಯಮಂತ್ರಿ ಹುದ್ದೆ ಅಲಂಕರಿಸಲು ಅವರಿಗೆ ಈ ಗುಣವೇ ನೆರವಾಗಿತ್ತು. ಸತತ ಎಂಟು ಸಲ ವಿಧಾನಸಭೆ ಪ್ರವೇಶ ಅದರಲ್ಲೂ ಮುಖ್ಯಮಂತ್ರಿ ಹುದ್ದೆ ಏರುವವರೆಗೂ ಸೋಲನ್ನೇ ಅರಿಯದ ಖ್ಯಾತಿ ಅವರದ್ದು.

Advertisement

ಬಾಲ್ಯ ಹಾಗೂ ರಾಜಕೀಯ ಜೀವನ ಅವಲೋಕಿಸಿದರೆ ಧರ್ಮಸಿಂಗ್‌ ಅವರಿಗೆ ಸರಿಸಾಟಿ ಯಾರೂ ಇಲ್ಲ. ಜೇವರ್ಗಿ ಕ್ಷೇತ್ರದಲ್ಲಿ ರಜಪೂತ ಮನೆಗಳು ನೂರು ಇರಲಿಕಿಲ್ಲ. ಆದರೆ ಧರ್ಮಸಿಂಗ್‌ ಸತತ ಎಂಟು ಸಲ ಗೆದ್ದು ಬಂದರು. ಜೇವರ್ಗಿ ಕ್ಷೇತ್ರವಲ್ಲದೆ ಕಲಬುರಗಿ ಜಿಲ್ಲೆ, ಬೀದರ್‌ ಲೋಕಸಭಾ ಕ್ಷೇತ್ರದಲ್ಲೂ ಸಂಸದರಾಗಿ ಆಯ್ಕೆಯಾದ ಹೆಗ್ಗಳಿಕೆ ಬೇರೆ. ರಾಜಕೀಯದುದ್ದಕ್ಕೂ ಯಾರೊಂದಿಗೂ ಸಣ್ಣ ವೈರತ್ವವನ್ನು ಬೆಳೆಸಿಕೊಂಡಿದ್ದಿಲ್ಲ. ಜೇವರ್ಗಿ ತಾಲೂಕಿನ ನೇಲೋಗಿ ಎನ್ನುವ ಹಳ್ಳಿಯಲ್ಲಿ ಜನಿಸಿ ಮುಖ್ಯಮಂತ್ರಿ, ಸಂಸತ್‌ ಸದಸ್ಯರಾದ ಅವರು ರಾಜಕಾರಣದಲ್ಲಿ ಎಲ್ಲ ಸ್ಥಾನಗಳನ್ನು ಅನುಭವಿಸಿದ್ದರು.

ಎಲ್ಲರನ್ನು ಸಂಭಾಳಿಸುತ್ತ ವಿರೋಧ ಪಕ್ಷಗಳು ಮೆಚ್ಚಿ ಅಹುದೆನ್ನುವಂತೆ ಆಡಳಿತ ನಡೆಸಿದ್ದರು. 2004ರ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿ ಅತಂತ್ರ ವಿಧಾನಸಭೆ ರಚನೆ ಸಂಗತಿ ಹೊರ ಬೀಳುತ್ತಿದ್ದಂತೆ ಮತ ಎಣಿಕೆಯ ಕೇಂದ್ರದಲ್ಲೇ ಸಮ್ಮಿಶ್ರ ಸರ್ಕಾರ ರಚನೆಗೆ ಸಿದ್ಧ ಎಂದು ಅವರು ಪ್ರಕಟಿಸಿದ್ದರು. ಅಂತೆಯೇ 2004ರ ಮೇ 28ರಂದು ರಾಜ್ಯದ 17ನೇ ಮುಖ್ಯಮಂತ್ರಿಯಾಗಿ ಕಾರ್ಯಭಾರ ವಹಿಸಿಕೊಂಡರು. ಕಾಂಗ್ರೆಸ್‌ ಪಕ್ಷವಲ್ಲದೇ ಪ್ರತಿಪಕ್ಷದವರೂ ಧರ್ಮಸಿಂಗ್‌ ಆಯ್ಕೆಗೆ ತಲೆದೂಗಿದರು.

ಧರ್ಮಸಿಂಗ್‌ ಕರ್ನಾಟಕ ಕಂಡ ಅಪರೂಪದ ರಾಜಕಾರಣಿ. ಸ್ನೇಹಮಯಿ, ಅತ್ಯಂತ ಅಂತಃಕರಣದ ಮೃದು ಹೃದಯಿ, ಅಪಾರ ಸ್ಮರಣಶಕ್ತಿ, ತಾವು ಎಷ್ಟೇ ಎತ್ತರದ ಸ್ಥಾನದಲ್ಲಿದ್ದರೂ ನೂರಾರು ಜನರಲ್ಲಿ ಪರಿಚಿತರನ್ನು ಗುರುತಿಸಿ ಕರೆದು  ಮಾತನಾಡುವ ಸೌಜನ್ಯ ಅವರದು. ಕಷ್ಟದಲ್ಲಿರುವವರಿಗೆ ಸಹಾಯಹಸ್ತ ನೀಡುವ ಅವರ ಗುಣ ರಾಜಕೀಯದಲ್ಲಿ ಅವರನ್ನು ಬಹು ಎತ್ತರಕ್ಕೆ ಕೊಂಡೊಯ್ದಿತು. ಎಂಥ ಕ್ಲಿಷ್ಟವಾದ ಕೆಲಸಗಳನ್ನೂ ಸಲೀಸಾಗಿ ಮಾಡುವ ಮೂಲಕ, ತಮಗೆ ವಿರೋಧಿಗಳೇ ಇಲ್ಲವೆನ್ನುವಂತೆ ವಿಪಕ್ಷಗಳವರ ಪ್ರೀತಿಗೂ ಪಾತ್ರರಾಗಿ ಕಾರ್ಯನಿರ್ವಹಿಸಿರುವುದು ಕರ್ನಾಟಕದ ರಾಜಕೀಯದಲ್ಲಿ “ಅಜಾತ ಶತ್ರು’ ಎಂದೇ ಗುರುತಿಸಿಕೊಳ್ಳಲು ಕಾರಣವಾಯಿತು.

ಹಿಂದುಳಿದ ಹೈದ್ರಾಬಾದ ಕರ್ನಾಟಕದ ಅಭಿವೃದ್ಧಿಗೆ ಶ್ರಮಿಸಿದವರಲ್ಲಿ ಧರ್ಮಸಿಂಗ್‌ ಮೊದಲಿಗರು. 40 ವರ್ಷ ಅಧಿಕಾರದಲ್ಲಿದ್ದರೂ ಏನೂ ಮಾಡಲಿಲ್ಲ. ಹಿಂದುಳಿಯುವಿಕೆಯಲ್ಲಿ ಅವರ ಕಾಣಿಕೆಯೂ ಇದೆ ಎನ್ನುವ ರಾಜಕೀಯ ಆರೋಪಕ್ಕೆ ಉತ್ತರವಾಗಿ ಅಧಿಕಾರದಲ್ಲಿದ್ದಾಗ ಹತ್ತಾರು ಯೋಜನೆಗಳನ್ನು ಜಾರಿಗೊಳಿಸಿದ್ದರು.

Advertisement

ಕಲಬುರಗಿಯಲ್ಲಿ ಪ್ರಥಮ ಸಂಪುಟ ಸಭೆ:
ಗುಂಡೂರಾವ್‌ ಮಂತ್ರಿ ಮಂಡಲದಲ್ಲಿ ನಗರಾಭಿವೃದ್ಧಿ ಸಚಿವರಾದಾಗ ಧರ್ಮಸಿಂಗ್‌ ಅವರು ಮಾಡಿದ ಮೊದಲ ಕೆಲಸ ಕಲಬುರಗಿ ನಗರಸಭೆಯನ್ನು ಮಹಾನಗರ ಪಾಲಿಕೆ ಎಂದು ಮೇಲ್ದರ್ಜೆಗೇರಿಸಿದ್ದು. ಮಹಾನಗರದ ರಸ್ತೆಗಳ ಸುಧಾರಣೆ, ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆಗಳಿಗೆ ನೂರಾರು ಕೋಟಿ ರೂ. ಅನುದಾನ ಬಿಡುಗಡೆ ಮಾಡಿದರು. ಅನಂತರ ಇಡೀ ಹೈದ್ರಾಬಾದ ಕರ್ನಾಟಕ ಪ್ರದೇಶದಲ್ಲಿ ಅಭಿವೃದ್ಧಿಯ ಬೆಳಕು ಚೆಲ್ಲುವ ದಿಸೆಯಲ್ಲಿ ಗುಂಡೂರಾಯರ ಮನವೊಲಿಸಿ, ಕಲಬುರಗಿಯಲ್ಲಿ 1982ರಲ್ಲಿ ಪ್ರಪ್ರಥಮ ಬಾರಿಗೆ ಸಚಿವ ಸಂಪುಟ ಸಭೆ ನಡೆಸುವಂತೆ ಮಾಡಿದರು. ರಾಜಧಾನಿಯಿಂದ ಹೊರಗೆ ಸಚಿವ ಸಂಪುಟ ಸಭೆ ನಡೆದದ್ದು ಅದೇ ಪ್ರಥಮ. ಈ ಸಭೆಯಲ್ಲಿ ಹೈದ್ರಾಬಾದ ಕರ್ನಾಟಕ ಅಭಿವೃದ್ಧಿ ಕುರಿತು ವಿಶೇಷ ಚರ್ಚೆ ನಡೆಸಿ, ಹೈದ್ರಾಬಾದ ಕರ್ನಾಟಕ ಅಭಿವೃದ್ಧಿ ಮಂಡಳಿ ರಚನೆಯ ತೀರ್ಮಾನ ಕೈಗೊಳ್ಳಲಾಗಿತ್ತು.

ಧರ್ಮಸಿಂಗ್‌ ಅಧ್ಯಕ್ಷತೆಯ ಸಮಿತಿ ರಚನೆಗೂ ಈ ಸಭೆ ತೀರ್ಮಾನಿಸಿತ್ತು. ಈ ಸಮಿತಿ ಹೈದ್ರಾಬಾದ ಕರ್ನಾಟಕ ಪ್ರದೇಶವು ರಾಜ್ಯದ ಇತರ ಜಿಲ್ಲೆಗಳಿಗೆ ಸಮನಾಗಿ ಯಾವ್ಯಾವ ಕ್ಷೇತ್ರಗಳಲ್ಲಿ ಹಿಂದುಳಿದಿದೆ. ಏನೇನು ಅಭಿವೃದ್ಧಿ ಕೈಗೊಳ್ಳಬೇಕು, ಅದಕ್ಕೆ ಬೇಕಾದ ಅನುದಾನಗಳ ಬಗ್ಗೆ
ವರದಿಯನ್ನು ಸಲ್ಲಿಸಿತು. ಅದರಂತೆ ಹೈದ್ರಾಬಾದ ಕರ್ನಾಟಕ ಅಭಿವೃದ್ಧಿ ಮಂಡಳಿ ರಚನೆಯಾಗಿ 300 ಕೋಟಿ ರೂ. ಅನುದಾನವನ್ನು ಸರ್ಕಾರ ನೀಡಿತು. ಈ ಮಂಡಳಿ ರಚನೆಯ ಪರಿಕಲ್ಪನೆಯ ಸಂಪೂರ್ಣ ಶ್ರೇಯಸ್ಸು ಧರ್ಮಸಿಂಗ್‌ ಅವರಿಗೆ ಸಲ್ಲುತ್ತದೆ. ಮುಂದೆ ಸರ್ಕಾರಗಳು ಬದಲಾಗಿ, ಮಂಡಳಿಗೆ ವಾರ್ಷಿಕವಾಗಿ ಹಣ ಬಿಡುಗಡೆಯಲ್ಲಿ ತೊಂದರೆಯಾದಾಗ, ಈ ಭಾಗದ ಎಲ್ಲ ಶಾಸಕರ ಮನವೊಲಿಸಿ ವಿಧಾನ ಮಂಡಲದಲ್ಲಿ ಧ್ವನಿ ಎತ್ತಿ ಹಣ ಬಿಡುಗಡೆ ಮಾಡುವಂತೆ ಮಾಡಿ, ಮಂಡಳಿಯ ಕಾರ್ಯ ಮುಂದುವರಿಯುವಂತೆ ಮಾಡಿದ್ದೂ ಅವರೇ.

ಗರಂ ಆಗಿದ್ದಕ್ಕೆ  ಎಲ್ಲರೂ ಗಾಬರಿ: ಹೈದ್ರಾಬಾದ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕು. ಅದಕ್ಕಾಗಿ ಸಂವಿಧಾನದ 371ನೇ ಕಲಂ ತಿದ್ದುಪಡಿ ಮಾಡಬೇಕೆಂಬ ಹೋರಾಟ ಹೈ.ಕ ಭಾಗದಲ್ಲಿ ಆರಂಭವಾಗಿತ್ತು. ಆಗ ಎಸ್‌.ಎಂ. ಕೃಷ್ಣ ಮುಖ್ಯಮಂತ್ರಿ ಆಗಿದ್ದರು. ಆಗ ಸರ್ವಪಕ್ಷ ನಿಯೋಗ
ದಿಲ್ಲಿಗೆ ತೆರಳಿ ಎನ್‌ಡಿಎ ಸರ್ಕಾರದ ಗೃಹ ಸಚಿವ ಎಲ್‌.ಕೆ.ಆಡ್ವಾಣಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿ, ಸಂವಿಧಾನ ತಿದ್ದುಪಡಿ ಅಗತ್ಯತೆಯನ್ನು ಮನವರಿಕೆ ಮಾಡಿತು. ಆದರೆ, ಬೆಂಗಳೂರಿನಲ್ಲೇ ಟೈಪ್‌ ಮಾಡಿ ಸಿದ್ಧಪಡಿಸಿದ್ದ ಮನವಿ ಪತ್ರದ ಕೊನೆಯಲ್ಲಿ ಹಸ್ತಾಕ್ಷರಗಳಿಂದ, ಹೈದ್ರಾಬಾದ ಕರ್ನಾಟಕ ಮತ್ತು ರಾಜ್ಯದ ಇತರ ಹಿಂದುಳಿದ ಪ್ರದೇಶಗಳನ್ನು 371ನೇ ಕಲಂ ತಿದ್ದುಪಡಿಯಲ್ಲಿ ಸೇರ್ಪಡೆ ಮಾಡಬೇಕೆಂದು ಬರೆದಿರುವದನ್ನು ಆಡ್ವಾಣಿಯವರು ಗಮನಿಸಿ, ಇತರ ಹಿಂದುಳಿದ ಭಾಗಗಳು ಯಾವವು? ಇದರಲ್ಲಿ ಅದನ್ನು ಉಲ್ಲೇಖೀಸಿಲ್ಲ. ಕೈಯಲ್ಲಿ ಬರೆಯಲಾಗಿದೆ. ಇದೇನು? ಎಂದು ಪ್ರಶ್ನಿಸಿದ್ದರು. ಆಗ ನಿಯೋಗದಲ್ಲಿದ್ದವರಿಗೆ ಕೊನೆಯ ಗಳಿಗೆಯಲ್ಲಿ ತಿದ್ದುಪಡಿ ವೇಳೆ ಆದ ಲೋಪದ ಅರಿವಾಯಿತು. ಈ ಘಟನೆಯಿಂದ
ಕೋಪೋದ್ರಿಕ್ತರಾದ ಧರ್ಮಸಿಂಗ್‌, ಆಡ್ವಾಣಿಯವರ ಕೋಣೆಯಿಂದ ಹೊರಬರುತ್ತಲೇ, ಮನವಿಯಲ್ಲಿ ಕೈಯಿಂದ ಬರೆದ ಸಚಿವರನ್ನು ಎಲ್ಲರೆದುರೇ ಎರ್ರಾಬಿರ್ರಿ ತರಾಟೆಗೆ ತೆಗೆದುಕೊಂಡು, “ನಿಮಗೆ ನಮ್ಮ ಪ್ರದೇಶದ ಬಗ್ಗೆ ತಾರತಮ್ಯ ಧೋರಣೆ ಇರುವುದು ತಿಳಿದಿತ್ತು. ಆದರೆ, ನೀವು ಈ ರೀತಿ ಬೆನ್ನಲ್ಲಿ ಚೂರಿ ಹಾಕುತ್ತಿರೆಂದು ಗೊತ್ತಿರಲಿಲ್ಲ’ ಎಂದು ಛೀಮಾರಿ ಹಾಕಿದರು.

ಅತ್ಯಂತ ಸೌಮ್ಯ ಮತ್ತು ಸೌಜನ್ಯದ ಅವರು ಇಷ್ಟೊಂದು ಕೋಪಗೊಂಡಿದ್ದು ನೋಡಿದವರಿಗೆ ಅಚ್ಚರಿ. ಮುಂದೆ ಬೀದರ ಸಂಸದರಾದಾಗ, ತಮ್ಮ ಎಲ್ಲ ರಾಜಕೀಯ ಶಕ್ತಿ ಹಾಗೂ ಪ್ರಭಾವ ಬೀರಿ ಕಲಬುರಗಿಯಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯ ಸ್ಥಾಪನೆಗೆ ಕಾರಣರಾದರು.  ಅವರು ಸಂಸದರಾಗಿದ್ದ ಸಂದರ್ಭದಲ್ಲೇ ಹೈದ್ರಾಬಾದ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ಕುರಿತು ಬಹುದೊಡ್ಡ ಹೋರಾಟ ನಡೆದಿತ್ತು. ಈ ನಿಟ್ಟಿನಲ್ಲಿ
371ನೇ ಕಲಂ ತಿದ್ದುಪಡಿ ಏಕೆ ಅಗತ್ಯ ಎಂಬುದನ್ನು ಅಂದು ಕೇಂದ್ರ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಅತ್ಯಂತ ಸಮರ್ಥವಾಗಿ ವಾದಿಸಿ, ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿಮತ್ತಿತರರ ಮನವೊಲಿಸಿ ವಿಶೇಷ ಸ್ಥಾನಮಾನ ಕೊಡಿಸಿದ್ದರು.

ರಸ್ತೆ ಅಭಿವೃದ್ಧಿಗೆ ಮುನ್ನುಡಿ: ರಾಜಧಾನಿ ಬೆಂಗಳೂರಿನಿಂದ ಅತ್ಯಂತ ದೂರದಲ್ಲಿರುವ ಹೈದ್ರಾಬಾದ ಕರ್ನಾಟಕವನ್ನು ರಸ್ತೆ ಮಾರ್ಗವಾಗಿ ಸಮೀಪಗೊಳಿಸಿದವರೂ ಧರ್ಮಸಿಂಗ್‌. ಲೋಕೋಪಯೋಗಿ ಸಚಿವರಾಗಿದ್ದಾಗ 2000 ಕೋಟಿ ರೂ. ವೆಚ್ಚದಲ್ಲಿ ಬೀದರದಿಂದ ಶ್ರೀರಂಗಪಟ್ಟಣ ರಾಜ್ಯ ರಸ್ತೆ ಕಾಮಗಾರಿಯನ್ನು ಕೈಗೆತ್ತಿಕೊಂಡರು. ಇದರಿಂದ ಜನತೆ ರಾಜಧಾನಿಯನ್ನು ಹನ್ನೆರಡು ತಾಸು ಬದಲು 8-9 ಗಂಟೆಗಳಲ್ಲೇ ತಲುಪುವಂತಾಯಿತು. ಅಷ್ಟೇ ಅಲ್ಲ, ಅಂದು ಕೇಂದ್ರದಲ್ಲಿ ಭೂಸಾರಿಗೆ ರಾಜ್ಯ ಮಂತ್ರಿಯಾಗಿದ್ದ ಮುನಿಯಪ್ಪ ಅವರನ್ನು ಕರೆಯಿಸಿ, ಹುಮನಾಬಾದ ರಾಷ್ಟ್ರೀಯ ಹೆದ್ದಾರಿಯಿಂದ ವಾಯಾ ಕಲಬುರಗಿ ಮಾರ್ಗವಾಗಿ ವಿಜಯಪುರವರೆಗೆ ರಾಷ್ಟ್ರೀಯ ಹೆದ್ದಾರಿ ಘೋಷಣೆ ಮಾಡಿಸಿದರು. ಮುಂದೆ ಆ ಕಾಮಗಾರಿಯನ್ನೂ ಕೈಗೆತ್ತಿಕೊಂಡು ತಮ್ಮ ಅಧಿಕಾರಾವಧಿಯಲ್ಲೇ ಪೂರ್ಣಗೊಳಿಸಿ ಉದ್ಘಾಟಿಸಿದರು.

ವಿಜಯಪುರದಿಂದ ಸಂಕೇಶ್ವರ ರಾಜ್ಯ ಹೆದ್ದಾರಿ ಅಭಿವೃದ್ಧಿ, ವಿಜಯಪುರ-ಬೆಳಗಾವಿ ಹೆದ್ದಾರಿ ಅಭಿವೃದ್ಧಿ, ರಾಯಚೂರು-ಲಿಂಗಸುಗೂರ ಹೆದ್ದಾರಿ ಅಭಿವೃದ್ಧಿ, ರಾಯಚೂರು-ಗಿಣಿಗೇರಾ ಹೆದ್ದಾರಿ ಅಭಿವೃದ್ಧಿ, ಕಲಬುರಗಿ ರಿಂಗ್‌ ರಸ್ತೆ, ಹೈದ್ರಾಬಾದ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಸ್ವಂತ ಕಟ್ಟಡ, ಕಲಬುರಗಿಯ ಸರ್ಕಾರಿ ಅತಿಥಿ ಗೃಹವನ್ನು ಸಂಪೂರ್ಣ ಕೆಡವಿ ಹೊಸದಾಗಿ 25 ಸುಸಜ್ಜಿತ ಕೋಣೆಗಳನ್ನು ನಿರ್ಮಿಸಿದ್ದು ಅವರು ಲೋಕೋಪಯೋಗಿ ಸಚಿವರಾಗಿದ್ದಾಗಲೇ.

ಟೀಕಾಕಾರರ ಬಾಯಿಮುಚ್ಚಿಸಿದ್ದರು: ಧರ್ಮಸಿಂಗ್‌ ಅವರು ಕರ್ನಾಟಕದ ಲೋಕೋಪಯೋಗಿ ಸಚಿವರಾಗಿ, ಹೈದ್ರಾಬಾದ ಕರ್ನಾಟಕ ಭಾಗದಲ್ಲೇ ಹೆಚ್ಚಿನ ರಸ್ತೆ ಕಾಮಗಾರಿ ಮಾಡುತ್ತಿದ್ದಾರೆಂದು ವಿಧಾನಸಭೆಯಲ್ಲಿ ಕೆಲವರು ಕೂಗೆಬ್ಬಿಸಿದಾಗ, ನೀವು ಅಧಿ ಕಾರದಲ್ಲಿದ್ದಾಗ ನಿಮ್ಮ ಭಾಗದಲ್ಲಿ ಕೆಲಸ ಮಾಡಿಕೊಂಡಿದ್ದೀರಿ.  ಈಗ ನಾನು ನಮ್ಮ ಭಾಗದಲ್ಲಿ ಇಲ್ಲದ ರಸ್ತೆಗಳನ್ನು ಮಾಡುತ್ತಿದ್ದೇನೆ, ಇದರಲ್ಲಿ ತಪ್ಪೇನಿದೆ. ನಾನು ಮಾಡಿದ್ದು ನಿಜ. ಇನ್ನಷ್ಟು ಮಾಡುತ್ತೇನೆ ಎಂದು ದಿಟ್ಟತನದಿಂದ ಉತ್ತರಿಸಿದ್ದರು.

ಹೈಕೋರ್ಟ್‌ ಪೀಠ ಸ್ಥಾಪನೆ: ಉತ್ತರ ಕರ್ನಾಟಕದಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆಗೆ ಆಗ್ರಹಿಸಿ ನಡೆಯುತ್ತಿದ್ದ ಹೋರಾಟಕ್ಕೆ ಅಂತ್ಯ ಹಾಡಿದವರೂ ಧರ್ಮಸಿಂಗ್‌. ಮುಖ್ಯಮಂತ್ರಿ ಆಗುತ್ತಲೇ ಹುಬ್ಬಳ್ಳಿಗೆ ಹೋಗಿ ಸತ್ಯಾಗ್ರಹಿಗಳನ್ನು ಭೇಟಿಯಾಗಿ ನಿಮ್ಮ ಸತ್ಯಾಗ್ರಹ ಇನ್ನು ಮುಗಿಯುತ್ತದೆ ಎಂದು ಭರವಸೆ ನೀಡಿದ್ದರು. ರಾಜ್ಯ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳನ್ನು ಭೇಟಿಯಾಗಿ, ಹೈಕೋರ್ಟ್‌ ಪೀಠ ಸ್ಥಾಪನೆಯ ಅಗತ್ಯವನ್ನು ಮನವರಿಕೆ ಮಾಡಿಕೊಟ್ಟಿದ್ದರು. ಮುಂದೆ ಕೆಲವೇ ದಿನಗಳಲ್ಲಿ ಕಲಬುರಗಿ ಮತ್ತು ಧಾರವಾಡದಲ್ಲಿ ಹೈಕೋರ್ಟ್‌ ಸಂಚಾರಿ ಪೀಠಗಳ ಕಟ್ಟಡ ಕಾಮಗಾರಿಗಳಿಗೆ ಚಾಲನೆ ನೀಡಿದರು..

ಮಳೆ ಬಂತು ಮಳೆ: ಧರ್ಮಸಿಂಗ್‌ ಮುಖ್ಯಮಂತ್ರಿ ಆಗುವುದಕ್ಕೂ ಹಿಂದಿನ ವರ್ಷಗಳಲ್ಲಿ ರಾಜ್ಯದಲ್ಲಿ ಮಳೆ ಬಾರದೇ ತೀವ್ರ ಬರಗಾಲ ವಾತಾವಿರಣವಿತ್ತು. ಇದರಿಂದ ಜನತೆ ಕಂಗಾಲಾಗಿದ್ದರು. ಈ ವರ್ಷಾನೂ ಬರಗಾಲವೇ? ಎಂದು ಆತಂಕಗೊಳಗಾಗಿದ್ದರು. ಆದರೆ ಧರ್ಮಸಿಂಗ್‌ ಅವರು ಮುಖ್ಯಮಂತ್ರಿಯಾಗಿ ಮೊದಲ ಸಲ ಕಲಬುರಗಿಗೆ ಕಾಲಿಡುತ್ತಿದ್ದಂತೆ ಜೋರಾಗಿ ಮಳೆ ಸುರಿಯಲಾರಂಭಿಸಿತು. ಈ ಮಳೆ ಎಷ್ಟು ಜೋರಾಗಿತ್ತು ಎಂದರೆ ಅವರ ಸ್ವಾಗತಕ್ಕಾಗಿ ಹಾಕಲಾದ ಮಂಟಪ ಸಹ ತೋಯ್ದು, ಮೊಣಕಾಲು ಎತ್ತರ ಮಳೆ ನೀರು ನಿಂತಿತ್ತು.

ಧರ್ಮಸಿಂಗ್‌ ಕುಟುಂಬ. . .
ನೆಲೋಗಿ (ಜೇವರ್ಗಿ): ನೆಲೋಗಿಯ ನಾರಾಯಣಸಿಂಗ್‌ ಅವರಿಗೆ ಒಟ್ಟು ಐವರು ಮಕ್ಕಳು. ಮೊದಲನೆಯವರು ಗಂಗಾರಾಮಸಿಂಗ್‌, ಎರಡನೇಯವರು ಶಿವಲಾಲಸಿಂಗ್‌ ಇವರು ಬ್ರಹ್ಮಚಾರಿಗಳು. ಮೂರನೇಯವರು ಭೀಮಸಿಂಗ್‌ (ಧರ್ಮವೀರ), ನಾಲ್ಕನೆಯವರು ಸೀತಾರಾಮ್‌ ಮತ್ತು ಐದನೇಯವರೇ ಧರ್ಮಸಿಂಗ್‌. ಧರ್ಮಸಿಂಗ್‌ ಅವರು 1936ರಲ್ಲಿ ನೆಲೋಗಿಯಲ್ಲಿ ಜನಿಸಿದರು.

1945ರಲ್ಲಿ ವಿದ್ಯಾಭ್ಯಾಸದ ಕಾರಣಕ್ಕೆ ನೆಲೋಗಿ ಬಿಟ್ಟು ಕಲಬುರಗಿಗೆ ಹೋದರು. ಅಲ್ಲಿಂದ ಈಚಿನವರೆಗೆ ಬಂದು ಹೋಗುತ್ತಿದ್ದರು. ಕಡೆ ಬಾರಿಗೆ ನೆಲೋಗಿ ಮನೆಗೆ 2016ರ ಮೇನಲ್ಲಿ ಬಂದಿದ್ದರು. ಆರೋಗ್ಯದ ಕಾರಣಕ್ಕೆ ಅಲ್ಲದೆ, ಮನೆಯವರೆಗೆ ಕಾರು ಹೋಗುವುದಿಲ್ಲ ಎನ್ನುವ ಕಾರಣಕ್ಕೆ
ಮನೆಗೆ ಹೋಗುತ್ತಿರಲಿಲ್ಲ. ಆದರೆ, ಹನುಮನ ದೇವಸ್ಥಾನಕ್ಕೆ ತಪ್ಪದೇ ಬರುತ್ತಿದ್ದರು ಎಂದು ಗಂಗಾರಾಮಸಿಂಗ್‌ ಸೊಸೆ ಹಾಗೂ ಈಗ ಮನೆಯಲ್ಲಿ ವಾಸ ಇರುವ ರಾಧಾಬಾಯಿ ಯಾಳಗಿ ನೆಲೋಗಿ “ಉದಯವಾಣಿ’ಗೆ ಮಾಹಿತಿ ನೀಡಿದರು. ಅಣ್ಣ ತಮ್ಮಂದಿರ ಪಾಲಿಗೆ ತಲಾ 25 ಎಕರೆ ಭೂಮಿ ಇದೆ. ಮನೆಗಳಿವೆ. ಈಚೆಗೆ ಜನರ ಒತ್ತಾಯಕ್ಕೆ ಮಣಿದ ಧರ್ಮಸಿಂಗ್‌ ಮನೆಯನ್ನು ನವೀಕರಣ ಮಾಡಿಸುತ್ತಿದ್ದಾರೆ. ಆ ಕೆಲಸ ಇನ್ನು ನಡೆಯುತ್ತಿದೆ. ರಾಜಕಾರಣದಲ್ಲಿ ತೊಡಗಿಕೊಂಡಿದ್ದರಿಂದ ಹಾಗೂ ಆರೋಗ್ಯದ ತೊಂದರೆಯಿಂದಾಗಿ ಒಂದು ವರ್ಷದಿಂದ ಮನೆಗೆ ಬಂದಿಲ್ಲ. ನಮಗೆಲ್ಲ ಸಹಕಾರ ನೀಡಿದ್ದಾರೆ. ನಮ್ಮಲ್ಲೂ ಅವರ ಸಹಕಾರವನ್ನು ಉಪಯೋಗ ಮಾಡಿಕೊಳ್ಳುವ ಶೈಕ್ಷಣಿಕ ಅರ್ಹತೆಯೂ ಇರಬೇಕು ಎನ್ನುತ್ತಾರೆ ರಾಧಾಬಾಯಿ ಯಾಳಗಿ ನೆಲೋಗಿ ಹಾಗೂ ಮಕ್ಕಳು.

Advertisement

Udayavani is now on Telegram. Click here to join our channel and stay updated with the latest news.

Next