Advertisement

ಕೃಷ್ಣಾ ಕಣಿವೆಯಲ್ಲಿ ತೈಲ ನಿಕ್ಷೇಪ ಶೋಧ

06:53 AM May 15, 2019 | Lakshmi GovindaRaj |

ಆಲಮಟ್ಟಿ: ನೈಸರ್ಗಿಕ ಸಂಪತ್ತುಗಳಾದ ಡೀಸೆಲ್‌, ಪೆಟ್ರೋಲ್‌, ಕೆರೋಸಿನ್‌ ಹಾಗೂ ಗ್ಯಾಸ್‌ (ನೈಸರ್ಗಿಕ ಅನಿಲ) ಕೃಷ್ಣಾ ಕಣಿವೆಯಲ್ಲಿ ಹೇರಳವಾಗಿದೆ ಎಂದು ಕೇಂದ್ರ ಸರ್ಕಾರ ಶೋಧನೆಗೆ ಮುಂದಾಗಿದ್ದು, ಅದರನ್ವಯ ಆಲಮಟ್ಟಿ ಸುತ್ತಮುತ್ತಲಿನ ಜಮೀನುಗಳಲ್ಲಿ ರಂಧ್ರ ಕೊರೆಯುವ ಕಾರ್ಯ ಚುರುಕುಗೊಂಡಿದೆ.

Advertisement

ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ಒಎನ್‌ಜಿಸಿ) ವತಿಯಿಂದ ಅಧ್ಯಯನ ನಡೆಸಲು ಕೇಂದ್ರ ಸರ್ಕಾರ ಸೂಚಿಸಿದ್ದರಿಂದ ಈ ಅಧ್ಯಯನ ಕಾರ್ಯ ನಡೆಯುತ್ತಿದೆ. ಅಲಾ ಜಿಯೋ ಇಂಡಿಯಾ ಲಿ. ಸಂಸ್ಥೆ ಭೂಮಿಯಲ್ಲಿ ರಂಧ್ರ ಕೊರೆದು ಆಳವನ್ನು ಆಧರಿಸಿ ಆಂತರಿಕ ಸ್ಫೋಟ ನಡೆಸಿ ದತ್ತಾಂಶ ಸಂಗ್ರಹಿಸುತ್ತಿದೆ.

ಆಲಮಟ್ಟಿ ಬಳಿ ಕೆಲವು ಜಮೀನು, ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಕೆಲ ಜಮೀನುಗಳಲ್ಲಿ ಕೊರೆಯಲಾಗಿರುವ ರಂಧ್ರಗಳಲ್ಲಿ ಹಲವು ರಂಧ್ರಗಳಲ್ಲಿ ನೀರು ಬರುತ್ತಿದ್ದರೆ, ಇನ್ನು ಕೆಲವು ರಂಧ್ರಗಳಲ್ಲಿ ನೀರು ಬರದೇ ಕೇವಲ ಕಲ್ಲಿನ ಪುಡಿ ಬರುತ್ತಿದೆ. ಒಂದೆರಡು ರಂಧ್ರಗಳಲ್ಲಿ ಬರುತ್ತಿರುವ ನೀರಿನಲ್ಲಿ ತೈಲದ ವಾಸನೆಯಿದೆ ಎನ್ನುತ್ತಾರೆ ಕರ್ತವ್ಯದಲ್ಲಿ ತೊಡಗಿದ್ದ ಆಂಧ್ರ ಮೂಲದ ಕಾರ್ಮಿಕರು.

ಆಲಾ ಜಿಯೋ ಸಂಸ್ಥೆ 3 ಕಿಮೀಗೆ ಒಂದರಂತೆ ಕೊಳವೆ ಬಾವಿ ಕೊರೆಯುತ್ತಿದೆ. ಈ ಅಧ್ಯಯನವು ಉಪಗ್ರಹ (ಸ್ಯಾಟ್‌ಲೆçಟ್‌) ಆಧರಿಸಿ ನಡೆಯುತ್ತದೆ. ಕೊಳವೆ(ರಂಧ್ರ) ಕೊರೆಯುವ ಜಮೀನುಗಳಲ್ಲಿ ಮೊದಲು ಜಿಯೋಫೋನ್‌ ಭೂಮಿಯಲ್ಲಿ ಹೂತಿಟ್ಟು ಅದರ ಮೂಲಕ ದತ್ತಾಂಶವನ್ನು ಗಣಕ ಯಂತ್ರದ ಸಹಾಯದಿಂದ ಸಂಗ್ರಹಿಸಲಾಗುತ್ತಿದೆ.

ಈಗಾಗಲೇ ಆಲಮಟ್ಟಿಯಿಂದ ವಿಜಯಪುರಕ್ಕೆ ತೆರಳುವ ಮಾರ್ಗದ ಅರಳದಿನ್ನಿ ಹಾಗೂ ಯಲಗೂರ ಜಮೀನುಗಳಲ್ಲಿ ಮತ್ತು ಆಲಮಟ್ಟಿ-ನಾರಾಯಣಪುರ ರಾಜ್ಯ ಹೆದ್ದಾರಿಯ ಹಡೇಕರ ಮಂಜಪ್ಪ ಸ್ಮಾರಕ ಶೈಕ್ಷಣಿಕ ಕೇಂದ್ರಗಳ ಸಮೀಪದಲ್ಲಿ ಸುಮಾರು 10 ಕಿಮೀ ಉದ್ದದಲ್ಲಿ ಕೇಬಲ್‌ ಹಾಕಲಾಗಿದೆ.

Advertisement

2-3 ದಿನಗಳಿಂದ ಆಲಮಟ್ಟಿ ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಜಲಾಶಯದ ಮುಂಭಾಗದಲ್ಲಿ ಸುಮಾರು 2 ಕಿಮೀ ಅಂತರದಲ್ಲಿ 30ಕ್ಕೂ ಅಧಿ ಕ ಯಂತ್ರಗಳಿಂದ ರೈತರ ಜಮೀನು, ಸರ್ಕಾರಿ ಜಮೀನುಗಳಲ್ಲದೇ ರಸ್ತೆಯ ಪಕ್ಕದಲ್ಲಿ 70 ಅಡಿಯಿಂದ 100 ಅಡಿವರೆಗೆ ರಂಧ್ರಗಳನ್ನು ಕೊರೆಯಲಾಗುತ್ತಿದೆ.

ಈಗಾಗಲೇ ಸುಮಾರು 300ಕ್ಕೂ ಅ ಧಿಕ ರಂಧ್ರಗಳನ್ನು ಕೊರೆದು ಅದರಲ್ಲಿ ಬರುವ ಮಣ್ಣು ಹಾಗೂ ಮರಳನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಇದರಿಂದ ಈ ಭಾಗದಲ್ಲಿ ತೈಲದ ನಿಕ್ಷೇಪ ಹಾಗೂ ನೈಸರ್ಗಿಕ ಅನಿಲದ ನಿಕ್ಷೇಪಗಳಿವೆಯೋ ಎನ್ನುವುದು ಸ್ಪಷ್ಟವಾಗುತ್ತದೆ.

ಹಿಂದೆಯೂ ನಡೆದಿತ್ತು ಅಧ್ಯಯನ: 2011-12ರಲ್ಲಿ ಸುಮಾರು ಮೂರು ಬಾರಿ ಭೂಗರ್ಭ ಇಲಾಖೆ ವತಿಯಿಂದ ಹೆಲಿಕಾಪ್ಟರ್‌ನಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ಕೃಷ್ಣಾ ನದಿ ದಡದಲ್ಲಿರುವ ಸುಮಾರು 10 ಕಿಮೀ ವ್ಯಾಪ್ತಿಯನ್ನೊಳಗೊಂಡಂತೆ ಭೂಗರ್ಭದಲ್ಲಿರುವ ಯುರೇನಿಯಂ, ಚಿನ್ನ, ತೈಲ ಹಾಗೂ ನೈಸರ್ಗಿಕ ಅನಿಲ ಹೀಗೆ ಹಲವಾರು ಸಂಪತ್ತುಗಳ ಕುರಿತು ಅಧ್ಯಯನ ನಡೆಸಲಾಗಿತ್ತು.

ತೈಲ ಹಾಗೂ ನೈಸರ್ಗಿಕ ಅನಿಲ ಪತ್ತೆಗಾಗಿ ಸೀಮಾಂಧ್ರ, ತೆಲಂಗಾಣ, ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಇಂಧನ ಶೋಧ ನಡೆಸಲಾಗುತ್ತಿದೆ. ನಾವು ಸಂಗ್ರಹಿಸಿದ ದತ್ತಾಂಶವನ್ನು ಒಎನ್‌ಜಿಸಿ ಅ ಧಿಕಾರಿಗಳಿಗೆ ಸಲ್ಲಿಸುತ್ತೇವೆ. ಬೆಳೆಯಿಲ್ಲದ ಜಮೀನುಗಳಲ್ಲಿ ಮಾತ್ರ ರಂಧ್ರ ಕೊರೆಯುತ್ತಿದ್ದೇವೆ. ಬೆಳೆ ಇರುವಲ್ಲಿ ರಂಧ್ರವನ್ನು ಕೊರೆಯುವುದಿಲ್ಲ.
-ಮುನ್ನಾ ಜಮಾದಾರ, ಕ್ಷೇತ್ರ ಮೇಲ್ವಿಚಾರಕ

ನಮ್ಮ ಜಮೀನಿನಲ್ಲಿ ರಾತ್ರೋ ರಾತ್ರಿ 16 ಕಡೆ ರಂಧ್ರ ಕೊರೆದಿದ್ದಾರೆ. ಇತ್ತೀಚೆಗಷ್ಟೇ ನೀರಿನ ಲಭ್ಯತೆಯಿರುವುದರಿಂದ ಸೋಮವಾರ ತೊಗರಿ ಬಿತ್ತನೆ ಮಾಡಲಾಗಿತ್ತು. ಮಂಗಳವಾರ ನೀರು ಹಾಯಿಸಬೇಕೆಂದರೆ ಬೃಹತ್‌ ವಾಹನಗಳನ್ನು ಬಳಸಿ ಜಮೀನನ್ನು ಹಾಳು ಮಾಡಿದ್ದಾರೆ. ಇವರು ಯಾರು, ರಂಧ್ರಗಳನ್ನು ಏಕೆ ಕೊರೆದಿದ್ದಾರೆ ಎನ್ನುವುದು ಅರ್ಥವಾಗುತ್ತಿಲ್ಲ.
-ಎಸ್‌.ಜಿ. ಹಿರೇಮಠ, ರೈತ

ಯುಪಿಎ ಅವಧಿಯಲ್ಲಿ ಹೆಲಿಕಾಪ್ಟರ್‌ ಮೂಲಕ ಅಧ್ಯಯನ ನಡೆಸಲಾಗಿತ್ತು. ಪೆಟ್ರೋಲಿಯಂ ಉತ್ಪನ್ನ ಹಾಗೂ ನೈಸರ್ಗಿಕ ಅನಿಲ ನಮ್ಮ ದೇಶದಲ್ಲಿ ದೊರೆತರೆ ಕೊಲ್ಲಿ ರಾಷ್ಟ್ರಗಳತ್ತ ಮುಖ ಮಾಡುವುದು ತಪ್ಪುತ್ತದೆ. ಇದು ಉತ್ತಮ ಕಾರ್ಯವಾಗಿದ್ದು ಅಧ್ಯಯನ ತಂಡದವರು ರಂಧ್ರ ಕೊರೆಯುವುದಕ್ಕಿಂತ ಮುಂಚೆ ರೈತರ ಗಮನಕ್ಕೆ ತರಬೇಕು.
-ಮಲ್ಲು ರಾಠೊಡ, ತಾಪಂ ಸದಸ್ಯ

* ಶಂಕರ ಜಲ್ಲಿ

Advertisement

Udayavani is now on Telegram. Click here to join our channel and stay updated with the latest news.

Next