Advertisement

ವಾರಿಯರ್ಸ್‌ ಮಕ್ಕಳಿಗೆ ಸೀಟು ಮೀಸಲು ಶ್ಲಾಘನೀಯ ಹೆಜ್ಜೆ

11:08 PM Nov 20, 2020 | mahesh |

ಕೋವಿಡ್‌ ವಿರುದ್ಧದ ಹೋರಾಟ ಇನ್ನೂ ಮುಂದುವರಿದೇ ಇದೆ. ಈ ಹೋರಾಟದಲ್ಲಿ ಕೇಂದ್ರ-ರಾಜ್ಯ ಸರಕಾರಗಳು, ವಿಜ್ಞಾನ ಹಾಗೂ ಆರೋಗ್ಯ ವಲಯ ಪಡುತ್ತಿರುವ ಪರಿಶ್ರಮ ಅಷ್ಟಿಷ್ಟಲ್ಲ. ಆದರೆ, ಈ ಹೋರಾಟದ ಬಹುಪಾಲು ಶ್ರೇಯಸ್ಸು ಸಲ್ಲಬೇಕಿರುವುದು ಕೋವಿಡ್‌-19 ವಿರುದ್ಧದ ಸಮರದಲ್ಲಿ ಮುಂಚೂಣಿಯಲ್ಲಿ ನಿಂತು ಸೆಣಸುತ್ತಿರುವ ಕೋವಿಡ್‌ ವಾರಿಯರ್‌ಗಳಿಗೆ.

Advertisement

ವೈದ್ಯರು, ಆಶಾ ಕಾರ್ಯಕರ್ತೆಯರು, ನರ್ಸ್‌ಗಳು, ದಿನಗೂಲಿ ನೌಕರರು…ಹೀಗೆ ಕೋವಿಡ್‌ ವಾರಿಯರ್ಸ್‌ಗಳೆಂದು ಕರೆಸಿಕೊಳ್ಳುತ್ತಿರುವವರ ವ್ಯಾಪ್ತಿ ದೊಡ್ಡದೇ ಇದೆ. ಲಾಕ್‌ಡೌನ್‌ ಆಗಿ ದೇಶಕ್ಕೇ ದೇಶವೇ ಸ್ಥಗಿತಗೊಂಡರೂ ಇವರು ತಿಂಗಳಾನುಗಟ್ಟಲೆ, ಹಗಲು ರಾತ್ರಿ ತಮ್ಮ ಕರ್ತವ್ಯ ನಿಭಾಯಿಸಿದ್ದಾರೆ. ನಿಸ್ಸಂಶಯವಾಗಿಯೂ ದೇಶ ಈ ಹೋರಾಟಗಾರರಿಗೆ ಋಣಿಯಾಗಿದೆ, ಋಣಿಯಾಗಿ ಇರಲೇಬೇಕು. ದುರಂತವೆಂದರೆ ಈ ಸಮರದಲ್ಲಿ ಸೋಂಕಿಗೀಡಾಗಿ ಪ್ರಾಣ ಕಳೆದುಕೊಂಡವರ ಸಂಖ್ಯೆಯೂ ಬಹಳಷ್ಟಿದೆ.

ಅವರ ತ್ಯಾಗಕ್ಕೆ ಕೃತಜ್ಞತೆಯ ರೂಪದಲ್ಲಿ ಕರ್ನಾಟಕವೂ ಸೇರಿದಂತೆ ಬಹುತೇಕ ರಾಜ್ಯಗಳು ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಹಾಗೂ ಇತರ ನೆರವಿನ ಯೋಜನೆಗಳನ್ನು ಘೋಷಿಸಿವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಈಗ ಕೊರೊನಾ ವಾರಿಯರ್‌ ಆಗಿ ಜೀವ ತ್ಯಜಿಸಿದವರ ಮಕ್ಕಳಿಗೆ ವಿಶೇಷ ಸವಲತ್ತು ಒದಗಿಸಲು ನಿರ್ಧರಿಸಿದೆ. ಈ ಮಕ್ಕಳು ಪ್ರಸಕ್ತ ಸಾಲಿನಲ್ಲಿ ನೀಟ್‌ ಬರೆದು ಎಂಬಿಬಿಎಸ್‌, ಬಿಡಿಎಸ್‌ ಕೋರ್ಸ್‌ಗೆ ಸೇರಲು ಇಚ್ಛಿಸುತ್ತಿದ್ದರೆ, ಅವರಿಗೆ ಕೇಂದ್ರ ಸರಕಾರದ ಕೋಟಾದಲ್ಲಿ ಐದು ವೈದ್ಯಕೀಯ ಸೀಟುಗಳನ್ನು ಮೀಸಲಾಗಿ ಇರಿಸುವ ನಿರ್ಧಾರ ಪ್ರಕಟಿಸಿದೆ. 2020-2021ನೇ ಸಾಲಿನ ಶೈಕ್ಷಣಿಕ ವರ್ಷದಿಂದಲೇ ಹೊಸ ನಿಯಮ ಜಾರಿಗೆ ಬರಲಿದ್ದು, ಆಶಾಕಾರ್ಯಕರ್ತೆಯರು, ನರ್ಸ್‌ಗಳು, ದಿನಗೂಲಿ ನೌಕರರು. ರಾಜ್ಯ ಕೇಂದ್ರದ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸಂಸ್ಥೆಗಳಲ್ಲಿ ತಾತ್ಕಾಲಿಕ ಮತ್ತು ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವವರನ್ನು ವಾರಿಯರ್ಸ್‌ ಎಂದು ಕೇಂದ್ರ ಸರಕಾರ ನಿಗದಿಪಡಿಸಿದೆ.

ಇದು ನಿಜಕ್ಕೂ ಶ್ಲಾಘನೀಯ ಹೆಜ್ಜೆಯೇ ಸರಿ. ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ನಿಧನಹೊಂದಿದವರು ಮತ್ತೆ ಹಿಂದಿರುಗಿ ಬರುವುದಿಲ್ಲವಾದರೂ, ಅವರ ತ್ಯಾಗ ವ್ಯರ್ಥವಲ್ಲ ಎಂಬ ಸಂದೇಶವನ್ನು ಕಳುಹಿಸಿದಂತಾಗಿದೆ. ಈ ಆದೇಶ ಹೊರಬಿದ್ದ ಅನಂತರ, ಇಂಥ ಸವಲತ್ತನ್ನು ಕೇವಲ ವೈದ್ಯಕೀಯ ಶಿಕ್ಷಣಕ್ಕೆ ಮೀಸಲಾಗಿಡದೇ, ಎಂಜಿನಿಯರಿಂಗ್‌ನಂಥ ಕ್ಷೇತ್ರಗಳಿಗೂ ವಿಸ್ತರಿಸಬೇಕೆಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಚರ್ಚೆ ನಡೆಸಿ, ಶೀಘ್ರ ನಿರ್ಧಾರಕ್ಕೆ ಬರುವುದು ಒಳಿತು.

ಇನ್ನು ಕೊರೊನಾ ಸಾಂಕ್ರಾಮಿಕದ ಹಾವಳಿ ಆರಂಭವಾಗಿ ತಿಂಗಳುಗಳೇ ಉರುಳಿದರೂ ಈ ಯುದ್ಧ ಸದ್ಯದಲ್ಲೇ ಮುಗಿಯುವ ಲಕ್ಷಣಗಳಂತೂ ಕಾಣಿಸುತ್ತಿಲ್ಲ. ಆ ಕಾರಣಕ್ಕಾಗಿಯೇ, ಈಗಲೂ ಅಪಾಯವನ್ನು ಎದುರಿಸುತ್ತಲೇ ಕರ್ತವ್ಯ ಬದ್ಧರಾಗಿರುವ ಕೋವಿಡ್‌ ವಾರಿಯರ್‌ಗಳ ಆರೋಗ್ಯ ರಕ್ಷಣೆಗೂ ಸರಕಾರಗಳು ಹೆಚ್ಚಿನ ಮುತುವರ್ಜಿ ತೋರಿಸುವ ಅಗತ್ಯ ಇದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next