Advertisement

Karnataka; ದ್ವಿತೀಯ ಪಿಯು ಪರೀಕ್ಷೆ: 18,000 ವಿದ್ಯಾರ್ಥಿಗಳು ಗೈರು

11:59 PM Mar 01, 2024 | Team Udayavani |

ಬೆಂಗಳೂರು: ದ್ವಿತೀಯ ಪಿಯುಸಿ ಕನ್ನಡ ಮತ್ತು ಅರೆಬಿಕ್‌ ಭಾಷಾ ವಿಷಯಗಳ ಪರೀಕ್ಷೆ ಶುಕ್ರವಾರ ಸುಸೂತ್ರವಾಗಿ ನಡೆಯಿತು.

Advertisement

ರಾಜ್ಯಾದ್ಯಂತ ಪರೀಕ್ಷೆಗೆ ಒಟ್ಟು 5.25 ಲಕ್ಷ ವಿದ್ಯಾರ್ಥಿಗಳು ನೋಂದಣಿಯಾಗಿದ್ದು, ಈ ಪೈಕಿ 5.07 ಲಕ್ಷ ಮಂದಿ ಪರೀಕ್ಷೆ ಬರೆದರು. ಶೇ.96.53 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 18,231 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದರು ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಶೇ.99.53 ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದರು. ದಕ್ಷಿಣ ಕನ್ನಡದಲ್ಲಿ ಶೇ.98.85, ಕೊಡಗು, ಬಾಗಲಕೋಟೆಯಲ್ಲಿ ತಲಾ ಶೇ.98.02, ಬೆಂಗಳೂರು ಗ್ರಾಮೀಣದಲ್ಲಿ ಶೇ.97.47, ಬೆಂಗಳೂರು ಉತ್ತರದಲ್ಲಿ ಶೇ.97.25 ಮತ್ತು ಬೆಂಗಳೂರು ದಕ್ಷಿಣದಲ್ಲಿ ಶೇ.96.07 ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದರು. ಬೀದರ್‌ನಲ್ಲಿ ಶೇ.91.64 ಮಕ್ಕಳು ಮಾತ್ರ ಪರೀಕ್ಷೆ ಬರೆದರು.

ರಾಜ್ಯಾದ್ಯಂತ 1,124 ಪರೀಕ್ಷಾ ಕೇಂದ್ರಗಳನ್ನು ನಿಗದಿಪಡಿಸಲಾಗಿದ್ದು, 540 ಜಿಲ್ಲಾ ಜಾಗೃತ ದಳ ಮತ್ತು 3,108 ವಿಶೇಷ ಜಾಗೃತ ದಳದ ಸದಸ್ಯರನ್ನು ನೇಮಕ ಮಾಡಲಾಗಿದೆ.

ಪರೀಕ್ಷಾ ಕೇಂದ್ರಕ್ಕೆ ಶಿಕ್ಷಣ ಸಚಿವರ ಭೇಟಿ
ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಅವರು ಬೆಂಗಳೂರಿನ ಮಲ್ಲೇಶ್ವರ 13ನೇ ಅಡ್ಡರಸ್ತೆಯಲ್ಲಿರುವ ಎಚ್‌.ವಿ. ನಂಜುಂಡಯ್ಯ ಸ್ಮಾರಕ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದರು. ಪ್ರಸಕ್ತ ಸಾಲಿನಲ್ಲಿ ಮೂರು ಪರೀಕ್ಷೆ ನಡೆಸುತ್ತಿರುವುದು ಖುಷಿ ತಂದಿದೆ ಎಂದು ವಿದ್ಯಾರ್ಥಿಗಳು ಹೇಳಿಕೊಂಡಿದ್ದಾರೆ. ಸಚಿವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next