Advertisement

ಹಿಂದೂ ಬಾಹುಳ್ಯವಿದ್ದರಷ್ಟೇ ಜಾತ್ಯತೀತ ಭಾರತ: ಸಚಿವ ಪ್ರಹ್ಲಾದ ಜೋಶಿ

05:45 PM Feb 28, 2022 | Team Udayavani |

ಧಾರವಾಡ: ಭಾರತ ಜಾತ್ಯತೀತವಾಗಿ ಉಳಿಯ ಬೇಕಾದರೆ ಹಿಂದೂಗಳು ಬಹುಸಂಖ್ಯಾತರಾಗಿ ಉಳಿಯಬೇಕು. ಇದರ ಜತೆಗೆ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ನರು ಯಾವುದೇ ದೇವರನ್ನು ಪೂಜಿಸಲಿ. ಆದರೆ, ಭಾರತ್‌ ಮಾತಾ ಕೀ ಜೈ, ವಂದೇ ಮಾತರಂ ಹೇಳಬೇಕಾದ ಅನಿವಾರ್ಯತೆ ಇದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

Advertisement

ಶಿವಮೊಗ್ಗದ ಭಜರಂಗ ದಳದ ಕಾರ್ಯಕರ್ತ ಹರ್ಷ ಹತ್ಯೆ ಖಂಡಿಸಿ ಕಡಪಾ ಮೈದಾನದಲ್ಲಿ ಹಿಂದೂಪರ ಸಂಘಟನೆಗಳ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ರ್ಯಾಲಿಯಲ್ಲಿ ಅವರು ಮಾತನಾಡಿದರು.

ದೇಶದಲ್ಲಿ ಇರುವವರಿಗೆಲ್ಲ ಒಂದೇ ಕಾನೂನು. ಆದರೆ ಹಿಂದೂಗಳಿಗೆ ನಾವಿಬ್ಬರು ನಮಗಿಬ್ಬರು-ಮುಸ್ಲಿಮರಿಗೆ ನಾವು ಐವರು ನಮಗೆ ಇಪ್ಪತ್ತೈದು ಎಂಬಂತಿದೆ. ರಾಜ್ಯದಲ್ಲಿ ಹಿಂದುಪರ ಸಂಘಟನೆಗಳ ಕಾರ್ಯಕರ್ತರ ಹತ್ಯೆಗಳು ಮೇಲಿಂದ ಮೇಲೆ ನಡೆಯುತ್ತಲೇ ಇವೆ. ಇದು ಪ್ರತಿಯೊಬ್ಬ ಹಿಂದೂ ಜಾಗರೂಕರಾಗುವ ಸಮಯ. ನಾವು ಎಂದೂ ಮೈಮರೆಯದಿದ್ದಾಗ ಮಾತ್ರ ಹರ್ಷ ಮತ್ತು ಇತರರ ಆತ್ಮಕ್ಕೆ ಶಾಂತಿ ಸಿಗಲಿದೆ ಎಂದರು.

ಈ ಹಿಂದೆ ಅಸ್ತಿತ್ವದಲ್ಲಿದ್ದ ಸಿಮಿ ಸಂಘಟನೆಯೇ ಇಂದು ಪಿಎಫ್‌ಐ, ಎಸ್‌ಡಿಪಿಐ ಆಗಿ ಹಿಂದೂ ಪರ ಕೆಲಸ ಮಾಡುವವರನ್ನು ಹತ್ಯೆ ಮಾಡುತ್ತಿದ್ದು, ಅವರಿಗೆ ಕಾಂಗ್ರೆಸ್‌ ಬೆಂಬಲ ನೀಡುತ್ತಿದೆ. ಏನೇ ಅಪರಾಧ ಮಾಡಿದರೂ ಮೋಟ್‌ ಬ್ಯಾಂಕ್‌ ಗಾಗಿ ಕಾಂಗ್ರೆಸ್‌ ರಕ್ಷಿಸುತ್ತದೆ ಎಂಬ ಅಭಯ ಇದೆ. ಹಿಜಾಬ್‌ ವಿಷಯವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುವಂತೆ ಕಾಂಗ್ರೆಸ್‌ ಮಾಡಿತು. ಆದ್ದರಿಂದ ಹಿಂದೂಗಳು ಜಾಗೃತರಾಗಿ ಪ್ರತಿಪಕ್ಷ ಸ್ಥಾನವೂ ಸಿಗದಂತೆ ಮನೆಗೆ ಕಳಿಸಬೇಕು ಎಂದು ಹೇಳಿದರು.

ಶ್ರೀ ಪರಮಾತ್ಮಾನಂದ ಮಹಾರಾಜ ಸ್ವಾಮೀಜಿ ಮಾತನಾಡಿ, ಸಂಚಿಗೆ ಬಲಿಯಾಗಿ ಹರ್ಷ ಹುತಾತ್ಮನಾಗಿದ್ದು, ಎಲ್ಲ ಆರೋಪಿಗಳಿಗೆ ಗಲ್ಲು ಶಿಕ್ಷೆ ಆಗಬೇಕು ಎಂದರು.

Advertisement

ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಾಳಿಕಾಯಿ ಮಾತನಾಡಿ, ಕುಂದಗೋಳದ ಕುರಿಗಾಹಿ ಮಹಿಳೆ ಕೊಲೆಯಾದಾಗ ಸಿದ್ದರಾಮಯ್ಯ ಮಾತನಾಡಲಿಲ್ಲ. ಬೇಡವಾದ ವಿಷಯಗಳಿಗೆ ಸದನದ ಕಾಲಹರಣ ಮಾಡಿದರು.ಹೆಣ್ಣು ಮಕ್ಕಳನ್ನು ರಕ್ಷಿಸಲು ಹಿಂದೂ ಸಮಾಜ ಇರುವುದು. ಕಾಂಗ್ರೆಸ್‌ನವರಿಂದ ರಾಷ್ಟ್ರಪ್ರೇಮದ ಬಗ್ಗೆ ಪಾಠ ಕೇಳುವ ಅನಿವಾರ್ಯತೆ ಇಲ್ಲ. ಗೋವು, ನಾಡಿನ ಸಂರಕ್ಷಣೆಗಾಗಿ ಹರ್ಷನ ರೀತಿ ಹೋರಾಡಲು ಸಿದ್ಧವಿದೆ ಎಂದರು.

ಶಾಸಕ ಅಮೃತ ದೇಸಾಯಿ ಮಾತನಾಡಿ, ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಪ್ರತಿಯೊಬ್ಬ ಹಿಂದೂ ಪಣ ತೊಡಬೇಕು ಎಂದರು. ಮಲ್ಲಿಕಾರ್ಜುನ ಹೊರಕೇರಿ, ಸಂಜಯ ಕಪಟಕರ, ಶಿವು ಹಿರೇಮಠ, ಶಂಕರ ಮುಗದ, ಬಸವರಾಜ ಕುಂದಗೋಳಮಠ, ಈರೇಶ ಅಂಚಟಗೇರಿ, ಸೀಮಾ ಮಸೂತಿ, ವಿಜಯಾನಂದ ಶೆಟ್ಟಿ, ಸುರೇಶ ಬೇದರೆ, ಜ್ಯೋತಿ ಪಾಟೀಲ, ರಾಜೇಶ್ವರಿ ಸಾಲಗಟ್ಟಿ, ಸುನೀಲ ಮೋರೆ, ಟಿ.ಎಸ್‌. ಪಾಟೀಲ, ಈರಣ್ಣ ಹಪ್ಪಳಿ ಇನ್ನಿತರರಿದ್ದರು. ಶ್ರೀನಿವಾಸ ಕೋಟ್ಯಾನ್‌
ನಿರೂಪಿಸಿದರು.

ಹಿಂದುತ್ವ ಮಾಯವಾದರೆ ಹಿಂದುಸ್ತಾನವು ಅಲ್ಲಾಸ್ತಾನ, ಮುಲ್ಲಾಸ್ತಾನ ಆಗಬಹುದು. ಹೀಗಾಗಿ ನಮಗೆ ಉಚಿತ ಗ್ಯಾಸ್‌ ಬೇಡ, ರಸ್ತೆ ಬೇಡ. ನಮಗೆ ಬೇಕಿರುವುದು ಹಿಂದೂ ರಾಷ್ಟ್ರ. ಅಖಂಡ ಭಾರತ ವಿಭಜನೆಯಾಗಿ 18 ರಾಷ್ಟ್ರ ಆಗಿದ್ದು, ಈಗ ಮತ್ತೆ ವಿಭಜನೆ ಆಗಲು ಬಿಡುವುದಿಲ್ಲ.
ಪರಮಾತ್ಮಾನಂದ ಮಹಾರಾಜ ಸ್ವಾಮೀಜಿ

Advertisement

Udayavani is now on Telegram. Click here to join our channel and stay updated with the latest news.

Next