ಕಾರವಾರ: ಬಿಜೆಪಿ ಅಭ್ಯರ್ಥಿ ಪರವಾಗಿ ಪ್ರಚಾರಕ್ಕೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಏ.15 ರಂದು ಜಿಲ್ಲೆಗೆ ಬರಲಿದ್ದಾರೆ. ಅಂದು ಬೆಳಗ್ಗೆ ಅವರು ಖಾನಾಪುರ ಸಭೆಯಲ್ಲಿ ಭಾಗವಹಿಸುವರು.
ನಂತರ ಮಧ್ಯಾಹ್ನ ಕಾರವಾರಕ್ಕೆ ಆಗಮಿಸಿ ಮಾಲಾದೇವಿ ಕ್ರೀಡಾಂಗಣದಲ್ಲಿ ಬಹಿರಂಗ ಸಮಾವೇಶ ನಡೆಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಜಿ. ನಾಯ್ಕ ಹೇಳಿದರು.
ಸುದ್ದಿಗೋಷ್ಠಿ ಮಾತನಾಡಿದ ಅವರು, ನಿರ್ಮಲಾ ಸೀತಾರಾಮನ್ ರಕ್ಷಣಾ ಸಚಿವೆ ಆದ ಮೇಲೆ ಇಲ್ಲಿನ ಸೀಬರ್ಡ್ ನಿರಾಶ್ರಿತರಿಗೆ ಪರಿಹಾರ ವಿತರಣೆಯಾಯಿತು. ನಿರಾಶ್ರಿತರಿಗೆ ಭೂ ಪರಿಹಾರ 700 ಕೋಟಿ ರೂ. ನೀಡುವುದಿತ್ತು. ಜಿಲ್ಲಾಡಳಿತ ನಿರಾಶ್ರಿತರ ಭೂಮಿಯ ಬಗ್ಗೆ ದಾಖಲೆ ಪರಿಶೀಲಿಸಿ, ಅರ್ಹ ಪ್ರಕರಣಗಳನ್ನು ಇತ್ಯರ್ಥ ಮಾಡಿಕೊಡುತ್ತಿದ್ದಂತೆ ಕೇಂದ್ರ ಪರಿಹಾರ ನೀಡಿತು. ಇದರಲ್ಲಿ ನಿರ್ಮಲಾ ಸೀತಾರಾಮನ್ ಪಾತ್ರವೂ ಇದೆ.
ಸುಪ್ರಿಂಕೋರ್ಟ್ ಆದೇಶವನ್ನು ಕೇಂದ್ರ ಸರ್ಕಾರ ಪಾಲಿಸುವುದರ ಜೊತೆಗೆ ನಿರಾಶ್ರಿತರಿಗೆ ನೀಡಬೇಕಾದ ಪರಿಹಾರ ನೀಡಲಾಗಿದೆ. ಎದುರಾಳಿಗಳು ನಮ್ಮ ಅಭ್ಯರ್ಥಿ ಬಗ್ಗೆ ಎಷ್ಟೇ ಅಪಪ್ರಚಾರ ಮಾಡಿದರೂ, ಗೆಲುವು ನಮ್ಮದೇ ಎಂದರು.
ಐಟಿ ದಾಳಿಗಳು ಉದ್ದೇಶಪೂರ್ವಕ ಅಲ್ಲ: ಐಟಿ ದಾಳಿ ಉದ್ದೇಶಪೂರ್ವಕ ಅಲ್ಲ. ದುಡ್ಡಿದವರ ಕಡೆ ಅವರು ದಾಳಿ ಮಾಡುತ್ತಾರೆ. ಐಟಿ ಅಧಿಕಾರಿಗಳು ಮಾಡುವುದು ಸರಿಯಿದೆ. ನಮ್ಮ ಬಳಿ ದುಡ್ಡೇ ಇಲ್ಲ. ಪ್ರಚಾರಕ್ಕೆ ತೆರಳುವ ಕಾರ್ಯಕರ್ತರಿಗೆ ಸಹ ನಾವು ದುಡ್ಡು ಕೊಡಲ್ಲ. ನಮ್ಮದು ಏನಿದ್ದರೂ ಸಿದ್ಧಾಂತದ ಆಧಾರದಲ್ಲಿ ನಡೆಯುವ ಪಕ್ಷ ಎಂದರು.
ಡಿಎನ್‌ಎ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ: ಡಿಎನ್‌ಎ
ನೋಡಿ ಅಭ್ಯರ್ಥಿಗಳಿಗೆ ಟಿಕೆಟ್ ಕೊಡಲಾಗವುದಿಲ್ಲ ಎಂಬ ಮಾತು ಬಿ.ಎಲ್. ಸಂತೋಷ ಅವರಿಂದ ಬಂದಿದೆ.
ಇದಕ್ಕೆ ನಿಮ್ಮ ಪಕ್ಷದಲ್ಲೇ ಭಾರೀ ಟೀಕೆ ವ್ಯಕ್ತವಾಗಿದೆ. ಯಡಿಯೂರಪ್ಪ, ಸಿ.ಎಂ. ಉದಾಸಿ ಅವರ ಮಕ್ಕಳಿಗೆ ಡಿಎನ್‌ಎ ನೋಡಿ ಟಿಕೆಟ್ ಕೊಡಲಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ಬಿ.ಎಲ್. ಸಂತೋಷ ದೊಡ್ಡವರು. ಅವರ ಅಭಿಪ್ರಾಯದ ಬಗ್ಗೆ ಉತ್ತರಿಸುವುದಿಲ್ಲ ಎಂದರು. ಬಿಜೆಪಿ ವಕ್ತಾರ ರಾಜೇಶ್ ನಾಯಕ್ ಹಾಗೂ ಇತರ ಪದಾಧಿಕಾರಿಗಳು ಇದ್ದರು.