Advertisement

ಸೀಹಳ್ಳಿ ಜಾತ್ರೆಯಲ್ಲಿ ರಾಸುಗಳ ಪರಿಷೆ

02:47 PM Mar 06, 2023 | Team Udayavani |

ಬನ್ನೂರು: ಬೇಡಿದ ವರಗಳನ್ನು ಈಡೇರಿಸುವ ಮಹಾಮಾತೆ ಎಂದೇ ಪ್ರಖ್ಯಾತಗೊಂಡು ರಾಜ್ಯದ ವಿವಿಧ ಭಾಗಗಳಲ್ಲಿ ಅಸಂಖ್ಯಾತ ಭಕ್ತ ವೃಂದವನ್ನು ಹೊಂದಿರುವ ಸೀಹಳ್ಳಿ ಗ್ರಾಮದ ಆದಿಶಕ್ತಿ ಹುಚ್ಚಮ್ಮ ಜಾತ್ರೆ ಭಾನುವಾರದಿಂದ ವಿದ್ಯುಕ್ತವಾಗಿ ಆರಂಭವಾಗಿದ್ದು, 8 ದಿನ ನಡೆಯಲಿದೆ. ಜಾತ್ರೆಯಲ್ಲಿ ರಾಸುಗಳ ಪರಿಷೆ ಬಹಳಷ್ಟು ವೈಭವ ಪೂರ್ಣವಾಗಿ ನಡೆಯಲಿದ್ದು, ಜಾತ್ರೆಗೆಂದೇ ದೂರದಿಂದ ರಾಸುಗಳನ್ನು ತಂದು ಪ್ರದರ್ಶಿಸಲಾಗುತ್ತದೆ.

Advertisement

ದೇಗುಲ ವಿಶೇಷ: ಸೀಹಳ್ಳಿ ಗ್ರಾಮದಲ್ಲಿ ಚಿಕ್ಕ ಹುಚ್ಚಮ್ಮ ತಾಯಿ ಹಾಗೂ ದೊಡ್ಡ ಹುಚ್ಚಮ್ಮ ತಾಯಿ ಎನ್ನುವ ದೇವಾಲಯಗಳು ಅಕ್ಕಪಕ್ಕದಲ್ಲಿದ್ದು, ಭಕ್ತರು ಮೊದಲು ದೊಡ್ಡ ಹುಚ್ಚಮ್ಮ ದೇವಿಗೆ ಪೂಜೆ ಸಲ್ಲಿಸಿ ನಂತರ ಚಿಕ್ಕ ಹುಚ್ಚಮ್ಮ ದೇವಿಗೆ ಪೂಜೆ ಸಲ್ಲಿಸುವ ಪದ್ಧತಿ ಅನಾದಿಕಾಲದಿಂದ ಬೆಳೆದು ಬಂದಿದೆ. ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಹೊತ್ತುಕೊಂಡು ಅದು ಈಡೇರಿದ ನಂತರ ದೇವಾಲಯದ ಆವರಣದಲ್ಲಿ ಹರಕೆ ತೀರಿಸುವ ಸಂಪ್ರದಾಯವಿದೆ. ಕೆಲ ಭಕ್ತರು ಕೊಂಡದ ಹರಕೆ ಹೊತ್ತು ದೇವಾಲಯ ಸುತ್ತಮುತ್ತಲಿನ ಜನರಿಗೆ ಅನ್ನಸಂತರ್ಪಣೆ ಏರ್ಪಡಿಸುವುದು ರೂಢಿ.

ಸಹಕಾರ: ಗ್ರಾಮದ ಜಾತ್ರಾ ಮಹೋತ್ಸವ ಬಹಳಷ್ಟು ಪ್ರಸಿದ್ಧಿಯಾಗಿದ್ದು, ಜನಸಂದಣಿ ಅಧಿಕವಾಗಿ ಸೇರಿದರೂ ಜಾತ್ರೆಗೆ ಪೊಲೀಸರ ರಕ್ಷಣೆಗೆ ಜನ ಮೊರೆ ಹೋಗುವುದಿಲ್ಲ. ಊರಿನ ಪ್ರತಿ ಮನೆಯ ಜನರು ಸ್ವಯಂ ಪ್ರೇರಣೆಯಿಂದ ಒಂದಿಲ್ಲೊಂದು ಕೆಲಸ ವಹಿಸಿಕೊಂಡು ಜಾತ್ರೆಯ ಕೊನೆ ದಿನದವರೆಗೂ ಕೆಲಸ ನಿರ್ವಹಿಸುವ ಹೊಣೆ ಹೊತ್ತಿಕೊಳ್ಳುತ್ತಾರೆ. ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆಯಿಂದ ಜವಾಬ್ದಾರಿ ನಿರ್ವಹಿಸುತ್ತಾರೆ. ಆಕರ್ಷಕ ರಾಸುಗಳ ಪರಿಷೆ ರಾಸುಗಳನ್ನು ಕಟ್ಟಲೆಂದೇ ದೂರದ ಊರುಗಳಿಂದ ರಾಸುಗಳನ್ನು ಇಲ್ಲಿಗೆ ಕರೆ ತರುವ ರೈತರು ದಲ್ಲಾಳಿಗಳಿಲ್ಲದೇ ನೇರವಾಗಿ ರಾಸುಗಳನ್ನು ಮಾರಾಟ ಮಾಡುತ್ತಾರೆ. ರೈತರು ತಮ್ಮ ರಾಸುಗಳ ಪ್ರದರ್ಶನಕ್ಕೆ ತಮ್ಮ ಸ್ವಂತ ಹಣದಿಂದ ಕಂಗೊಳಿಸುವ ಚಪ್ಪರ ನಿರ್ಮಿಸಿ, ವಿದ್ಯುತ್‌ ಅಲಂಕಾರದಿಂದ ಕಂಗೊಳಿಸುವಂತೆ ಮಾಡುತ್ತಾರೆ. ರಾಸುಗಳ ಪ್ರದರ್ಶನದಲ್ಲಿ ವಿವಿಧ ಆಯಾಮಗಳಲ್ಲಿ ವಿಜೇತರಾದವರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನವನ್ನು ವ್ಯವಸ್ಥಾಪಕ ಸಮಿತಿ ವತಿಯಿಂದ ವಿತರಿಸಲಾಗುತ್ತದೆ. ರಥೋತ್ಸವಕ್ಕೆ ಜನಸಂದಣಿ ಹುಚ್ಚಮ್ಮ ದೇವಿ ರಥೋತ್ಸವ ಬಹಳಷ್ಟು ಪ್ರಸಿದ್ಧವಾಗಿದ್ದು, ಜನಸಂದಣಿಯೂ ಅಧಿಕ. ರಥೋತ್ಸವದ ಸಂದರ್ಭದಲ್ಲಿ ಮಕ್ಕಳ ಕಷ್ಟ ದೂರವಾಗಲೆಂದು ಹರಕೆ ಹೊತ್ತು ರಥದ ಕೆಳಗೆ ನುಸುಳಿಸುವ ಸಂಪ್ರದಾಯವೂ ಇದೆ.

ಜಾತ್ರೆಯ ಪ್ರಮುಖ ಕಾರ್ಯಗಳು ಏನೇನು? : ಶುದ್ಧ ಪೌರ್ಣಮಿಯ 7ರ ಮಂಗಳವಾರದಿಂದ ಅಧಿಕೃತವಾಗಿ ಆರಂಭವಾಗುವ ಜಾತ್ರೆಯಲ್ಲಿ ಅಂದು ಸಂಜೆ ದೇವಾಲಯದ ಆವರಣದಲ್ಲಿ ಬಂಡಿ ಉತ್ಸವ ನಡೆದರೆ, 8ರ ಬೆಳಗ್ಗೆ 5.30ಕ್ಕೆ ಕೊಂಡೋತ್ಸವ ನಡೆಯುತ್ತದೆ. 9ರಂದು ಬಾಯಿ ಬೀಗದ ಹರಕೆ ಕಾರ್ಯ, 10ರಂದು ದೇವಿಯ ಪಲ್ಲಕ್ಕಿ ಉತ್ಸವ. 11ರ ಸಂಜೆ 4.30ಕ್ಕೆ ಹುಚ್ಚಮ್ಮ ದೇವಿ ಮಹಾರಥೋತ್ಸವ ನಡೆಯಲಿದೆ.

ಅಲ್ಲದೇ, ಇದೇ ವೇಳೆ ಅನ್ನಸಂತರ್ಪಣೆ ಜರುಗಲಿದೆ. 12ರ ಬೆಳಗ್ಗೆ 10.30ಕ್ಕೆ ತೆಪ್ಪೋತ್ಸವ ನಡೆಯಲಿದ್ದು ಜಾತ್ರೆಗೆ ವಿದ್ಯುಕ್ತವಾಗಿ ತೆರೆ ಕಾಣಲಿದೆ. ಆದಿಶಕ್ತಿ ಹುಚ್ಚಮ್ಮ ದೇವಿ ಪವಾಡಗಳಿಂದ ದೇವಿಯನ್ನು ನಂಬಿದ ಭಕ್ತ ವೃಂದ ರಾಜ್ಯದ ವಿವಿಧ ಭಾಗಗಳಲ್ಲಿದ್ದಾರೆ. ಅದಕ್ಕಾಗಿಯೇ ಬನ್ನೂರು ಭಾಗದಿಂದ ವಿಶೇಷ ಬಸ್ಸಿನ ಸೌಲಭ್ಯವನ್ನು ಒದಗಿಸಲಾಗಿದೆ. ಜಾತ್ರೆ ಹಿನ್ನೆಲೆಯಲ್ಲಿ ದೇವಾಲಯವನ್ನು ವಿದ್ಯುತ್‌ ದೀಪದಿಂದ ಅಲಂಕರಿಸಿದೆ ಎಂದು ಮಾಜಿ ಶಾಸಕಿ ಹಾಗೂ ಆದಿಶಕ್ತಿ ಹುಚ್ಚಮ್ಮ ದೇವಾಲಯದ ವ್ಯವಸ್ಥಾಪಕರಾದ ಸುನೀತ ವೀರಪ್ಪಗೌಡ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next