Advertisement

ವಿನಾಯಕ ನಗರದ ಕಾಳಿ ನದಿಯಲ್ಲಿ ಮುಂದುವರಿದ ಬಾಲಕನ ಶೋಧ ಕಾರ್ಯಾಚರಣೆ

05:59 PM Oct 25, 2021 | Team Udayavani |

ದಾಂಡೇಲಿ:  ನಗರದ ವಿನಾಯಕ ನಗರದಲ್ಲಿ ಮೊಸಳೆಯೊಂದು ಮೊಹಿನ್ ಮೆಹಮೂದ್ ಅಲಿ ಎಂಬ ಬಾಲಕನನ್ನು ಭಾನುವಾರ ಮದ್ಯಾಹ್ನ  ಎಳೆದುಕೊಂಡು ಹೋಗಿದ್ದು, ಭಾನುವಾರ ಮಧ್ಯಾಹ್ನದಿಂದ ಆರಂಭಗೊಂಡ ಶೋಧ ಕಾರ್ಯಾಚರಣೆ ಸೋಮವಾರವೂ ಮುಂದುವರಿದಿದೆ.

Advertisement

ಸ್ಥಳೀಯರು ಮೂರ್ನಾಲ್ಕು ಜಟ್ಟಿಗಳ ಮೂಲಕ ಶೋಧ ಕಾರ್ಯದಲ್ಲಿ ತೊಡಗಿದ್ದರೇ, ಇತ್ತ ಪ್ರವಾಸೋದ್ಯಮಿ ರವಿ ನಾಯಕ ನೇತೃತ್ವದ ತಂಡ ರಾಪ್ಟ್ ಮೂಲಕ ಶೋಧ ಕಾರ್ಯ ನಡೆಸಿದೆ. ನಿನ್ನೆ ರಾತ್ರಿಯಾದ ಬಳಿಕ ಶೋಧ ಕಾರ್ಯಾಚರಣೆಯನ್ನು ನಿಲ್ಲಿಸಿ, ಸೋಮವಾರಕ್ಕೆ ಮುಂದೂಡಲಾಗಿತ್ತು. ಅಂತೆಯೆ ಇಂದು ಬೆಳಿಗ್ಗೆಯೆ ಸ್ಥಳೀಯರು ಜಟ್ಟಿಗಳ ಮೂಲಕ ಕಾರ್ಯಾಚರಣೆಗಿಳಿದರೇ, ಇತ್ತ ರವಿ ನಾಯಕ, ಸ್ಟ್ಯಾನ್ಲಿಯವರ ನೇತೃತ್ವದಲ್ಲಿ ರಾಪ್ಟ್ ಮೂಲಕ ಶೋಧ ಕಾರ್ಯವನ್ನು ಮುಂದುವರಿಸಿದ್ದಾರೆ. ರವಿ ನಾಯಕರವರು ಇವತ್ತು ಇನ್ನೊಂದು ರಾಪ್ಟನ್ನು ಕಾರ್ಯಾಚರಣೆಗೆ ಬಳಸಿದ್ದಾರೆ. ಮಧ್ಯಾಹ್ನದ ನಂತರದಲ್ಲಿ ಪ್ಲೈ ಕ್ಯಾಚರ್ ಹಾಗೂ ಕರೀಂ ಖತೀಬ್ ಅವರ ರಾಪ್ಟ್ ಹೀಗೆ ವಿವಿದೆಡೆಗಳ ಒಟ್ಟು 7 ರಾಪ್ಟ್ ಗಳಲ್ಲದೆ 13 ಜಟ್ಟಿಗಳು ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿವೆ. ನುರಿತ ಅನುಭವಿಗಳು ರಾಪ್ಟಿನಿಂದ ನೀರಿಗಿಳಿದು ಮುಳುಗಿ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ. ರಾಪ್ಟಿಂಗ್ ತಂಡದೊಂದಿಗೆ ಪಿಎಸೈಗಳಾದ ಯಲ್ಲಪ್ಪ.ಎಸ್, ಐ.ಆರ್.ಗಡ್ಡೇಕರ ಅವರುಗಳು ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ.

ನಿನ್ನೆ ಸಂಜೆ ಶೋಧ ಕಾರ್ಯಾಚರಣೆಯ ಸಂದರ್ಭದಲ್ಲಿ ಮೊಸಳೆಯ ಬಾಯಲ್ಲಿ ಬಾಲಕನನ್ನು ಎರಡ್ಮೂರು ಸಲ ಕಂಡಿದ್ದಾರೆ. ಆದರೆ ಆನಂತರ ಬಾಲಕನ ಸುಳಿವು ಸಿಕ್ಕಿರಲಿಲ್ಲ.  ಇಂದು ಬೆಳಿಗ್ಗೆಯಿಂದಲೆ ಕಾರ್ಯಾಚರಣೆ ಆರಂಭವಾಗಿದ್ದು, ಜನತೆ ನದಿ ದಡದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ.

ಇನ್ನೂ ಗಣೇಶಗುಡಿ ಕೆಪಿಸಿಯವರು ನಿನ್ನೆ ಸಂಜೆಯಿಂದ ನೀರು ಬಿಡುವುದನ್ನು ತಹಶೀಲ್ದಾರ್ ಶೈಲೇಶ ಪರಮಾನಂದ ಅವರ ಸೂಚನೆಯ ಮೇರೆಗೆ ನಿಲ್ಲಿಸಿದ್ದಾರೆ. ಹಾಗಾಗಿ ಸಧ್ಯಕ್ಕೆ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ.  ಇಂದು ಬೆಳಿಗ್ಗೆಯಿಂದಲೆ ನಗರ ಸಭೆಯ ಅಧ್ಯಕ್ಷೆ ಸರಸ್ವತಿ ರಜಪೂತ್, ಉಪಾಧ್ಯಕ್ಷ ಸಂಜಯ್ ನಂದ್ಯಾಳ್ಕರ, ನಗರ ಸಭಾ ಸದಸ್ಯರುಗಳು, ತಹಶೀಲ್ದಾರ್ ಶೈಲೇಶ ಪರಮಾನಂದ, ಡಿವೈಎಸ್ಪಿ ಗಣೇಶ್.ಕೆ.ಎಲ್, ಸಿಪಿಐ ಪ್ರಭು ಗಂಗನಹಳ್ಳಿ, ಪಿಎಸೈಗಳಾದ ಯಲ್ಲಪ್ಪ.ಎಸ್,  ಐ.ಆರ್.ಗಡ್ಡೇಕರ ಮತ್ತು ಯಲ್ಲಾಲಿಂಗ ಕುನ್ನೂರು ಹಾಗೂ ಪೊಲೀಸ್ ಸಿಬ್ಬಂದಿಗಳು, ವಲಯಾರಣ್ಯಾಧಿಕಾರಿ ವಿನಯ್ ಭಟ್ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಕಾಗದ ಕಾರ್ಖಾನೆಯ ಭದ್ರತಾ ವಿಭಾಗ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳದಲ್ಲೆ ಮೊಕ್ಕಂ ಹೂಡಿದ್ದಾರೆ. ನಿನ್ನೆ ಘಟನೆ ನಡೆದ ನಂತರದಲ್ಲಿ ಸಂಜೆ ನಗರದ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಪ್ರವೀಣಕುಮಾರ್ ಆರ್.ಜೆ.ಎಸ್ ಅವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಇಂದು ಬಾಲಕ ಪತ್ತೆಯಾಗುವ ಸಾಧ್ಯತೆಯಿದ್ದು, ಆ ನಿಟ್ಟಿನಲ್ಲಿ ಎಲ್ಲರು ಪ್ರಯತ್ನ ಮುಂದುವರೆಸಿದ್ದಾರೆ.

Advertisement

ಬಾಲಕನ ಶೋಧಕ್ಕಾಗಿ ಅಗತ್ಯ ಕ್ರಮವನ್ನು ಕೈಗೊಳ್ಳಲಾಗಿದೆ. ಘಟನೆಯ ಕುರಿತಂತೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಪೊಲೀಸ್, ಕಂದಾಯ ಇಲಾಖೆ, ಪ್ರವಾಸೋದ್ಯಮಿಗಳು, ಸ್ಥಳೀಯರು ಪತ್ತೆ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ ಎಂದು ತಹಶೀಲ್ದಾರ್ ಶೈಲೇಶ ಪರಮಾನಂದ ಅವರು ತಿಳಿಸಿದ್ದಾರೆ.

ಬಾಲಕನ ಪತ್ತೆಗಾಗಿ ಕ್ರಮ : ಬಾಲಕನ ಪತ್ತೆಗಾಗಿ ಎಲ್ಲ ರೀತಿಯ ಕ್ರಮವನ್ನು ಕೈಗೊಳ್ಳಲಾಗಿದೆ. ನಿರಂತರವಾಗಿ ಶೋಧ ಕಾರ್ಯ ನಡೆಯುತ್ತಿದೆ. ಸ್ಥಳೀಯರು ಸಹ ಜಟ್ಟಿಗಳ ಮೂಲಕ ಸಹಕಾರ ನೀಡುತ್ತಿದ್ದಾರೆ. ಸಂಜೆಯೊಳಗೆ ಪತ್ತೆಯಾಗುವ ಸಾಧ್ಯತೆಯಿದೆ ಎಂದು ಡಿವೈಎಸ್ಪಿ ಗಣೇಶ್.ಕೆ.ಎಲ್ ಅವರು ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

More
Next