ಧಾರವಾಡ: ಇಲ್ಲಿನ ನಗರ ಲಕಮನಹಳ್ಳಿ ಗ್ರಾಮ ವ್ಯಾಪ್ತಿಯ ಕಲಘಟಗಿ ರಸ್ತೆಯಲ್ಲಿರುವ ಸೋಮೇಶ್ವರ ದೇವಸ್ಥಾನದ ಹಿಂಭಾಗದಲ್ಲಿರುವ ಸಿದ್ದೇಶ್ವರ ನಗರದಲ್ಲಿ ಕಳೆದ ಎರಡು ದಿನಗಳಲ್ಲಿ 80 ಕ್ಕೂ ಹೆಚ್ಚು ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಕಾಲೋನಿಗೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳನ್ನು ಕಟ್ಟಿಗೆ ಬಳಸಿ, ಬ್ಯಾರಿಕೇಡಿಂಗ್ ಮಾಡಲಾಗಿದೆ. ಇಂದು ಬೆಳಿಗ್ಗೆ ಸಿದ್ದೇಶ್ವರ ಕಾಲೋನಿಯನ್ನುಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ.
ಕಾಲೋನಿಯ ಕೆಲವರು ಕೋವಿಡ್ ಪಾಜಿಟಿವ್ ಬಂದರೂ ಕೋವಿಡ್ ಕಾಳಜಿ ಕೇಂದ್ರಗಳಿಗೆ ಹೋಗಲು ನಿರಾಕರಿಸಿದ್ದರು. ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ತಹಶೀಲ್ದಾರ ಸಂತೋಷ ಬಿರಾದಾರ ಹಾಗೂ ಸಹಾಯಕ ಪೋಲಿಸ್ ಆಯುಕ್ತೆ ಅನುಷಾ.ಜಿ. ಅವರು ಕಾಲೋನಿ ಪ್ರಮುಖರಿಗೆ ಹಾಗೂ ಸೋಂಕಿತರ ಕುಟುಂಬದ ಸದಸ್ಯರಿಗೆ ಮಾಹಿತಿ, ತಿಳುವಳಿಕೆ ನೀಡಿ, ಸೋಂಕಿತರು ಕೋವಿಡ್ ಕೇರ್ ಸೆಂಟರ್ ಗಳಿಗೆ ದಾಖಲಾಗುವಂತೆ ಜಾಗೃತಿ ಮೂಡಿಸಿದರು.
ಇದನ್ನೂ ಓದಿ:ಬ್ಲ್ಯಾಕ್ ಫಂಗಸ್ 7000 ಕೋವಿಡ್ ಸೋಂಕಿತರನ್ನು ಬಲಿ ತೆಗೆದುಕೊಂಡಿದೆ : ಡಾ. ರಣದೀಪ್ ಗುಲೇರಿಯಾ
ಸಿದ್ದೇಶ್ವರ ಕಾಲೋನಿಯಲ್ಲಿ ಸುಮಾರು 130 ಮನೆಗಳಿದ್ದು, ಅಂದಾಜು 800 ಜನ ವಾಸಿಸುತ್ತಿದ್ದಾರೆ. ಆರೋಗ್ಯ ಇಲಾಖೆಯ ಸಿಬ್ಬಂದಿ ಕಾಲೋನಿಯಲ್ಲಿ ಕೋವಿಡ್ ಟೆಸ್ಟಿಂಗ್ ಕಾರ್ಯ ಕೈಗೊಂಡಿದ್ದಾರೆ. ಸೋಂಕಿತರು ಕೋವಿಡ್ ಕೇರ್ ಕೇಂದ್ರಗಳಿಗೆ ದಾಖಲಾದ ನಂತರ ಮಹಾನಗರ ಪಾಲಿಕೆಯ ಸಿಬ್ಬಂದಿಗಳು ಸಿದ್ದೇಶ್ವರನಗರವನ್ನು ರಾಸಾಯನಿಕ ಸಿಂಪಡಿಸಿ, ಸ್ಯಾನಿಟೈಜ್ ಮಾಡಿದರು. ಅಲ್ಲದೇ ಬ್ಯಾರಿಕೇಡಿಂಗ್ ಮಾಡಿ, ರಸ್ತೆಗಳನ್ನು ಬಂದ್ ಮಾಡಲಾಗಿದೆ.
ಈ ಸಂದರ್ಭದಲ್ಲಿ ವಿದ್ಯಾಗಿರಿ ಪೊಲೀಸ್ ಠಾಣೆಯ ಸಿಪಿಐ ಮಹಾಂತೇಶ ಬಸಾಪುರ, ಕಂದಾಯ ನಿರೀಕ್ಷಕ ಮಂಜುನಾಥ ಗೂಳಪ್ಪನವರ, ಗ್ರಾಮಲೆಕ್ಕಾಧಿಕಾರಿ ಸೈಯದ ಬನ್ನಿಮಟ್ಟಿ, ಪಾಲಿಕೆ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಇದ್ದರು.