Advertisement

ಹುನಗುಂದ ಪುರಸಭೆಯಲ್ಲಿ ಗದ್ದುಗೆ ಗುದ್ದಾಟ

02:40 PM Mar 16, 2020 | Suhan S |

ಹುನಗುಂದ: ಇಲ್ಲಿನ ಪುರಸಭೆ ಸಾರ್ವತ್ರಿಕ ಚುನಾವಣೆ ನಡೆದ ಒಂದು ವರ್ಷ 7 ತಿಂಗಳ ಬಳಿಕ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ನಿಗದಿಯಾಗಿದ್ದು, ಅತಂತ್ರವಾಗಿರುವ ಪುರಸಭೆ ಅಧ್ಯಕ್ಷ ಪಟ್ಟ ಯಾರಿಗೆ ದೊರೆಯಲಿದೆ ಎಂಬ ಕುತೂಹಲ ಹೆಚ್ಚಿಸಿದೆ.

Advertisement

ಒಟ್ಟು 23 ಸದಸ್ಯ ಬಲದ ಪುರಸಭೆಯಲ್ಲಿ ಕಾಂಗ್ರೆಸ್‌-12, ಬಿಜೆಪಿ-8 ಹಾಗೂ ಜೆಡಿಎಸ್‌-3 ಸದಸ್ಯ ಬಲ ಹೊಂದಿವೆ. ಸ್ಪಷ್ಟ ಬಹುಮತಕ್ಕೆ 13ರ ಮ್ಯಾಜಿಕ್‌ ನಂಬರ್‌ ಬೇಕಿದ್ದು, ಅತಂತ್ರ ಪುರಸಭೆಯ ಅಧಿಕಾರಕ್ಕಾಗಿ ಕಾಂಗ್ರೆಸ್‌ ಹಾಗೂ ಬಿಜೆಪಿ, ಪರಸ್ಪರ ತಂತ್ರ- ಪ್ರತಿ ತಂತ್ರ ರೂಪಿಸುತ್ತಿವೆ. ಜೆಡಿಎಸ್‌ನ ಮೂವರು ಸದಸ್ಯರು ಯಾವ ಪಕ್ಷಕ್ಕೆ ಬೆಂಬಲ ನೀಡುತ್ತಾರೋ ಆ ಪಕ್ಷ ಅಧಿಕಾರದ ಗದ್ದುಗೆ ಹಿಡಿಯುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ.

ಜೆಡಿಎಸ್‌ ಕಿಂಗ್‌ ಮೇಕರ್‌: ಪುರಸಭೆ ಅಧಿಕಾರದ ಗದ್ದುಗೆ ಏರಲು, ಜೆಡಿಎಸ್‌ ಕಿಂಗ್‌ ಮೇಕರ್‌ ಆಗಿದೆ. ಮೂವರು ಸದಸ್ಯರು, ಬಿಜೆಪಿಗೆ ಬೆಂಬಲ ನೀಡಿದರೂ ಸ್ಪಷ್ಟ ಬಹುಮತ ಸಿಗಲ್ಲ. ಹೀಗಾಗಿ ಉಪಾಧ್ಯಕ್ಷ ಸ್ಥಾನದೊಂದಿಗೆ ಕಾಂಗ್ರೆಸ್‌ಗೆ ಬೆಂಬಲ ಕೊಡುವ ಸಾಧ್ಯತೆಗಳೇ ಹೆಚ್ಚು ಎಂಬ ಮಾತು ಕೇಳಿ ಬರುತ್ತಿವೆ. ಈ ನಿರ್ಧಾರ, ಕಾಂಗ್ರೆಸ್‌ನ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಹಾಗೂ ಜೆಡಿಎಸ್‌ನ ಜಿಲ್ಲಾಧ್ಯಕ್ಷ ಎಸ್‌.ಆರ್‌. ನವಲಿಹಿರೇಮಠ ಕೈಗೊಳ್ಳುವ ನಿರ್ಧಾರದ ಮೇಲೆ ಅವಲಂಬಿತವಾಗಿದೆ ಎಂಬ ಮಾತು ಕೇಳಿ ಬಂದಿದೆ.

ಸಂಖ್ಯಾ ಬಲದ ಆಟ: ಕಾಂಗ್ರೆಸ್‌ ಪಕ್ಷ 12 ಸ್ಥಾನವನ್ನು ಗೆಲ್ಲುವ ಮೂಲಕ ಬಹುದೊಡ್ಡ ಪಕ್ಷವಾಗಿದ್ದರೂ ಸರಳ ಬಹುಮತಕ್ಕೆ ಒಂದು ಸ್ಥಾನದ ಕೊರತೆ ದುರಿಸುತ್ತಿದೆ.ಇನ್ನು ಬಿಜೆಪಿ 8 ಸ್ಥಾನ ಗೆದ್ದಿದ್ದು, ಚುನಾವಣೆ ಪ್ರಕ್ರಿಯೆಯಲ್ಲಿ ಶಾಸಕ ಮತ್ತು ಸಂಸದರ ಮತದೊಂದಿಗೆ ಅಧಿಕಾರಕ್ಕೇರಲು ಪ್ರಯತ್ನಿಸಿದರೂ 10 ಸ್ಥಾನಗಳಾಗುತ್ತವೆ. ಆಗ ಜೆಡಿಎಸ್‌ನ 3 ಸದಸ್ಯರನ್ನು ಸೆಳೆದು ಪುರಸಭೆಯ ಪಟ್ಟ ಗಳಿಸಬೇಕೆಂಬ ಚಿಂತನೆ ಬಿಜೆಪಿ ವಲಯದಲ್ಲಿ ನಡೆದಿದೆ ಎನ್ನಲಾಗಿದೆ. ಇದಕ್ಕೂ ನವಲಿಹಿರೇಮಠರ ಫರ್ಮಾನು, ಆ ಪಕ್ಷದ ಸದಸ್ಯರಿಗೆ ಅಗತ್ಯ ಎಂಬ ಮಾತು ಕೇಳಿ ಬರುತ್ತಿದೆ.

ಹಾಲಿ-ಮಾಜಿ ಶಾಸಕರಿಗೆ ಪ್ರತಿಷ್ಠೆ: ಹಾಲಿ ಮತ್ತು ಮಾಜಿ ಶಾಸಕರ ಪ್ರತಿಷ್ಠೆ -ಕೇಂದ್ರ ಮತ್ತು ರಾಜ್ಯದಲ್ಲಿ ಬಿಜಿಪಿ ಸರ್ಕಾರವಿದ್ದು, ಸ್ಥಳೀಯ ಪುರಸಭೆಯ ಅಧ್ಯಕ್ಷ ಗಾದಿಯನ್ನೂ ಹೇಗಾದರೂ ಮಾಡಿ ಗಿಟ್ಟಿಸಿಕೊಳ್ಳಬೇಕು ಎನ್ನುವ ತವಕದಲ್ಲಿ ಕ್ಷೇತ್ರ ಹಾಲಿ ಶಾಸಕ ದೊಡ್ಡನಗೌಡ ಪಾಟೀಲ ತಂತ್ರ ಹೆಣಿಯುತ್ತಿದ್ದರೆ, ಇನ್ನು ಅತೀ ದೊಡ್ಡ ಸಂಖ್ಯೆಯ ಸದಸ್ಯರನ್ನು ಹೊಂದಿದ ಕಾಂಗ್ರೆಸ್‌ನ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ, ಮೂರು ಜನ ಜೆಡಿಎಸ್‌ ಸದಸ್ಯರನ್ನು ತಮ್ಮತ್ತ ಸೆಳೆದುಕೊಂಡು ಪಟ್ಟಕ್ಕೇರಿ, ತಮ್ಮ ಪ್ರತಿಷ್ಠೆ ಸಾಬೀತುಪಡಿಸಲು ತಯಾರಿ ನಡೆಸಿದ್ದಾರೆ.

Advertisement

ಅಧ್ಯಕ್ಷ ಗಾದಿಗಾಗಿ ಪೈಪೋಟಿ: ಪುರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಕಾಂಗ್ರೆಸ್‌ಗೆ ಜೆಡಿಎಸ್‌ ಬೆಂಬಲ ಸಿಕ್ಕರೆ ಕಾಂಗ್ರೆಸ್‌ನಲ್ಲಿ ಅಧ್ಯಕ್ಷ ಸ್ಥಾನಕ್ಕಾಗಿ ತೀವ್ರ ಪೈಪೋಟಿಯಂತೂ ಇದ್ದೇ ಇದೆ. ಪಕ್ಷ ಸಂಘಟನೆಯಲ್ಲಿ ಮುಂದಿರುವ ಮತ್ತು ಪಕ್ಷದ ಪ್ರಮುಖ ಮುಖಂಡ ಶರಣು ಬೆಲ್ಲದ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಅಲ್ಲದೇ ಬಸವರಾಜ ಗೊಣ್ಣಾಗರ, ಮೈನುಸಾಬ ಧನ್ನೂರ ಕೂಡಾ ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿದ್ದಾರೆ. ಮಹಿಳೆಯರಿಗೆ ಮಣೆ ಹಾಕಿದರೆ ನಾಗರತ್ನ ತಾಳಿಕೋಟಿ, ಕಮಲವ್ವ ಸಂದಿಮನಿ, ಭಾಗ್ಯಶ್ರೀ ರೇವಡಿ ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ.

ಉಪಾಧ್ಯಕ್ಷ ಸ್ಥಾನಕ್ಕೂ ಕಸರತ್ತು: ಇನ್ನು ಬಿಜೆಪಿಯಲ್ಲಿ ಶಾಂತಪ್ಪ ಹೊಸಮನಿ, ಪ್ರವೀಣ ಹಳಪೇಟಿ, ಮಹೇಶ ಬೆಳ್ಳಿಹಾಳ, ಚಂದಪ್ಪ ಕಡಿವಾಲ ಅಧ್ಯಕ್ಷ ಸ್ಥಾನಕ್ಕಾಗಿ ತೀವ್ರ ಪೈಪೋಟಿ ನಡೆಸಿದ್ದಾರೆ. ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ (ಅ) ಮಹಿಳೆಗೆ ಮೀಸಲಾಗಿದ್ದು ಕಾಂಗ್ರೆಸ್‌ನಿಂದ ಶಾಂತಮ್ಮ ಮೇಲಿನಮನಿ, ಗುರುಬಾಯಿ ಹೂಗಾರ ಪೈಪೋಟಿ ಮಾಡುತ್ತಿದ್ದರೇ ಇನ್ನು ಬಿಜೆಪಿಯಿಂದ ಬಸವ್ವ ಚಿತ್ತವಾಡಗಿ ಮಾತ್ರ ರೇಸ್‌ನಲ್ಲಿದ್ದಾರೆ.

ಅಧಿಕಾರ ಹಂಚಿಕೆಯೋ ಉಪಾಧ್ಯಕ್ಷ ಸ್ಥಾನವೋ ? :  ಅತಂತ್ರ ಹುನಗುಂದ ಪುರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೂರೂ ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿವೆ. ಒಂದು ಸ್ಥಾನದ ಕೊರತೆ ಎದುರಿಸುತ್ತಿರುವ ಕಾಂಗ್ರೆಸ್‌, ಜೆಡಿಎಸ್‌ನ ಬೆಂಬಲ ಪಡೆದು ಉಪಾಧ್ಯಕ್ಷ ಸ್ಥಾನ ಆ ಪಕ್ಷಕ್ಕೆ ಬಿಟ್ಟುಕೊಡುವ ಚಿಂತನೆಯಲ್ಲಿದೆ ಎನ್ನಲಾಗಿದೆ. ನಾವು ಬೆಂಬಲ ಕೊಡಲು ಸಿದ್ಧ, ಆದರೆ, ಅಧ್ಯಕ್ಷ ಸ್ಥಾನದ ಅಧಿಕಾರ ಹಂಚಿಕೆ ಸೂತ್ರ ಅನ್ವಯಿಸಬೇಕು ಎಂಬ ಬೇಡಿಕೆ ಜೆಡಿಎಸ್‌ ವಲಯದಿಂದ ಬಂದಿದೆ ಎನ್ನಲಾಗಿದೆ.

ಪುರಸಭೆಯಲ್ಲಿ 12 ಸ್ಥಾನ ಗೆದ್ದು ಅತೀ ದೊಡ್ಡ ಪಕ್ಷವಾಗಿದ್ದು, ಕಾಂಗ್ರೆಸ್‌ ಅಧಿಕಾರದ ಗದ್ದುಗೆ ಏರುವುದು ನಿಶ್ಚಿತ. ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾದ ನಂತರ ಜೆಡಿಎಸ್‌ ಬೆಂಬಲದ ಬಗ್ಗೆ ವಿಚಾರ ಮಾಡಲಾಗುವುದು. -ವಿಜಯಾನಂದ ಕಾಶಪ್ಪನವರ, ಮಾಜಿ ಶಾಸಕ

ಬಾದಾಮಿ ಪುರಸಭೆ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ :  ಬಾದಾಮಿ ಇಲ್ಲಿಯ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಗೊಂಡಿದ್ದು, ಎರಡು ಸ್ಥಾನಗಳು ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವುದರಿಂದ ಪೈಪೋಟಿ ಹೆಚ್ಚಿದೆ. ಅಧ್ಯಕ್ಷ ಸ್ಥಾನಕ್ಕೆ ರಾಜಮಹ್ಮದ ಬಾಗವಾನ್‌, ಫಾರೂಖ ದೊಡಮನಿ, ಮಂಜುನಾಥ ಹೊಸಮನಿ, ಯಮುನಾ ಹೊಸಗೌಡ್ರ, ಶಂಕರ ಕನಕಗಿರಿ, ಪಾಂಡು ಕಟ್ಟಿಮನಿ ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಪೈಪೋಟಿ ನಡೆಸಿದ್ದಾರೆ. ಇನ್ನು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಇಲ್ಲೂ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಅಧ್ಯಕ್ಷ ಮತ್ತು ಉಪಾಧ್ಯಕ್ಷ

ಆಯ್ಕೆಗಾಗಿ ಸಿದ್ದು, ಚಿಮ್ಮನಕಟ್ಟಿ ಚರ್ಚೆ: ಇಲ್ಲಿನ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಆರು ಜನರು ಪ್ರಬಲ ಪೈಪೋಟಿಯಿದೆ. ಸಿದ್ದರಾಮಯ್ಯ, ಚಿಮ್ಮನಕಟ್ಟಿ ಚರ್ಚೆ ನಡೆಸಿದ್ದಾರೆ. ಮುಂದಿನ ವಾರ ಬಾದಾಮಿಗೆ ಭೇಟಿ ನೀಡಲಿರುವ ಮಾಜಿ ಸಿಎಂ, ಶಾಸಕ ಸಿದ್ದರಾಮಯ್ಯ ಮತ್ತು ಮಾಜಿ ಸಚಿವ ಬಿ.ಬಿ. ಚಿಮ್ಮನಕಟ್ಟಿ ಚರ್ಚಿಸಿ ತೀರ್ಮಾನಕ್ಕೆ ಬರಲಿದ್ದಾರೆ.

 

ಮಲ್ಲಿಕಾರ್ಜುನ ಬಂಡರಗಲ್ಲ

Advertisement

Udayavani is now on Telegram. Click here to join our channel and stay updated with the latest news.

Next