ಬೆಂಗಳೂರು: ಜನರ ಅಹವಾಲು, ಸಮಸ್ಯೆಗಳನ್ನು ತಾಲೂಕು, ಜಿಲ್ಲಾ ಮಟ್ಟದಲ್ಲಿಯೇ ಬಗೆಹರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದಾರೆ. ಅದಕ್ಕಾಗಿ ಸೆ.25ರಿಂದ ಪ್ರತಿ ತಿಂಗಳು ಆಯಾ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ “ಜನತಾ ದರ್ಶನ’ ನಡೆಸಲು ಆದೇಶ ನೀಡಿದ್ದಾರೆ.
ಸಚಿವರು ಹಾಗೂ ಜನಪ್ರತಿನಿಧಿಗಳ ಸಮನ್ವಯ ಸಾಧಿಸಿಕೊಂಡು ಜಿಲ್ಲಾಡಳಿತ ಸ್ಥಳ ನಿಗದಿಪಡಿಸಬೇಕು. ನಾಗರಿಕರಿಗೆ ಈ ಬಗ್ಗೆ ಮುಂಚಿತವಾಗಿಯೇ ಮಾಹಿತಿ ನೀಡಬೇಕು. ಜನತಾ ದರ್ಶನ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಮತ್ತು ಪ್ರತಿ ಇಲಾಖೆ ಅಧಿಕಾರಿಗಳೂ ಹಾಜರಿರಬೇಕು. ಸಾರ್ವಜನಿಕರಿಂದ ಸ್ವೀಕೃತವಾಗುವ ಮನವಿ ಅರ್ಜಿಗಳನ್ನು ಚಾಲ್ತಿಯಲ್ಲಿರುವ ಸಾರ್ವಜನಿಕ ಕುಂದು ಕೊರತೆ ನಿವಾರಣೆ ವ್ಯವಸ್ಥೆ ಐಪಿಜಿಆರ್‌ಎಸ್ ತಂತ್ರಾಂಶದಲ್ಲಿ ದಾಖಲಿಸಬೇಕು. ಅರ್ಜಿಗಳ ವಿಲೇವಾರಿಯನ್ನು ಆದ್ಯತೆಯಲ್ಲಿ ನಿರ್ವಹಿಸಬೇಕು ಎಂದು ಮುಖ್ಯಮಂತ್ರಿ ಸೂಚಿಸಿದ್ದಾರೆ.
ಸಂಬಂಧಿಸಿದ ಅರ್ಜಿಗಳನ್ನು ಬಹಳ ಜಾಗರೂಕತೆ, ಸಹಾನುಭೂತಿಯಿಂದ ಪರಿಶೀಲಿಸಿ ನಿಗದಿತ ಅವಧಿಯೊಳಗೆ ನಿಯಮಾನುಸಾರ ಪರಿಹಾರೋಪಾಯ ಒದಗಿಸುವ ಕುರಿತು ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಜಿಲ್ಲಾಧಿಕಾರಿಗಳು ಪ್ರತಿ ತಿಂಗಳು ಜಿಲ್ಲಾ ಮಟ್ಟದಲ್ಲಿ ಮತ್ತು 15 ದಿನಕ್ಕೊಮ್ಮೆ ಜಿಲ್ಲೆಯ ಒಂದು ತಾಲೂಕಿನಲ್ಲಿ ಜನತಾ ದರ್ಶನ ಮಾಡಬೇಕು ಎಂದು ಸಿಎಂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ| ರಜನೀಶ್ ಗೋಯೆಲ್ ತಿಳಿಸಿದ್ದಾರೆ.
ರಾಜ್ಯದ ವಿವಿಧ ಭಾಗಗಳಿಂದ ಜನರು ಬೆಂಗಳೂರಿಗೆ ಬಂದು ಸಣ್ಣ ಸಮಸ್ಯೆ ಗಳಿಗೂ ಮುಖ್ಯಮಂತ್ರಿಗಳನ್ನು ಭೇಟಿ ಮಾಡುವುದನ್ನು ತಪ್ಪಿಸಲು ಈ ವ್ಯವಸ್ಥೆ ಅನುಕೂಲವಾಗಲಿದೆ. ಈ ಕ್ರಮದಿಂದಾಗಿ ನೂರಾರು ಮಂದಿ ಜನರಿಗೆ ಬೆಂಗಳೂರಿಗೆ ಆಗಮಿಸುವ ಕಷ್ಟವೂ ತಪ್ಪಲಿದೆ ಎಂಬ ಆಶಯವನ್ನೂ ಸರಕಾರ ಹೊಂದಿದೆ.