ಗುವಾಹಟಿ: ಮಾಂಸಕ್ಕಾಗಿ ಗೋ ಮಾರಾಟ ನಿಷೇಧಿಸಿದ ಕೇಂದ್ರ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಮೇಘಾಲಯ ರಾಜ್ಯದಲ್ಲಿ ರಾಜಕೀಯವಾಗಿ ಭಾರೀ ಹಿನ್ನಡೆ ಉಂಟಾಗ ತೊಡಗಿದೆ. ಕೇಂದ್ರದ ಮಾಂಸಕ್ಕಾಗಿ ಗೋ ಮಾರಾಟ ನಿಷೇಧದ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿ ಮತ್ತೊಬ್ಬ ಬಿಜೆಪಿ ಮುಖಂಡ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಮೇಘಾಲಯ ಉತ್ತರ ಗಾರೋ ಹಿಲ್ಸ್ ಬಿಜೆಪಿ ಜಿಲ್ಲಾಧ್ಯಕ್ಷ ಬಾಚು ಮರಾಕ್ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಕೇಂದ್ರದ ಬಿಜೆಪಿ ಸರ್ಕಾರ ಜಾತ್ಯತೀತ ರಹಿತ ಸಿದ್ಧಾಂತವನ್ನು ಮೇಘಾಲಯ ಜನರ ಮೇಲೆ ಹೇರುವ ಮೂಲಕ ನಮ್ಮ ಆಹಾರ ಪದ್ಧತಿ ಮೇಲೆ ಹೊಡೆತ ನೀಡಿರುವುದಾಗಿ ಮರಾಕ್ ಆರೋಪಿಸಿದ್ದಾರೆ.
ಗೋ ಹತ್ಯೆ ನಿಷೇಧದ ಆದೇಶ ವಿರೋಧಿಸಿ ಇತ್ತೀಚೆಗಷ್ಟೇ ಪಶ್ಚಿಮ ಗಾರೋ ಹಿಲ್ಸ್ ನ ಬಿಜೆಪಿ ಜಿಲ್ಲಾಧ್ಯಕ್ಷ ಬರ್ನಾಡ್ ಮರಾಕ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಭಾರತೀಯ ಜನತಾ ಪಕ್ಷ ಸಂಪ್ರದಾಯ ಹಾಗೂ ಸ್ಥಳೀಯ ಜನರ ಸಂಸ್ಕೃತಿಯನ್ನು ಗೌರವಿಸುವುದಿಲ್ಲ ಎಂದು ದೂರಿದ್ದರು.
ನಾನೊಬ್ಬ ಜವಾಬ್ದಾರಿಯುತ ಮುಖಂಡನಾಗಿದ್ದು, ಯಾವುದೇ ಕಾರಣಕ್ಕೂ ಬಿಜೆಪಿ ಜಾತ್ಯತೀತ ರಹಿತ ಸಿದ್ಧಾಂತವನ್ನು ಹೇರುವ ಮೂಲಕ ಜನರನ್ನು ದಿಕ್ಕು ತಪ್ಪಿಸಲು ಬಿಡಲ್ಲ. ಹಾಗಾಗಿ ಮೇಘಾಲಯ ರಾಜ್ಯದ ಜನತೆಗೆ ಗೋ ಹತ್ಯೆ ನಿಷೇಧ ಒಪ್ಪಲು ಸಾಧ್ಯವಿಲ್ಲ ಎಂದು ಮರಾಕ್ ಐಎಎನ್ ಎಸ್ ಜೊತೆ ಮಾತನಾಡುತ್ತ ತಿಳಿಸಿದ್ದಾರೆ.
ಗೋ ಮಾಂಸ ನಮ್ಮ ಸಂಪ್ರದಾಯದ ಆಹಾರಗಳಲ್ಲಿ ಒಂದಾಗಿದೆ. ಆ ನಿಟ್ಟಿನಲ್ಲಿ ಜನರ ಆಹಾರ ಪದ್ಧತಿಗೆ ನಿರ್ಬಂಧ ಹೇರಲು ಸರ್ಕಾರಕ್ಕೆ ಅಧಿಕಾರವಿಲ್ಲ. ಇಂತಹ ಹೇರಿಕೆಯ ನಡೆಗಳು ನಿಜಕ್ಕೂ ಜನರ ವಿಶ್ವಾಸವನ್ನು ಕಳೆದುಕೊಳ್ಳುವಂತೆ ಮಾಡಲಿದೆ ಎಂದು ಅವರು ಹೇಳಿದರು.