ಒಂದಾನೊಂದು ಕಾಲದಲ್ಲಿ ಒಂದು ಸುಂದರ ಊರಿತ್ತು. ಆ ಊರಿನ ನದಿಯ ದಡದ ಮೇಲೆ ಚಿಕ್ಕ ಗುಡಿಸಲಿತ್ತು. ಅದರ ಒಳಗೆ ಒಂದು ಕೋಳಿ ವಾಸ ಮಾಡುತ್ತಿತ್ತು. ಒಂದು ಸಲ ಅದು 12 ಮೊಟ್ಟೆ ಇಟ್ಟಿತು. ಅದರಲ್ಲಿ 10 ಮೊಟ್ಟೆ ಮಾತ್ರ ಮರಿಗಳಾಯಿತು. ಉಳಿದ ಎರಡು ಮೊಟ್ಟೆ ಹಾಗೆ ಉಳಿಯಿತು. ತಾಯಿ ಕೋಳಿ, ಅದನ್ನು ಗುಡಿಸಲಲ್ಲಿ ಬಿಟ್ಟು, ಉಳಿದ ಮರಿಗಳನ್ನು ಕರೆದು ಕೊಂಡು ಆಹಾರ ಹುಡುಕಲು ಹೊರಟಿತು. ಅಷ್ಟರಲ್ಲಿ ಉಳಿದುಕೊಂಡಿದ್ದ ಎರಡರಲ್ಲಿ ಒಂದು ಮೊಟ್ಟೆಯಿಂದ ಮರಿ ಹೊಡೆದು ಹೊರ ಬಂದಿತ್ತು. ಸುತ್ತ ತನ್ನ ತಾಯಿಯನ್ನು ಹುಡುಕುತ್ತಾ, ಯಾರೂ ಕಾಣಿಸದೇ ಇದ್ದುದರಿಂದ ಪುಟ್ಟ ಕೋಳಿ ಮರಿ ದುಃಖಗೊಂಡಿತ್ತು. ತನ್ನ ತಾಯಿ ಯಾರು? ಎಲ್ಲಿ ಇರುವಳು? ತಿಳಿದುಕೊಳ್ಳ ಬೇಕೆಂದು ಪುಟ್ಟ ಪುಟ್ಟ ಹೆಜ್ಜೆ ಹಾಕಿಹೊರಟಿತು. ಆಗ ದಾರಿಯಲ್ಲಿ ಒಂದು ಹಸುವನ್ನು ನೋಡಿ ಇವಳೇ ನನ್ನ ಅಮ್ಮ ಎಂದು ಕೊಂಡ ಆನಂದಿಸಿತ್ತು. ಆಗ ಹಸು ಕೋಳಿ ಮರಿಯ ಹತ್ತಿರ ಬಂದು ಏನು ಬೇಕು, ಏಕೆ ಹಾಗೆ ನೋಡುತ್ತಿರುವೆ? ಅಂದಾಗ, ಕೋಳಿ ಮರಿ ನನ್ನ ಅಮ್ಮ ನೀನೇನಾ? ಎಂದು ಕೇಳಿತು. ತನ್ನ ಅಮಾಯಕತ್ವವನ್ನು ಹಸು ನೋಡಿ ನಾನು ದೊಡ್ಡ ದೇಹದ ಹಸು, ನಿಮ್ಮ ಅಮ್ಮ ನನಗಿಂತ ಪುಟ್ಟದಾಗಿರುತ್ತಾಳೆ ಅಂದಿತು. ಆಗ ಮರಿ ದುಃಖದಿಂದ ಹೊರಟಿತು. ಹೋಗುವ ದಾರಿಯಲ್ಲಿ ಕಾಗೆ ಮರಿಯನ್ನು ನೋಡಿ ಈಕೆ ನನ್ನಮ್ಮ ಇರಬಹುದೇ? ಎಂದು ಊಹಿಸಿ, ಕಾಗೆಗೇ, ” ನಿನಗೆ 2 ಕಾಲು, ರೆಕ್ಕೆ ಇದೆ ನನ್ನಮ್ಮ ನೀನೇನಾ?’ಎಂದಿತು. ಕಾಗೇ, ‘ನಾನು ನಿನ್ನ ಹಾಗೆ ಇರಬಹುದು ಅಷ್ಟೇ, ಆದರೆ, ನನ್ನಷ್ಟು ಎತ್ತರ ನಿಮ್ಮ ಅಮ್ಮ ಹಾರುವುದಿಲ್ಲ ’ಎಂದು ಹೇಳಿತು. ಇದನ್ನು ಕೇಳಿ ಕೋಳಿಗೆ ಮರಿ ನಿರಾಸೆಯಾಯಿತ್ತು. ಕೋಳಿ ಮರಿ ಮುಂದಕ್ಕೆ ಸಾಗಿತು. ಆಗ ಹತ್ತಿರದ ನದಿಯ ದಂಡೆಯಲ್ಲಿ ಬಾತು ಕೋಳಿಗಳು ಕಂಡವು. ಕೋಳಿ ಮರಿ, “ಅಮ್ಮ, ಅಮ್ಮ ‘ಹತ್ತಿರ ಓಡಿಹೋದಾಗ ಬಾತು ಕೋಳಿ, “ನಾನು ನಿನ್ನ ಅಮ್ಮ ಅಲ್ಲ ’ಎಂದಾಗ ದುಃಖ ಇನ್ನೂ ಹೆಚ್ಚಾಯಿತು. ಹಾಗೇ ಕೊನೆಯ ನದಿ ದಂಡೆಯ ಹತ್ತಿರ ಹೋಯಿತು. ಅಲ್ಲಿ ಕೋಳಿಯ ಧ್ವನಿಯನ್ನು ಕೇಳಿ, ಓಡಿ ಹೋಯಿತು. ತನ್ನ ಹಾಗೇ ಇರುವ ತನ್ನ ತಾಯಿಯನ್ನು ನೋಡಿ ಸಂತೋಷದಿಂದ ಅಮ್ಮ ಎಂದಾಗ ತಾಯಿ ಆನಂದದಿಂದ ತನ್ನ ಮರಿಯನ್ನು ಅಪ್ಪಿಕೊಂಡಿತು. ಕೊನೆಗೂ ತಾಯಿ ಬಳಿ ಸೇರಿದ ಕೋಳಿ ಮರಿ, ಸಂತೋಷದಿಂದ ಕುಣಿದಾಡಿತು.
ಯು. ಎಚ್. ಎಂ. ಗಾಯತ್ರಿ