ಪ್ರತಿಯೊಬ್ಬರಿಗೂ ಅವರದ್ದೇ ಆದ ವಿಳಾಸ ಅಂಥ ಇರುತ್ತದೆ. ನೋಡಲು, ಮಾತನಾಡಲು ಅಥವಾ ಸಂಪರ್ಕ ಸಾಧಿಸಲೋ ಒಬ್ಬರ ವಿಳಾಸವನ್ನು ಮತ್ತೂಬ್ಬರು ಹುಡುಕಿಕೊಂಡು ಹೋಗುವುದು ಸಹಜ. ಆದರೆ ಇಲ್ಲೊಂದು ತಂಡ ಗಾಂಧಿನಗರದಲ್ಲಿ ತಮ್ಮ ವಿಳಾಸವನ್ನು ತಾವೇ ಹುಡುಕಿಕೊಂಡು ಹೊರಟಿದೆ!
ಹೌದು, ಕನ್ನಡದಲ್ಲಿ ಬಹುತೇಕ ಹೊಸ ಪ್ರತಿಭೆಗಳೆ ಸೇರಿ ನಿರ್ಮಿಸಿರುವ ಮತ್ತೂಂದು ವಿಭಿನ್ನ ಟೈಟಲ್‌ನ ಚಿತ್ರ ತೆರೆಗೆ ಬರೋದಕ್ಕೆ ಸಿದ್ಧವಾಗುತ್ತಿದೆ. ಅಂದಹಾಗೆ, ಆ ಚಿತ್ರದ ಹೆಸರು “ಎಲ್ಲಿ ನನ್ನ ವಿಳಾಸ’ ಸದ್ದಿಲ್ಲದೆ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಅಂತಿಮ ಹಂತದಲ್ಲಿರುವ ಈ ಚಿತ್ರದ ಹಾಡುಗಳು ಇತ್ತೀಚೆಗೆ ಬಿಡುಗಡೆಯಾಗಿವೆ.
ಚಿತ್ರರಂಗದಲ್ಲಿ ನೆಲೆಯೂರುವ ಕನಸು ಕಾಣುತ್ತಿರುವ ನವ ಪ್ರತಿಭೆ ಅಜಯ್ ಅದಿತ್ ನಾಯಕನಾಗಿ, ಶಿವಮೊಗ್ಗ ಮೂಲದ ಪವಿತ್ರ ನಾಯಕ್ ನಾಯಕಿಯಾಗಿ ಈ ಚಿತ್ರದಲ್ಲಿ ತೆರೆಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಸೂರ್ಯದೀಪ್, ಲಕ್ಕಿ ರಘು, ಸಾಕ್ಷಿ, ಸುನಂದಾ ಮುಂತಾದವರು ಚಿತ್ರದ ಇತರ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸಾಗರ ಎಸ್. ಗಾವಡೆ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿದೇಶಿಸುತ್ತಿದ್ದಾರೆ.
ಚಿತ್ರದ ಕಥಾಹಂದರದ ಬಗ್ಗೆ ಮಾತನಾಡುವ ಚಿತ್ರತಂಡ, “ಪ್ರಪಂಚದಲ್ಲಿ ತಂದೆ- ತಾಯಿ ಮತ್ತವರ ಪ್ರೀತಿಗೆ ಬೆಲೆ ಕಟ್ಟ ಲಾಗದು. ನಾವು ಹುಟ್ಟಿದ ಮೇಲೆ ತಂದೆ-ತಾಯಿ ವಿಳಾಸವೇ ನಮ್ಮ ವಿಳಾಸವಾಗಿರುತ್ತದೆ. ಅವರಿಗೂ ನಾವೇ ಪ್ರೀತಿಯ ವಿಳಾಸವಾಗಿರುತ್ತೇವೆ. ಅಂತಹ ಒಂದು ಪ್ರೀತಿಯ ಪ್ರತೀಕವಾದ ವಿಳಾಸವನ್ನು ಬಿಟ್ಟು ನಮ್ಮದೆ ಆದ ವಿಳಾಸವನ್ನು ಹುಡುಕಿಕೊಂಡು ಹೊರಟಾಗ ಆಗುವ ತೊಂದರೆ, ಅನಾಹುತಗಳು ಏನೆಂಬುದನ್ನು ಈ ಚಿತ್ರದಲ್ಲಿ ಹೇಳಲು ಹೊರಟಿದ್ದೇವೆ. ಸೆಸ್ಪೆನ್ಸ್-ಥ್ರಿಲ್ಲರ್ ಶೈಲಿಯಲ್ಲಿ ಚಿತ್ರ ಸಾಗುತ್ತದೆ’ ಎಂದು ವಿವರಣೆ ಕೊಡುತ್ತದೆ.
“ಎಲ್ಲಿ ನನ್ನ ವಿಳಾಸ’ ಚಿತ್ರಕ್ಕೆ ಸಿ.ಎಸ್ ಸತೀಶ್ ಛಾಯಾಗ್ರಹಣ, ಸುಜೇಂದ್ರ ಸಂಕಲನ ಕಾರ್ಯವಿದೆ. ಚಿತ್ರದ ನಾಲ್ಕು ಹಾಡುಗಳಿಗೆ ಮಹೇಶ್ ಜೋಗಿ ಸಂಗೀತ ಸಂಯೋಜನೆಯಿದ್ದು, ಕಿನ್ನಾಳ್ ರಾಜು, ಶಿವು, ವಿನಯ ಪಾಂಡವಪುರ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ. ಚಿತ್ರಕ್ಕೆ ಅಕುಲ್.ಎನ್ ನೃತ್ಯ, ವಿ. ರಾವ್‌ದೇವ್ ಮತ್ತು ಕುಂಗ್‌ಫು ಚಂದ್ರು ಸಾಹಸ ಸಂಯೋಜಿಸಿದ್ದಾರೆ. “ಶ್ರೀ ಖಾಸYತೇಶ್ವರ ಪೊ›ಡಕ್ಷನ್’ ಬ್ಯಾನರ್ ಅಡಿಯಲ್ಲಿ ತಾಳಿಕೋಟೆ ಮೂಲದ ಸಂತೋಷ್ ಎಸ್. ಗಾವಡೆ, ಕಲಬುರ್ಗಿಯ ಲತೀಫ್.ಎನ್ ನಧಾಫ್ ಮತ್ತು ಮಿರ್ಜಾ ನಾದೀರ್ ಬೇಗ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಇನ್ನು “ಎಲ್ಲಿ ನನ್ನ ವಿಳಾಸ’ ಚಿತ್ರವನ್ನು ತಾಳಿಕೋಟೆ, ಯಲ್ಲಾಪುರ, ಶಿರಸಿ, ಮಂಗಳೂರು, ಉಡುಪಿ, ಹುಣಸಗಿ, ಬೆಂಗಳೂರು ಸುತ್ತಮುತ್ತ ಚಿತ್ರೀಕರಿಸಲಾಗಿದೆ. ಕನ್ನಡದ ಜೊತೆ ಜೊತೆಗೇ ತಮಿಳಿನಲ್ಲೂ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ಏಕಕಾಲಕ್ಕೆ ಎರಡೂ ಭಾಷೆಗಳಲ್ಲಿ ಬಿಡುಗಡೆ ಮಾಡುವ ಯೋಜನೆ ಚಿತ್ರತಂಡದ್ದು. ಚಿತ್ರತಂಡದ ಯೋಜನೆಯಂತೆ ನಡೆದರೆ, ಮುಂದಿನ ವರ್ಷದ ಆರಂಭದಲ್ಲಿ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ.