Advertisement

ದ್ವಿತೀಯ ಪಿಯುಸಿ ಪರೀಕ್ಷೆ: ಪಾರದರ್ಶಕತೆಗೆ ಒತ್ತು

12:49 AM Mar 02, 2020 | Sriram |

ಮಹಾನಗರ: ದ್ವಿತೀಯ ಪಿಯುಸಿ ಪರೀಕ್ಷೆ ಸಂದರ್ಭ ಯಾವುದೇ ಅಕ್ರಮಗಳು ನಡೆಯದಂತೆ ನಿಗಾ ಇಡುವ ಸಲುವಾಗಿ ದ.ಕ.ಜಿಲ್ಲೆಯಲ್ಲಿ ವಿಶೇಷ ಪೂರ್ವ ತಯಾರಿಗಳನ್ನು ನಡೆಸಲಾಗುತ್ತಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ 24×7 ಮಾನಿಟರಿಂಗ್‌ ಸೆಲ್‌ ತೆರೆಯಲಾಗುತ್ತಿದ್ದು, ಡಿಸಿವರೇ ಖುದ್ದು ಇದನ್ನು ಗಮನಿಸಲಿದ್ದಾರೆ.

Advertisement

ದ್ವಿತೀಯ ಪಿಯುಸಿ ಪರೀಕ್ಷೆ ವಿದ್ಯಾರ್ಥಿಗಳ ಬದುಕಿನ ಮಹತ್ವದ ಘಟ್ಟ. ಅದರಂತೆ, ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಗೆ ಇನ್ನು 2 ದಿನಗಳಷ್ಟೇ ಉಳಿದಿದ್ದು, ವಿದ್ಯಾರ್ಥಿಗಳು ಅಂತಿಮ ಹಂತದ ತಯಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಮಾ. 4ರಿಂದ 23ರ ವರೆಗೆ ಪರೀಕ್ಷೆಗಳು ನಡೆಯಲಿವೆ.

ಹೀಗಿರುವಾಗ,ದ.ಕ.ಜಿಲ್ಲೆಯಲ್ಲಿಯೂ ಈ ಸಲವೂ ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿ ಜಿಲ್ಲಾಡಳಿತ, ಪದವಿ  ಪೂರ್ವ ಶಿಕ್ಷಣ ಇಲಾಖೆಯ ಪ್ರಯತ್ನವೂ ದೊಡ್ಡದಿದೆ. ಹಾಗಾಗಿ, ಪರೀಕ್ಷೆ ಸಂದರ್ಭ ಯಾವುದೇ ನಿಯಮ ಬಾಹಿರ ಚಟು ವಟಿಕೆಗಳು ಉಂಟಾಗಬಾರದೆಂದು ತಡೆಯಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಇದೇ ಮೊದಲ ಬಾರಿಗೆ 24×7ಮಾನಿ ಟರಿಂಗ್‌ ಸೆಲ್‌ನ್ನು ತೆರೆಯಲಾಗುತ್ತಿದೆ.

ಜಿಲ್ಲಾಧಿಕಾರಿಯಿಂದ ನಿಗಾ
ಈ ಸೆಲ್‌ ದಿನದ 24 ಗಂಟೆಯೂ ಕಾರ್ಯಾಚರಿಸಲಿದೆ. ಪರೀಕ್ಷೆ ಆರಂಭಕ್ಕೆ ಮುನ್ನ,ಆರಂಭವಾದ ಅನಂತರ, ಪರೀಕ್ಷೆ ಮುಗಿದ ಬಳಿಕವೂ ಸೆಲ್‌ ಕಾರ್ಯಾಚರಣೆ ನಡೆಸಲಿದೆ. ಪರೀಕ್ಷಾ ಕೇಂದ್ರಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ, ನಿಷೇಧಾಜ್ಞೆ ಮೀರುವುದು, ನಕಲು ಮಾಡುವುದು ಮುಂತಾದ ಚಟುವಟಿಕೆಗಳು ನಡೆಯದಂತೆ ತಡೆಯಲು ಮಾನಿಟರಿಂಗ್‌ ಸೆಲ್‌ನ್ನು ಈ ಬಾರಿ ತೆರೆಯಲಾಗುತ್ತಿದೆ.ಜಿಲ್ಲಾಧಿಕಾರಿಯವರೇ ಸೆಲ್‌ನಲ್ಲಿ ನಿಗಾ ಇರಿಸಲಿದ್ದಾರೆ.ಈ ಹಿಂದೆ ಸ್ಟ್ರಾಂಗ್‌ ರೂಂನಲ್ಲಿ ಮಾತ್ರ ಈ ವ್ಯವಸ್ಥೆ ಇದ್ದು, ಟ್ರೆಶರಿ ಅಧಿಕಾರಿಗಳು ನೋಡಿಕೊಳ್ಳುತ್ತಿದ್ದರು.

ಎಲ್ಲ ರೂಂಗಳಿಗೂ ಸಿಸಿಟಿವಿ
ಜಿಲ್ಲೆಯಲ್ಲಿ ಒಟ್ಟು 51 ಪರೀಕ್ಷಾ ಕೇಂದ್ರಗಳಿವೆ.ಪರೀಕ್ಷೆ ವೇಳೆ ಯಾವುದೇ ಅಕ್ರಮಗಳು ಘಟಿಸದಂತೆ ತಡೆಯುವ ಸಲುವಾಗಿ ಎಲ್ಲ ಕೇಂದ್ರಗಳಲ್ಲಿ ಪರೀಕ್ಷೆ ಬರೆಯುವ ಪ್ರತಿ ತರಗತಿ ಕೋಣೆಗೂ ಸಿಸಿಟಿವಿ ಅಳವಡಿಸಲಾಗುತ್ತಿದೆ. ಇದರಿಂದ ಪರೀಕ್ಷಾ ಪಾರ ದರ್ಶಕತೆ ಕಾಯ್ದುಕೊಳ್ಳಲು ಅನುಕೂಲ  ವಾಗಲಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ಸಕಾಲಕ್ಕೆ ತಲುಪಿಸುವ 27 ರೂಟ್‌ಗಳನ್ನು ಗುರುತಿಸಲಾಗಿದೆ. ಎಲ್ಲ ರೂಟ್‌ಗಳಲ್ಲಿ ಪ್ರಶ್ನೆಪತ್ರಿಕೆ ಹೊತ್ತು ತೆರಳುವ ವಾಹನಗಳಿಗೆ ಜಿಪಿಎಸ್‌ ಅಳವಡಿಸಲಾಗುತ್ತದೆ. ಆಯಾ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳ ಬಯೋಮೆಟ್ರಿಕ್‌ ಪಡೆದು ಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ.

ಸಿಸಿಟಿವಿಯಡಿಯಲ್ಲೇ ಪ್ರಕ್ರಿಯೆ
ಪ್ರಶ್ನೆಪತ್ರಿಕೆ ಪರೀಕ್ಷಾ ಕೇಂದ್ರಗಳಿಗೆ ಆಗಮಿಸಿದ ಬಳಿಕ ಅದನ್ನು ಸ್ವೀಕರಿಸುವುದು,ತೆಗೆದಿಡುವುದು,ಪರೀಕ್ಷೆ ಆರಂಭದ ಮುನ್ನ ಪತ್ರಿ ಕೆಗಳನ್ನು ತೆರೆಯುವುದು,ವಿತರಣೆ,ಪರೀಕ್ಷೆ ಮುಗಿದ ಬಳಿಕ ಬಂಡಲ್‌ ಮಾಡುವುದು ಸಹಿತ ಎಲ್ಲ ಪ್ರಕ್ರಿಯೆಗಳು ಸಿಸಿಟಿವಿಯ ನಿಗಾದಡಿಯಲ್ಲೇ ನಡೆಯಲಿವೆ. ಈ ಎಲ್ಲ ಪ್ರಕ್ರಿಯೆಯನ್ನು ಡಿಸಿ ಕಚೇರಿಯಲ್ಲಿರುವ ಸೆಲ್‌ನಲ್ಲಿ ವೀಕ್ಷಣೆ ಮಾಡಲಾಗುತ್ತದೆ.

ಮೂಲಸೌಕರ್ಯ ದೃಢೀಕರಣ
ಪರೀಕ್ಷಾ ಕೇಂದ್ರಗಳಲ್ಲಿ ಶೌಚಾಲಯ, ಕುಡಿಯುವ ನೀರು, ಪೀಠೊಪಕರಣ ವ್ಯವಸ್ಥೆ ಸರಿಯಾಗಿದೆಯೇ ಎಂಬ ಬಗ್ಗೆ ಈಗಾಗಲೇ ಪರಿಶೀಲಿಸಲಾಗಿದೆ. ಅಲ್ಲದೆ, ಅಲ್ಲಿನ ಮುಖ್ಯಸ್ಥರಿಂದ ಈ ಸಂಬಂಧ ದೃಢೀಕರಣ ಪತ್ರ ಪಡೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಿಪಿಎಸ್‌ ಅಳವಡಿಕೆ
ದ್ವಿತೀಯ ಪಿಯುಸಿ ಪರೀಕ್ಷೆ ಪಾರದರ್ಶಕವಾಗಿ ನಡೆಯಬೇಕೆಂಬ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಿಸಿಯವರ ನಿಗಾದಡಿಯಲ್ಲಿಯೇ ಈ ಬಾರಿ 24×7ಸೆಲ್‌ ಕಾರ್ಯಾಚರಿಸಲಿದೆ. 27 ರೂಟ್‌ಗಳಲ್ಲಿ ಸಂಚರಿಸುವ ಪ್ರಶ್ನೆಪತ್ರಿಕೆ ವಾಹನಗಳಿಗೆ ಜಿಪಿಎಸ್‌ ಅಳವಡಿ ಸಲಾಗುವುದು. ಅಧಿಕಾರಿಗಳಿಗೆ ಎಲ್ಲ ರೀತಿಯ ತರಬೇತಿಗಳನ್ನು ನೀಡಲಾಗಿದೆ.
– ವಿಷ್ಣುಮೂರ್ತಿ, ಉಪ ನಿರ್ದೇಶಕರು ಪದವಿಪೂರ್ವ ಶಿಕ್ಷಣ ಇಲಾಖೆ, ದ.ಕ.

-  ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next