ಬೆಂಗಳೂರು: ಕೋವಿಡ್ ಎರಡನೇ ಅಲೆಯ ಆತಂಕ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಶಾಲೆ ಆರಂಭಿಸಬೇಕೇ ಅಥವಾ ಬೇಡವೇ ಎಂಬ ಸಂದಿಗ್ದತೆಗೆ ರಾಜ್ಯ ಸರ್ಕಾರ ಸಿಲುಕಿದೆ.
ಬಹುತೇಕರು ಪ್ರೌಢಶಾಲೆ ಹಾಗೂ ಪಿಯುಸಿ ತರಗತಿಯನ್ನು ಸುರಕ್ಷತಾ ಕ್ರಮದೊಂದಿಗೆ ಆರಂಭಿಸಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೇ ಆಧಾರದಲ್ಲಿ ಇಲಾಖೆ ವರದಿಯನ್ನು ಸರ್ಕಾರಕ್ಕೆ ಒಪ್ಪಿಸಿದೆ. ಇದರ ನಡುವೆಯೇ ಸೋಮವಾರ ಸಿಎಂ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಶಿಕ್ಷಣ ಸಚಿವರು, ಆರೋಗ್ಯ ಸಚಿವರು, ಎರಡೂ ಇಲಾಖೆಯ ಅಧಿಕಾರಿಗಳು ಸಭೆ ನಡೆಸಲಿದ್ದು ಅಲ್ಲಿ ಅಂತಿಮ ತೀರ್ಮಾನವಾಗುವ ಸಂಭವವಿದೆ.
ಕೊರೊನಾ ಸೋಂಕು ಕಡಿಮೆಯಾಗುತ್ತಿದೆ ಎನ್ನುವಷ್ಟರಲ್ಲಿ ಎರಡನೇ ಅಲೆ ಆಂತಕ ಹುಟ್ಟುಹಾಕಿದೆ. ಹರಿಯಾಣ ಸರ್ಕಾರ ನವೆಂಬರ್ ಅಂತ್ಯದ ವರೆಗೂ ಹಾಗೂ ಮಹಾರಾಷ್ಟ್ರ ಸರ್ಕಾರ ಡಿಸೆಂಬರ್ ಅಂತ್ಯದ ವರೆಗೂ ಶಾಲಾರಂಭ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಕರ್ನಾಟಕ ಸರ್ಕಾರ ಶಾಲಾರಂಭದ ಬಗ್ಗೆ ಈವರೆಗೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಆದರೆ, ಶಾಲಾರಂಭಕ್ಕೆ ಸಂಬಂಧಿಸಿದಂತೆ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಆರೋಗ್ಯ ಇಲಾಖೆ ಮತ್ತು ಕೋವಿಡ್ ಕಾರ್ಯಾಪಡೆಯ ತಜ್ಞರ ಸಲಹೆಯಂತೆ ಎಸ್‌ಒಪಿಯನ್ನು ತಯಾರಿಸಿಕೊಂಡಿದೆ.
ಇದನ್ನೂ ಓದಿ:ನಾನಿ-ನಜ್ರಿಯ ನಟನೆಯ ‘ಅಂಟೆ ಸುಂದರಾನಿಕಿ’ ಚಿತ್ರದ ಟೈಟಲ್ ಟೀಸರ್ ರಿಲೀಸ್
ರಾಜ್ಯದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಕಾಲೇಜು, ಡಿಪ್ಲೊಮಾ, ಎಂಜಿನಿಯರಿಂಗ್ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ನ.17ರಿಂದಲೇ ಭೌತಿಕ ತರಗತಿ ಆರಂಭವಾಗಿದೆ. ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ಎಲ್ಲ ಸುರಕ್ಷತಾ ಕ್ರಮದೊಂದಿಗೆ ಕಾಲೇಜು ಆರಂಭಿಸಿದ್ದರೂ ಶೇ.15ರಷ್ಟು ವಿದ್ಯಾರ್ಥಿಗಳೂ ಕಾಲೇಜಿಗೆ ಬರುತ್ತಿಲ್ಲ.
ಶಾಲಾರಂಭಕ್ಕೆ ಸಂಬಂಧಿಸಿದಂತೆ ಈವರೆಗೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಸೋಮವಾರ ಮುಖ್ಯಮಂತ್ರಿಗಳ ಜತೆ ಈ ವಿಚಾರ ಚರ್ಚೆ ಮಾಡಲಿದ್ದೇವೆ. ಕೊರೊನಾ ಎರಡನೇ ಅಲೆ, ಬೇರೆ ರಾಜ್ಯಗಳ ಸ್ಥಿತಿಗತಿಯ ಬಗ್ಗೆಯೂ ಚರ್ಚೆ ನಡೆಯಲಿದೆ. ಆರೋಗ್ಯ ಇಲಾಖೆಯ ಸಲಹೆಯನ್ನು ಪಡೆಯಲಿದ್ದೇವೆ.
– ಎಸ್.ಸುರೇಶ್ ಕುಮಾರ್, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ