Advertisement

ಕಡಲ್ಕೊರೆತ, ಅಪಾಯದಲ್ಲಿ ಮನೆಗಳು

01:29 AM Aug 07, 2019 | sudhir |

ಕಾಸರಗೋಡು: ಕೆಲವು ದಿನ ಗಳ ಬಿಡುವಿನ ಬಳಿಕ ಸೋಮವಾರ ರಾತ್ರಿಯಿಂದ ಧಾರಾಕಾರ ಮಳೆಯಾಗುತ್ತಿದೆ. ಭಾರೀ ಗಾಳಿ ಮಳೆಗೆ ಉಪ್ಪಳದ ಹನುಮಾನ್‌ ನಗರ, ಮಣಿಮುಂಡ, ಕೀಯೂರು, ಚೇರಂಗೈ, ತೃಕ್ಕನ್ನಾಡ್‌ ಮೊದಲಾದೆಡೆ ಕಡಲ್ಕೊರೆತ ಉಂಟಾಗಿದ್ದು, ಹಲವು ಮನೆಗಳು ಅಪಾಯದಂಚಿನಲ್ಲಿವೆ.

Advertisement

ಕಡಲ್ಕೊರೆತದಿಂದ ಹನುಮಾನ್‌ ನಗರ ಸಮುದ್ರ ತೀರದ ರಸ್ತೆ ಸಂಪೂರ್ಣ ನೀರು ಪಾಲಾಗಿದ್ದು, ಸಂಚಾರ ಮೊಟಕು ಗೊಂಡಿದೆ. ಸ್ಥಳೀಯರ ಹಿತ್ತಿಲ ಆವರಣ ಗೋಡೆಗೆ ನೀರು ಬಡಿಯುತ್ತಿದ್ದು, ಹಲವು ಮನೆಗಳು ಅಪಾಯದಂಚಿನಲ್ಲಿವೆ. ಈಗಾಗಲೇ ಒಂದು ಕುಟುಂಬವನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಕಳೆದ ಒಂದು ವಾರದಿಂದ ಕಡಲ್ಕೊರೆತ ತೀವ್ರಗೊಂಡಿದ್ದು, ಇದೀಗ ಇಲ್ಲಿನ ರಸ್ತೆ ಸುಮಾರು ಒಂದು ಕಿಲೋ ಮೀಟರ್‌ ಉದ್ದದಲ್ಲಿ ಕುಸಿದು ಹೋಗಿದೆ. ರಸ್ತೆ ಬದಿಯಲ್ಲಿ ಕಟ್ಟಿದ ತಡೆಗೋಡೆ ಕೂಡ ಕುಸಿದಿದೆ. ಇದೀಗ ಈ ಪರಿಸರದಲ್ಲಿ ಮೀನು ಕಾರ್ಮಿಕರಾದ ಲಕ್ಷ್ಮಣ, ಮೋಹಿನಿ, ಯಮುನಾ, ಜಯ ಕುಮಾರ, ಶರ್ಮಿಳಾ, ಅಶೋಕ, ಅನಿಲ್ ಸಹಿತ ಹಲವರ ಮನೆ ಅಪಾಯದಂಚಿನಲ್ಲಿದೆ. ಮೋಹಿನಿ ಅವರ ಕುಟುಂಬವನ್ನು ಸ್ಥಳಾಂತರಿಸಲಾಗಿದೆ. ಮುಸೋಡಿಯಲ್ಲೂ ಕಡಲ್ಕೊರೆತ ಉಂಟಾಗಿದ್ದು, ಸಮುದ್ರ ಭೋರ್ಗರೆಯುತ್ತಿದೆ. ಮುಸೋಡಿಯಿಂದ ಐಲ ಶಿವಾಜಿನಗರ ತನಕ ರಸ್ತೆಯಿದ್ದು, ಹನುಮಾನ್‌ ನಗರದಲ್ಲಿ ರಸ್ತೆ ಪೂರ್ತಿ ಸಮುದ್ರ ಪಾಲಾಗಿರುವುದರಿಂದ ಈ ಪರಿಸರ ಪ್ರದೇಶ ಹಾಗೂ ಶಿವಾಜಿನಗರ ನಿವಾಸಿಗಳು ಸಮಸ್ಯೆಗೆ ಸಿಲುಕಿದ್ದಾರೆ.

ಕಾಸರಗೋಡು ಜಿಲ್ಲೆಯ ನದಿಗಳಲ್ಲಿ ನೀರು ಮೇಲಕ್ಕೇರುತ್ತಿದ್ದು, ಇನ್ನಷ್ಟು ಮಳೆ ಸುರಿದರೆ ಹೊಳೆಗಳು ಉಕ್ಕಿ ಹರಿಯಲಿವೆ. ಇದು ಅಪಾಯಕ್ಕೂ ಕಾರಣವಾಗಲಿದೆ. ಮಧೂರಿನ ಮಧುವಾಹಿನಿ ಹೊಳೆಯ ನೀರು ಮೇಲೇರುತ್ತಿದೆ.

ಉಪ್ಪಳ ಗೇಟ್ ಬಳಿಯಲ್ಲಿ ಬೃಹತ್‌ ಮರವೊಂದು ತಂತಿ ಮೇಲೆ ಬಿದ್ದು ವಿದ್ಯುತ್‌ ಕಂಬಗಳು ಹಾನಿಗೀಡಾಗಿವೆೆ. ವಿದ್ಯುತ್‌ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ವಿದ್ಯುತ್‌ ಸಂಪರ್ಕ ಕಡಿದ ಕಾರಣದಿಂದ ಸಂಭವನೀಯ ಅಪಾಯ ತಪ್ಪಿತು. ಮರ ಬಿದ್ದ ಹಿನ್ನೆಲೆಯಲ್ಲಿ ಕೆಲವು ಹೊತ್ತು ಸಾರಿಗೆ ಮೊಟಕುಗೊಂಡಿತು. ಮರವನ್ನು ತೆರವುಗೊಳಿಸಿದ ಬಳಿಕ ವಾಹನ ಸಂಚಾರ ಪುನರಾರಂಭಗೊಂಡಿತು.

ಮುಂದಿನ 24 ತಾಸುಗಳಲ್ಲಿ ರಾಜ್ಯದ ಕಡಲ ಕಿನಾರೆಯ ದಕ್ಷಿಣ, ಪಶ್ಚಿಮ ದಿಶೆಯಲ್ಲಿ 40 ರಿಂದ 50 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದ್ದು, ಕೇರಳ ಮತ್ತು ಲಕ್ಷದ್ವೀಪದ ಮೀನುಗಾರರು ಕಡಲಿಗೆ ತೆರಳಬಾರದು ಎಂದು ಹವಾಮಾನ ನಿಗಾ ಕೇಂದ್ರ ಮುನ್ಸೂಚನೆ ನೀಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next