ಚೆನ್ನೈ: ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ದ್ವಿತೀಯ ಸುತ್ತಿನ ಲೀಗ್ ಮುಖಾಮುಖಿ ಗುರುವಾರ ಮೊದಲ್ಗೊಳ್ಳಲಿದೆ.
ಎಲೈಟ್ “ಸಿ’ ವಿಭಾಗದಲ್ಲಿ ಕರ್ನಾಟಕ ಮತ್ತು ಜಮ್ಮು ಕಾಶ್ಮೀರ ಎದುರಾಗಲಿವೆ. “ಡಿ’ ವಿಭಾಗದಲ್ಲಿ ಮುಂಬಯಿ ಮತ್ತು ಗೋವಾ ಮುಖಾಮುಖಿಯಾಗಲಿವೆ.
ಕರ್ನಾಟಕ ಮೊದಲ ಪಂದ್ಯದಲ್ಲಿ ರೈಲ್ವೇಸ್ ವಿರುದ್ಧ ಇನ್ನಿಂಗ್ಸ್ ಮುನ್ನಡೆ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಇನ್ನೊಂದು ಪಂದ್ಯದಲ್ಲಿ ಜಮ್ಮು ಮತ್ತು ಕಾಶ್ಮೀರ ದುರ್ಬಲ ಪುದುಚೇರಿಯನ್ನು 8 ವಿಕೆಟ್‌ಗಳಿಂದ ಮಣಿಸಿತ್ತು. ಈ ಜಯದಿಂದಾಗಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದೆ. ಕಾಶ್ಮೀರವನ್ನು ಇಲ್ಲಿಂದ ಕೆಳಗಿಳಿಸಿ ಈ ಸ್ಥಾನವನ್ನು ಆಕ್ರಮಿಸಿಕೊಳ್ಳುವುದು ಮನೀಷ್ ಪಾಂಡೆ ಬಳಗದ ಗುರಿ.
ಚೆನ್ನೈಯಲ್ಲೇ ನಡೆದ ರೈಲ್ವೇಸ್ ಎದುರಿನ ಪಂದ್ಯದಲ್ಲಿ ಕರ್ನಾಟಕದ ಬ್ಯಾಟಿಂಗ್ ಭರ್ಜರಿ ಯಶಸ್ಸು ಕಂಡಿತ್ತು. ಮನೀಷ್ ಪಾಂಡೆ ಕಪ್ತಾನನ ಆಟವಾಡಿ 156 ರನ್ ಬಾರಿಸಿದರೆ, ಕೆ. ಸಿದ್ಧಾರ್ಥ್ 146 ರನ್ ಕೊಡುಗೆ ಸಲ್ಲಿಸಿದ್ದರು. ಕೃಷ್ಣಪ್ಪ ಗೌತಮ್ ಆಲ್‌ರೌಂಡ್ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದರು. ಇದೇ ಲಯದಲ್ಲಿ ಸಾಗಿದರೆ ಮೇಲುಗೈ ಖಂಡಿತ ಅಸಾಧ್ಯವಲ್ಲ.
ಜಮ್ಮು ಮತ್ತು ಕಾಶ್ಮೀರ ಕೂಡ ಬ್ಯಾಟಿಂಗ್ ಯಶಸ್ಸು ಕಂಡಿತ್ತು. ಮೊದಲ ಸರದಿಯಲ್ಲಿ ನಾಯಕ ಇಯಾನ್ ದೇವ್ ಸಿಂಗ್ (0) ಹೊರತುಪಡಿಸಿ ಅಗ್ರ ಕ್ರಮಾಂಕದ ಆಟಗಾರರೆಲ್ಲ ರನ್ ಪ್ರವಾಹ ಹರಿಸಿದ್ದರು. ಅಬ್ದುಲ್ ಸಮದ್ ಅವರ ಶತಕ (103) ಇನ್ನಿಂಗ್ಸಿನ ಆಕರ್ಷಣೆಯಾಗಿತ್ತು. ಓಪನರ್‌ಗಳಾದ ಕಮ್ರಾನ್ ಇಕ್ಬಾಲ್ (96), ಜತಿನ್ ವಾಧ್ವಾನ್ (69) 127 ರನ್ ಜತೆಯಾಟ ನಿಭಾಯಿಸಿದ್ದರು. ಶುಭಂ ಪುಂಡಿರ್ 51 ರನ್ ಕೊಡುಗೆ ಸಲ್ಲಿಸಿದ್ದರು. ಇವರೆಲ್ಲ ಮತ್ತೆ ಕ್ರೀಸ್ ಆಕ್ರಮಿಸದಂತೆ ನೋಡಿಕೊಳ್ಳುವುದು ಕರ್ನಾಟಕದ ಬೌಲರ್ ಜವಾಬ್ದಾರಿ.
ರಹಾನೆ ಮೇಲೆ ಕಣ್ಣು
ಅಹ್ಮದಾಬಾದ್: ಇದೇ ವೇಳೆ “ರಣಜಿ ಕಿಂಗ್’ ಮುಂಬಯಿ ತಂಡ ಗೋವಾವನ್ನು ಎದುರಿಸಲಿದೆ. ಸೌರಾಷ್ಟ್ರ ಎದುರಿನ ಮೊದಲ ಪಂದ್ಯದಲ್ಲಿ ಫಾಲೋಆನ್ ಹೇರಿಯೂ ಕೊನೆಯ ಒಂದು ವಿಕೆಟ್ ಉರುಳಿಸಲಾಗದೆ ಗೆಲುವಿನಿಂದ ವಂಚಿತವಾಗಿತ್ತು.
ಸೌರಾಷ್ಟ್ರ ವಿರುದ್ಧ ಸರ್ಫರಾಜ್ ಖಾನ್
ಅಮೋಘ 275 ರನ್ ಬಾರಿಸಿದ್ದರು. ಅಜಿಂಕ್ಯ ರಹಾನೆ 129 ರನ್ ಹೊಡೆದ ಬೆನ್ನಲ್ಲೇ ಶ್ರೀಲಂಕಾ ಎದುರಿನ ಟೆಸ್ಟ್ ಸರಣಿಯಲ್ಲಿ ಸ್ಥಾನ ಕಳೆದುಕೊಂಡ ಸಂಕಟಕ್ಕೆ ಸಿಲುಕಿದ್ದಾರೆ. ಗೋವಾ ವಿರುದ್ಧವೂ ಅವರು ಇಂಥದೇ ಬ್ಯಾಟಿಂಗ್ ಸಾಹಸ ತೋರ್ಪಡಿಸಬೇಕಿದೆ. ನಾಯಕ ಪೃಥ್ವಿ ಶಾ ಫಾರ್ಮ್ ಕಂಡುಕೊಳ್ಳಬೇಕಾದ ಅಗತ್ಯವಿದೆ.