Advertisement

ಎರಡನೇ ಹಂತದ ಹಳ್ಳಿ ಫೈಟ್: ಕರಾವಳಿಯಲ್ಲಿ ಮುಂಜಾನೆಯಿಂದಲೇ ಉತ್ಸಾಹ ತೋರಿದ ಮತದಾರರು

09:07 AM Dec 27, 2020 | keerthan |

ಮಣಿಪಾಲ: ಗ್ರಾಮ ಪಂಚಾಯತಿ ಚುನಾವಣೆಯ ಎರಡನೇ ಹಂತದ ಮತದಾನ ಇಂದು ನಡೆಯುತ್ತಿದೆ. ಬೆಳಗ್ಗೆ ಏಳು ಗಂಟೆಗೆ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಸಂಜೆ ಐದು ಗಂಟೆಯವರೆಗೆ ನಡೆಯಲಿದೆ. ಕರಾವಳಿ ಜಿಲ್ಲೆಗಳಲ್ಲಿ ಮತದಾರರು ಬೆಳಗ್ಗೆಯಿಂದಲೇ ಮತಗಟ್ಟೆಗಳತ್ತ ಹೆಜ್ಜೆ ಹಾಕುತ್ತಿದ್ದಾರೆ.

Advertisement

ಎರಡನೇ ಹಂತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಪುತ್ತೂರು, ಕಡಬ ಹಾಗೂ ಸುಳ್ಯ ತಾಲೂಕುಗಳ 114 ಗ್ರಾಮ ಪಂಚಾಯತ್‌ಗಳ 1,500 ಸ್ಥಾನಗಳಿಗೆ ಮತ್ತು ಉಡುಪಿ ಜಿಲ್ಲೆಯ ಕುಂದಾಪುರ, ಕಾರ್ಕಳ, ಕಾಪು ತಾಲೂಕಿನ 86 ಗ್ರಾ.ಪಂ.ಗಳ 1,178 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ.

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ,27 ಗ್ರಾ.ಪಂ ಗಳಿಗೆ ಚುನಾವಣೆ ನಡೆಯುತಿದೆ. ಕಾರ್ಕಳ ತಾಲೂಕಿನ ಅತಿ ಹೆಚ್ಚು ಸದಸ್ಯರನ್ನು ಹೊಂದಿದ ಕುಕ್ಕುಂದೂರು ಗ್ರಾ.ಪಂ 1 ನೇ ಮತಗಟ್ಟೆಯಲ್ಲಿ ಬೆಳಗ್ಗೆ ಮತದಾನ ಪ್ರಕ್ರಿಯೆ ಆರಂಭಗೊಂಡಿತು. ಥರ್ಮಾಲ್ ಸ್ರೀನಿಂಗ್ ತಪಾಸಣೆ, ಸ್ಯಾನಿಟೈಸರ್ ಹಾಕಿ ಮತದಾನಕ್ಕೆ ಒಳಬಿಡಲಾಗುತ್ತಿದೆ. ಬೆಳಗ್ಗೆಯೇ ಮತದಾರರು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡರು.

ಕಟಪಾಡಿ: ಇಲ್ಲಿನ ಎಸ್.ವಿ.ಎಸ್ ಶಾಲಾ ಮತಗಟ್ಟೆಯಲ್ಲಿ ಮತದಾನ ಆರಂಭಗೊಂಡಿದ್ದು ಮತದಾರರು ಹೆಚ್ಚು ಉತ್ಸಾಹದಿಂದ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿರುವುದು ಕಂಡುಬಂದಿದೆ .ಅದೇ ರೀತಿ ಪಕ್ಷದ ಅಭ್ಯರ್ಥಿಗಳು ಮತದಾರರನ್ನು ಓಲೈಸುವಲ್ಲಿ ನಿರತರಾಗಿರುವುದು ಕಂಡು ಬಂತು. ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾಂಜಲಿ ಎಂ. ಸುವರ್ಣ ಹಾಗೂ ಶಿಲ್ಪ ಜಿ. ಸುವರ್ಣ ಇವರು ಕಟಪಾಡಿಯಲ್ಲಿ ಮತ ಚಲಾಯಿಸಿದರು.

Advertisement

ಚಿತ್ರನಟಿ, ಕಿರುತೆರೆ ನಟಿ, ಕಟಪಾಡಿ ಗ್ರಾಮ ಪಂಚಾಯತ್ ಸದಸ್ಯತನಕ್ಕೆ ಉಮೇದುವಾರ ಅಭ್ಯರ್ಥಿಯಾಗಿರುವ ಪವಿತ್ರ ಆರ್ ಶೆಟ್ಟಿ ಅವರು ತಮ್ಮ ಮತವನ್ನು ಚಲಾಯಿಸಿದರು.

ಕುಂದಾಪುರ ತಾಲೂಕಿನಲ್ಲಿ ಇಂದು ಮತದಾನ ನಡೆಯುತ್ತಿದೆ. ತೆಕ್ಕಟ್ಟೆ, ಕಟ್ ಬೆಲ್ತೂರಿನ ಬಾಳಿಕೆರೆ ಮತಗಟ್ಟೆಯಲ್ಲಿ‌ ಬೆಳಗ್ಗೆಯಿಂದ ಉತ್ತಮ‌ ಮತದಾನ ನಡೆಯುತ್ತಿದೆ. ಕುಂದಾಪುರ ತಾಲೂಕಿನ ಉಳ್ತೂರು ಮತಗಟ್ಟೆ ಸಂಖ್ಯೆ142 ರಲ್ಲಿ85ರ ವಯೋವೃದ್ದೆ ಶೇಷಮ್ಮ ಶೆಡ್ತಿ ಅವರು ಮತದಾನ ಮಾಡಿದರು.

ದಕ್ಷಿಣ ಕನ್ನಡ ಜಿಲ್ಲೆಯ ಅರಂತೋಡು, ಸಂಪಾಜೆ, ಮರ್ಕಂಜ, ಗ್ರಾಮ ಪಂಚಾಯತ್ ಗಳಿಗೆ ಇಂದು ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭಗೊಂಡಿದೆ.

ಬೆಳ್ತಂಗಡಿ ತಾಲೂಕಿನಲ್ಲೂ ಇಂದು ಗ್ರಾ.ಪಂ ಚುನಾವಣೆ ಮತದಾನ ನಡೆಯುತ್ತಿದ್ದು, ಶಾಸಕ ಹರೀಶ್ ಪೂಂಜ ಗರ್ಡಾಡಿ ಶಾಲೆಯಲ್ಲಿ ಮತ ಚಲಾಯಿಸಿದರು.

ಮದುವೆ ಸಂಭ್ರಮದ ಮಧ್ಯೆ ಬಂದು ಮತಹಾಕಿದ ಸಹೋದರಿಯರು

ಮುಂಡಾಜೆ ಗ್ರಾಮದ ಕೂಳೂರು ನಿವಾಸಿ ಇಬ್ರಾಹಿಂ ಕೂಳೂರು ಅವರ ಇಬ್ಬರು ಮಕ್ಕಳಾದ ಝುಹುರಾ ಮತ್ತು ಖೈರುನ್ನಿಸಾ ಸಹೋದರಿಯರು ತಮ್ಮದೇ ಮದುವೆ ಸಂಭ್ರಮದ ಮಧ್ಯೆ ಮುಂಡಾಜೆ ಗ್ರಾಮದ 103 ಭಾಗ ಸಂಖ್ಯೆಯ ಮತಕೇಂದ್ರಕ್ಕೆ ಆಗನಿಸಿ ತಮ್ಮ ಹಕ್ಕು ಚಲಾಯಿಸುವ ಮೂಲಕ ಸಾಮಾಜಿಕ‌ ಬದ್ಧತೆ ಮೆರೆದರು.

ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮ ಪಂಚಾಯತ್ ನ ಸಂಕಲಕರಿಯ ವಾರ್ಡ್ ನಲ್ಲಿ ಒಂದು ಗಂಟೆಯಲ್ಲಿ ದಾಖಲೆಯ55 ಮಂದಿ ಮತ ಚಲಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next