ವಾಡಿ: ಮಳೆಗಾಲದಲ್ಲಿ ಮಳೆಯಾಗದ್ದಕ್ಕೆ ಬೇಸಿಗೆಯಲ್ಲಿ ಬಿಸಿಲ ಹೊಡೆತ ಅನುಭವಿಸುವಂತಾಗಿದೆ. ಕಾಂಕ್ರಿಟ್ ರಸ್ತೆಗಳು ಕೆಂಡದ ಹಾಸಿಗೆಯಂತಾಗಿದ್ದರೆ, ಮುಖಕ್ಕೆ ಉಗಿಯುತ್ತಿರುವ ಬಿಸಿಗಾಳಿ ಉಸಿರುಗಟ್ಟಿಸಿ ಸಾಯಿಸುತ್ತಿದೆ.
ಹಾಸುಗಲ್ಲಿಗೆ ಹೆಸರುವಾಸಿಯಾಗಿರುವ ಕಲ್ಲು ಗಣಿನಾಡು ವಾಡಿ ಪಟ್ಟಣದಲ್ಲೀಗ ಖಡಕ್ ಬಿಸಿಲಿನದ್ದೇ ಹವಾ. ಬೇಸಿಗೆಯ ಆರಂಭದ ದಿನಗಳಲ್ಲೇ ಬಿಸಿಲು ತನ್ನ ರೌದ್ರಾವತಾರ ಪ್ರದರ್ಶಿಸಿದ್ದು, ಜನ ಜನುವಾರು ಬಾಯಾರಿಕೆಯಿಂದ ಬಸವಳಿಯುವಂತಾಗಿದೆ. ತಂಪು ನೀರು ನೆರಳಿಗಾಗಿ ಪರದಾಡುತ್ತಿರುವ ದೃಶ್ಯಗಳು ಎಲ್ಲೆಡೆ ಕಂಡುಬರುತ್ತಿವೆ. ಬೆವರಿಳಿಸುವ ಬಿಸಿಲ ಪ್ರತಾಪ ಒಂದೆಡೆಯಾದರೆ, ನೆರಳಿನಲ್ಲೂ ನರಳಾಡುವಂತೆ ಮಾಡುವ ಧಗೆಯಿಂದ ದೇಹ ತತ್ತರಿಸುವಂತಾಗಿದೆ.
ಪಟ್ಟಣ ವ್ಯಾಪ್ತಿಯಲ್ಲಿ 36 ಡಿಗ್ರಿ ಸೆಲ್ಸಿಯಸ್ ತಾಪಮಾನವಿದ್ದು, ಕೆಂಡ ಕಾರುತ್ತಿರುವ ಭಯಂಕರ ರಣಬಿಸಿಲು, ಜೀವಸಂಕುಲಗಳ ಪ್ರಾಣಕ್ಕೆ ಕುತ್ತು ತರುವಷ್ಟು ತಾಪ ಹೊಂದಿದೆ. ಪರ್ಸಿ ಕಲ್ಲಿನ ಹಾಸಿಗೆ ಹೊಂದಿರುವ ನಗರದ ನೆಲದಿಂದ ಬೆಂಕಿಯ ಉಗ ಹಾರುತ್ತಿದೆ. ಪಾದ ನೆಲಕ್ಕಿಟ್ಟರೆ ಅಗ್ನಿಕುಂಡುದ ಅನುಭವ. ನೆತ್ತಿ ಸುಡುವ ನೇಸರ ಜನರಿಗೆ ನೀರು ನೆರಳಿನತ್ತ ಓಡಿಸುತ್ತಿದ್ದಾನೆ.
ಸಾರ್ವಜನಿಕರು ನೆರಳಿಗಾಗಿ ಪರಿತಪಿಸುವಂತಾಗಿದೆ. ಬಿಸಿಲ ಝಳದಿಂದ ಬೇಸತ್ತು ಮಹಿಳೆಯರು ಮುಖಕ್ಕೆ ಬಟ್ಟೆ ಸುತ್ತಿಕೊಂಡು ಓಡಾಡುತ್ತಿದ್ದಾರೆ. ಹಿರಿಯರು ತಲೆಯ ಮೇಲೆ ಟವಲ್ ಹಾಕಿಕೊಂಡು ಸುಡುಬಿಸಿಲಿನಿಂದ ರಕ್ಷಣೆ ಪಡೆಯುತ್ತಿದ್ದಾರೆ. ಮಕ್ಕಳು ಮತ್ತು ವೃದ್ಧರು ಉರಿಬಿಸಿಲು, ಬಿಸಿಗಾಳಿಗೆ ಬಸವಳಿದು ಆಸ್ಪತ್ರೆಗೆ ದಾಖಲಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ.
ದುಬಾರಿ ಬೆಲೆಗೆ ನೀರಿನ ದಂಧೆ: ಬಿಸಿಲು ಮತ್ತು ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡಿರುವ ಮಿನರಲ್ ನೀರು ವ್ಯಾಪಾರಿಗಳು, ಗ್ರಾಹಕರ ಸುಲಿಗೆಗೆ ನಿಂತಿದ್ದಾರೆ. ಈ ಮಧ್ಯೆ ತಂಪು ಪಾನೀಯಗಳ ಬೇಡಿಕೆ ಹೆಚ್ಚಿದೆ. ನಕಲಿ ಮಿನರಲ್ ನೀರಿನ ಬಾಟಲಿ ದಂಧೆಗೆ ರೆಕ್ಕೆಗಳು ಬಂದಿವೆ. ರೈಲು ನಿಲ್ದಾಣ ಮತ್ತು ಬಸ್ ನಿಲ್ದಾಣಗಳಲ್ಲಿ ದುಬಾರಿ ಬೆಲೆಗೆ ನೀರು ಮಾರಾಟವಾಗುತ್ತಿದೆ.
ಬಾಯಾರಿಕೆ ತಣಿಸಿಕೊಳ್ಳುವ ನೆಪದಲ್ಲಿ ಗ್ರಾಹಕರು, ವರ್ತಕರ ಮೋಸಕ್ಕೆ ಬಲಿಯಾಗುತ್ತಿದ್ದಾರೆ. ನದಿ, ಹಳ್ಳಗಳು ಜಲವಿಲ್ಲದೆ ಭಣಗುಡುತ್ತಿದ್ದರೆ, ಇತ್ತ ಬಾವಿ, ಬೋರ್‌ವೆಲ್‌ಗಳ ಅಂತರ್ಜಲ ಪಾತಾಳಕ್ಕೆ ಸೇರಿಕೊಂಡಿದೆ. ಕಾದ ಹೆಂಚಿನಂತಾಗಿರುವ ನೆಲ ಪಾದಚಾರಿಗಳ ಬೆವರಿಳಿಸುತ್ತಿದೆ. ಕುಡಿಯಲು ನೀರಿಗೆ ಹಾಹಾಕಾರ ಭುಗಿಲೆದ್ದಿರುವಾಗ ರಸ್ತೆಗೆ ನೀರು ಸಿಂಪರಣೆ ಮಾಡಿ ತಾಪಮಾನ ತಣ್ಣಗಾಗಿಸುವುದು ಅಸಾಧ್ಯದ ಕೆಲಸ. ತಕ್ಷಣಕ್ಕೆ ಮಳೆಯಾಗಿ ಭೂಮಿ ನೀರುಂಡರೆ ಮಾತ್ರ ಬಿಸಿಲ ತಾಪ ತುಸು ತಣ್ಣಗಾಗಬಹುದು ಎನ್ನುತ್ತಾರೆ ಸ್ಥಳೀಯರು.
ಕಳೆದ ವರ್ಷಕಿಂತ ಈ ವರ್ಷ ಬಿಸಿಲು ಭಯಂಕರವಾಗಿದೆ. ಮನೆ ಬಿಟ್ಟು ಹೊರಗೆ ಬರಲಾಗದಂತಹ ಪರಸ್ಥಿತಿ ಸೃಷ್ಟಿಯಾಗಿದೆ. ತಂಪು ಗಾಳಿ ಮತ್ತು ತಂಪು ಪಾನೀಯಗಳ ಮೊರೆ ಹೋಗುವ ಮೂಲಕ ಜನರು ಬಾಯಾರಿಕೆ ನಿವಾರಿಸಿಕೊಳ್ಳುತ್ತಿದ್ದಾರೆ. ಸಂತೆ ಮತ್ತು ವ್ಯಾಪಾರಕ್ಕೆಂದು ಪಟ್ಟಣಕ್ಕೆ ಬರುವ ವಿವಿಧ ಗ್ರಾಮಗಳ ಜನರಿಗಾಗಿ ನೀರಿನ ಸೌಕರ್ಯ ಇಲ್ಲವಾಗಿದೆ. ಪುರಸಭೆ ವತಿಯಿಂದ ಪ್ರಮುಖ ಸ್ಥಳಗಳಲ್ಲಿ ಮಡಿಕೆಯಿಟ್ಟು ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು.
ಸಿದ್ಧು ಪಂಚಾಳ, ಸ್ಥಳೀಯ ನಿವಾಸಿ
ಸಿದ್ಧು ಪಂಚಾಳ, ಸ್ಥಳೀಯ ನಿವಾಸಿ
ಮಡಿವಾಳಪ್ಪ ಹೇರೂರ