ಹಾಸನ: ಚುನಾವಣೆಯಲ್ಲಿ ಎರಡು ಮತದಾನ ಹಾಕಿರುವ ಸಂಬಂಧ ಜೆಡಿಎಸ್- ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿಗೆ ಮಾತು ಬೆಳೆದು ಮಾರಾಕಾಸ್ತ್ರಗಳಿಂದ ಮಾರಾಣಾಂತಿಕ ಹಲ್ಲೆಯುಂಟಾಗಿ ಆಸ್ಪತ್ರೆ ಸೇರಿರುವ ಘಟನೆ ಜಿಲ್ಲೆಯ ದುದ್ದ ಹೋಬಳಿ ಕೋಡಿಹಳ್ಳಿಯಲ್ಲಿ ರಾತ್ರಿ ನಡೆದಿದೆ.
ಕಾಂಗ್ರೆಸ್‌ನ ಕುಮಾರ್, ವೆಂಕಟೇಶ್,ಪ್ರಕಾಶ್, ಸಿದ್ದೇಶ್, ಮಂಜೇಗೌಡ ಹಾಗೂ ಜೆಡಿಎಸ್ ಕಾರ್ಯಕರ್ತರಾದ ರವಿ. ಲೋಕೇಶ್, ಮಂಜು, ನವೀನ್, ಸಂದೀಪ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು ಹಾಸನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲೆಯ ದುದ್ದ ಹೋಬಳಿಯಲ್ಲಿ ಮತ ಚಲಾಯಿಸಿದ್ದ ಕೋಳಿ ಮಂಜ ಎಂಬಾತ ಕೋಡಿಹಳ್ಳಿಯಲ್ಲೂ ಮತ್ತೂಂದು ಬಾರಿ ಮತ ಚಾಲಾಯಿಸಲು ಹೋಗಿ ಸಿಕ್ಕಿಬಿದ್ದಿದ್ದ. ಇದನ್ನು ಚುನಾವಣಾಧಿಕಾರಿಗಳು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಈ ವಿಷಯ ಶನಿವಾರ ಸಂಜೆಯೇ ಇತ್ಯರ್ಥವಾಗಿತ್ತು.
ಆದರೆ ಇದೇ ವಿಷಯವನ್ನು ಮುಂದಿಟ್ಟುಕೊಂಡು ದುದ್ದ ಹೋಬಳಿಯ ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ಕಾರ್ಯಕರ್ತರನ್ನು ಪ್ರಶ್ನಿಸಿದ್ದಾರೆ. ಈ ಸಂಬಂಧ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಜೊತೆಗೆ ಕೈಕೈ ಮಿಲಾಯಿಸಿದ್ದಾರೆ. ಇದೇ ವೇಳೆಗೆ ಎರಡೂ ಕಡೆಯ ಕಾರ್ಯಕರ್ತರು ಮಾರಕಾಸ್ತ್ರಗಳಿಂದ ಪರಸ್ಪರ ಹಲ್ಲೆ ನಡೆಸಿದ್ದಾರೆ.
ಎರಡೂ ಪಕ್ಷಗಳ ಕಾರ್ಯಕರ್ತರಿಗೆ ಹಲ್ಲೆಯಿಂದ ತೀವ್ರಗಾಯಗಳಾಗಿದ್ದು, ಇತರ ಕಾರ್ಯಕರ್ತರ ಸಹಾಯದಿಂದ ಹಾಸನದ ಜಿಲ್ಲಾಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ. ದುದ್ದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.