ಮಹಾರಾಷ್ಟ್ರ: ಕಳೆದ ಬುಧವಾರ ಮಹಾರಾಷ್ಟ್ರದ ರಾಯಗಡದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮೃತ ಪಟ್ಟವರ ಸಂಖ್ಯೆ 16ಕ್ಕೆ ಏರಿಕೆಯಾಗಿದ್ದು ಈ ನಡುವೆ ನಾಪತ್ತೆಯಾಗಿದ್ದ 119 ಮಂದಿಯ ಶೋಧ ಕಾರ್ಯ ಮುಂದುವರೆದಿದೆ.
ಮುಂಬೈನಿಂದ ಸುಮಾರು 80 ಕಿಮೀ ದೂರದಲ್ಲಿರುವ ಕರಾವಳಿ ಜಿಲ್ಲೆಯ ಖಲಾಪುರ್ ತೆಹಸಿಲ್ ವ್ಯಾಪ್ತಿಯ ಬೆಟ್ಟದ ಇಳಿಜಾರಿನಲ್ಲಿರುವ ಬುಡಕಟ್ಟು ಗ್ರಾಮದಲ್ಲಿ ಬುಧವಾರ ರಾತ್ರಿ 11 ಗಂಟೆ ಸುಮಾರಿಗೆ ಭೂಕುಸಿತ ಸಂಭವಿಸಿದೆ. ಗ್ರಾಮದಲ್ಲಿ ಒಟ್ಟು 228 ನಿವಾಸಿಗಳ ಪೈಕಿ 16 ಮಂದಿಯ ಮೃತದೇಹಗಳು ಈಗಾಗಲೇ ಪತ್ತೆಯಾಗಿದ್ದು, 93 ಮಂದಿಯನ್ನು ರಕ್ಕ್ಷಣೆ ಮಾಡಲಾಗಿದೆ.
ಇನ್ನು ಬಾಕಿಯುಳಿದ 119 ಮಂದಿಯಲ್ಲಿ ಮದುವೆಗೆ ಹಾಗೂ ತೋಟದ ಕೆಲಸಕ್ಕಾಗಿ ಗ್ರಾಮದಿಂದ ಹೊರಗೆ ಹೋದವರು ಸೇರಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದು, ಗ್ರಾಮದಲ್ಲಿರುವ ಸುಮಾರು 50 ಮನೆಗಳ ಪೈಕಿ 17 ಮನೆಗಳು ಭೂಕುಸಿತದಿಂದ ನೆಲಸಮವಾಗಿವೆ ಎಂದಿದ್ದಾರೆ.
ಇಂದು ಬೆಳಗ್ಗಿನಿಂದಲೇ ಕನಿಷ್ಠ ನಾಲ್ಕು ಎನ್‌ಡಿಆರ್‌ಎಫ್ ತಂಡಗಳು ಭೂಕುಸಿತ ಸ್ಥಳಕ್ಕೆ ತಲುಪಿ ಕಾರ್ಯಾಚರಣೆ ಆರಂಭಿಸಿವೆ. ಥಾಣೆ ವಿಪತ್ತು ನಿರ್ವಹಣಾ ಪಡೆ (ಟಿಡಿಆರ್‌ಎಫ್), ಸ್ಥಳೀಯ ವಿಪತ್ತು ನಿರ್ವಹಣಾ ಅಧಿಕಾರಿಗಳು, ರಾಯಗಢ ಪೊಲೀಸರ ತಂಡಗಳು ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ಅವರು ಹೇಳಿದರು. ಅಲ್ಲದೆ ಘಟನೆ ನಡೆದ ಸ್ಥಳಕ್ಕೆ ಮುಖ್ಯಮಂತ್ರಿ ಏಕನಾಥ್ ಶಿಂದೆ ಭೇಟಿ ನೀಡಿ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ದಾಂಡೇಲಿ: ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಮೂರು ಮನೆಗಳು ಹಾನಿ