ಮುಂಬೈ: ಕಂಪನಿಯ ಹಣವನ್ನು ಬೇರೆ ಉದ್ದೇಶಕ್ಕೆ ಬಳಸಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಮಾರುಕಟ್ಟೆ ನಿಯಂತ್ರಕ ಸೆಬಿ(SEBI)ಯು ಕೈಗಾರಿಕೋದ್ಯಮಿ ಅನಿಲ್ ಅಂಬಾನಿ ಹಾಗೂ ಇತರ 24 ಘಟಕಗಳನ್ನು ಸೆಕ್ಯೂರಿಟೀಸ್ ಮಾರುಕಟ್ಟೆಯಿಂದ ಐದು ವರ್ಷಗಳ ಕಾಲ ನಿಷೇಧಿಸಿ, 25 ಕೋಟಿ ರೂಪಾಯಿ ದಂಡ ವಿಧಿಸಿರುವುದಾಗಿ ವರದಿ ತಿಳಿಸಿದೆ.
ಅನಿಲ್ ಅಂಬಾನಿಗೆ 25 ಕೋಟಿ ರೂಪಾಯಿ ದಂಡ ವಿಧಿಸಿರುವ ಸೆಬಿ ಸೆಕ್ಯೂರಿಟೀಸ್ ಮಾರುಕಟ್ಟೆಯ ಯಾವುದೇ ಅಸೋಸಿಯೇಶನ್ ಜತೆ ವ್ಯವಹಾರ ನಡೆಸದಂತೆ 5 ವರ್ಷಗಳ ಕಾಲ ನಿಷೇಧ ಹೇರಿದೆ. ಪಟ್ಟಿ ಮಾಡಲ್ಪಟ್ಟಿರುವ ಕಂಪನಿಯಲ್ಲಿ ನಿರ್ದೇಶಕರಾಗಿ ಆಗಲಿ ಅಥವಾ ಇತರ ಯಾವುದೇ ಹುದ್ದೆಯನ್ನು ಅಲಂಕರಿಸದಂತೆ ನಿರ್ಬಂಧ ವಿಧಿಸಿದೆ.
ಹೆಚ್ಚುವರಿಯಾಗಿ ರಿಲಯನ್ಸ್ ಹೋಮ್ ಫೈನಾನ್ಸ್ ಅನ್ನು ಸೆಕ್ಯೂರಿಟೀಸ್ ಮಾರುಕಟ್ಟೆಯಿಂದ ಆರು ತಿಂಗಳು ಕಾಲ ನಿರ್ಬಂಧಿಸಿದ್ದು, ಆರು ಲಕ್ಷ ರೂಪಾಯಿ ದಂಡ ವಿಧಿಸಿದೆ. ಸೆಬಿಯ 222 ಪುಟಗಳ ಅಂತಿಮ ಆದೇಶದಲ್ಲಿ, ಅನಿಲ್ ಅಂಬಾನಿ ಮತ್ತು ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್ ನ ಉನ್ನತ ನಿರ್ದೇಶಕರು ಆರ್ ಎಚ್ ಎಫ್ ಎಲ್ ನ ಹಣವನ್ನು ವಂಚನೆಯ ಸ್ಕೀಮ್ ಗಳಿಗೆ ಬಳಸಿಕೊಂಡಿರುವುದಾಗಿ ತಿಳಿಸಿದೆ.
ಇದರ ಹೊರತಾಗಿಯೂ RHFLನ ಆಡಳಿತ ನಿರ್ದೇಶಕರು ಇಂತಹ ಕಾರ್ಯವನ್ನು ನಿಲ್ಲಿಸುವಂತೆ ಸ್ಪಷ್ಟ ಸೂಚನೆ ನೀಡಿದ್ದರು ಕೂಡಾ, ಆಡಳಿತ ಮಂಡಳಿ ಸೂಚನೆ ಪಾಲಿಸಲು ನಿರಾಕರಿಸಿರುವುದಾಗಿ ಸೆಬಿ ಆದೇಶದಲ್ಲಿ ಉಲ್ಲೇಖಿಸಿದೆ.