Advertisement

ಸೀವೇವ್‌ ಬ್ರೇಕರ್‌ಗೆ ಎಳ್ಳುನೀರು?

12:07 AM Mar 28, 2023 | Team Udayavani |

ಮಂಗಳೂರು: ಉಳ್ಳಾಲದ ಕಡಲತೀರ ಈ ವರ್ಷವೂ ಮುಂಗಾರು ಸಂದರ್ಭ ಸಮುದ್ರ ಕೊರೆತಕ್ಕೆ ಸಿಲುಕಿ ಮತ್ತಷ್ಟು ನಾಶವಾಗುವುದನ್ನು ತಪ್ಪಿಸುವುದು ಕಷ್ಟಸಾಧ್ಯ. ಕಡಿಮೆ ವೆಚ್ಚದ ಸೀವೇವ್‌ ಬ್ರೇಕರ್‌ ಬದಲು ಸ್ವಲಾಭಕ್ಕೆ ಅವಕಾಶ ಇರುವ ಹಳೆಯ ಕಲ್ಲು ಹಾಕುವ ಪದ್ಧತಿಗೇ ಜೋತುಬೀಳಲು ಸಂಬಂಧ ಪಟ್ಟ ಅಧಿಕಾರಿಗಳು ಆದ್ಯತೆ ನೀಡಿರುವುದೇ ಇದಕ್ಕೆ ಕಾರಣ.

Advertisement

ಕಡಲ್ಕೊರೆತ ತಡೆಗಟ್ಟಲು ಹೊಸ ತಂತ್ರಜ್ಞಾನ ವಾದ ಸೀವೇವ್‌ ಬ್ರೇಕರ್‌ ರಚಿಸುತ್ತೇವೆ ಎಂದು ಕಳೆದ ಮಳೆಗಾಲದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದರು. ಇನ್ನೆರಡು ತಿಂಗಳಲ್ಲಿ ಮಳೆಗಾಲ ಆರಂಭವಾಗುತ್ತದೆ. ಕೆಲವೇ ದಿನಗಳಲ್ಲಿ ಚುನಾವಣೆ ಘೋಷಣೆಯಾಗಲಿರುವುದರಿಂದ ಆ ಬಳಿಕ ಯಾವುದೇ ಹೊಸ ಕಾಮಗಾರಿ ನಡೆಸು ವಂತೆಯೂ ಇಲ್ಲ. ಆದ್ದರಿಂದ ಈ ವರ್ಷ ಉಳ್ಳಾಲದ ಬಟ್ಟಪ್ಪಾಡಿ ಕಡಲತೀರವನ್ನು ಅಭಿವೃದ್ಧಿಪಡಿಸುವುದು ಬಿಡಿ, ಉಳಿದಿರುವ ಜಾಗವನ್ನು ರಕ್ಷಿಸುವುದೂ ಕಷ್ಟ ಎಂಬ ಮಾತು ಕೇಳಿಬರುತ್ತಿದೆ.

ಸೀವೇವ್‌ ಬ್ರೇಕರ್‌ ಕೈ ಬಿಟ್ಟರೇ?
ಆರಂಭದಲ್ಲಿ 1 ಕಿ.ಮೀ. ವ್ಯಾಪ್ತಿಯಲ್ಲಿ ಸೀವೇವ್‌ ಬ್ರೇಕರ್‌ಗೆ 24 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿತ್ತು.

ಆದರೆ ಇದರ ಕಾರ್ಯ ಸಾಧ್ಯತೆಯ ಬಗ್ಗೆ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದರು. ಅದಕ್ಕಾಗಿ ಮಂಡ್ಯದ ಕರ್ನಾಟಕ ಎಂಜಿನಿಯರಿಂಗ್‌ ಸಂಶೋಧನ ಕೇಂದ್ರ – ಕೆಇಆರ್‌ಎಸ್‌ಗೆ ಈ ಕುರಿತ ಸಿಮ್ಯುಲೇಶನ್‌ ಅಧ್ಯಯನ ನಡೆಸಲು ತಿಳಿಸಲಾಯಿತು. ಇದರ ವರದಿ ತಡವಾಗುತ್ತದೆ ಎಂಬ ಕಾರಣದಿಂದ 200 ಮೀ. ದೂರಕ್ಕೆ ಪ್ರಾಯೋಗಿಕವಾಗಿ ಸೀವೇವ್‌ ಬ್ರೇಕರ್‌ ನಿರ್ಮಿಸಲು ಸರಕಾರ ಆಸ್ಥೆ ವಹಿಸಿತ್ತು. ಆದರೆ ಕೊನೆಯ ಕ್ಷಣದಲ್ಲಿ ಇಷ್ಟೇ ದೂರಕ್ಕೆ 12 ಕೋಟಿ ರೂ. ವೆಚ್ಚವಾಗುತ್ತದೆ ಎಂದು ಅಧಿಕಾರಿಗಳು ಅಂದಾಜಿಸಿದ್ದರು. ಅಲ್ಲದೆ ಹಳೆಯ ಸಾಂಪ್ರದಾಯಿಕ ವಿಧಾನದಲ್ಲೇ ಕಡಲ್ಕೊರೆತ ತಡೆಗೆ ಮುಂದಾಗಿರುವ ಮಾಹಿತಿ ಲಭ್ಯವಾಗಿದೆ. “ಉದಯವಾಣಿ’ಗೆ ಸಿಕ್ಕಿರುವ ಮಾಹಿತಿಯ ಪ್ರಕಾರ ಸ್ವತಃ ಬಂದರು ಖಾತೆಯ ಸಚಿವರೇ ಮುಖ್ಯಮಂತ್ರಿಯವರಿಗೆ ಪತ್ರ ಬರೆದು, ಸೀವೇವ್‌ ಬ್ರೇಕರ್‌ ಪರಿಣಾಮಕಾರಿಯಾಗಿದ್ದರೂ ಹಳೆಯ ಹಾಗೂ ಅಧಿಕ ವೆಚ್ಚದ ಪದ್ಧತಿಗೇ ಪ್ರಸ್ತಾವನೆ ಕೋರಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವುದಾಗಿ ತಿಳಿದುಬಂದಿದೆ.

ಸಾಮಾನ್ಯವಾಗಿ ಕಡಲಿಗೆ ಕಲ್ಲು ಹಾಕುವುದರಿಂದ ಕೆಲವು ಅಧಿಕಾರಿಗಳಿಗೆ ಕಮಿಷನ್‌ ಜೇಬಿಗಿಳಿಸಲು ಸಾಧ್ಯವಾಗುತ್ತದೆ. ಆದರೆ ಸೀವೇವ್‌ ಬ್ರೇಕರ್‌ನಲ್ಲಿ ಕಲ್ಲು ಹಾಕುವ ಪ್ರಕ್ರಿಯೆ ಇಲ್ಲ. 50 ಅಡಿಯ ಕಾಂಕ್ರೀಟ್‌ ಬಾಕ್ಸ್‌ ನಿರ್ಮಿಸಿ, ಅದರೊಳಗೆ ಮಣ್ಣು, ಹೊಗೆ ತುಂಬಿಸುವ ಸರಳ ವಿಧಾನ ಇದಾಗಿರುವುದರಿಂದ ಕಮಿಷನ್‌ ಸಾಧ್ಯತೆ ಕಡಿಮೆ!

Advertisement

ಲೋಕಾಯುಕ್ತಕ್ಕೆ ದೂರು
ಕಡಿಮೆ ವೆಚ್ಚದ ಆಯ್ಕೆ ಇರುವಾಗ ಹಳೆ ಪದ್ಧತಿಗೆ ಮುಂದಾಗಿರುವ ಬಂದರು ಇಲಾಖೆ ಹಾಗೂ ಕೆಇಆರ್‌ಎಸ್‌ ಹಿರಿಯ ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ಕೂಡ ಸಲ್ಲಿಸಲಾಗಿದೆ. ಸೀವೇವ್‌ ಬ್ರೇಕರ್‌ ಯೋಜನೆಯ ಉಸ್ತುವಾರಿ ವೈ.ಕೆ. ಯೂಸುಫ್‌ ಅವರೇ ದೂರುದಾರರೆನ್ನುವುದು ಗಮನಾರ್ಹ. ದೂರಿನಲ್ಲಿರುವ ಅಂಶಗಳ ಸತ್ಯಾಸತ್ಯತೆ ಪರಿಶೀಲಿಸಿ ಲೋಕಾಯುಕ್ತ ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸುವ ಸಾಧ್ಯತೆ ಇದೆ.

ಅಧಿಕಾರಿಗಳು ಹೆಚ್ಚಿನ ಮೊತ್ತದ ಪ್ರಸ್ತಾ ವನೆ ಸಿದ್ಧಪಡಿಸಿದ್ದು ಗೊತ್ತಿದೆ. ಈ ವಿಚಾರ ವನ್ನು ಮುಖ್ಯಮಂತ್ರಿಯವರಿಗೆ ತಿಳಿಸು ತ್ತೇನೆ. ಸೀವೇವ್‌ ಬ್ರೇಕರ್‌ ತಂತ್ರಜ್ಞಾನವೇ ಇಲ್ಲಿಗೆ ಹೆಚ್ಚು ಸೂಕ್ತ ಎನ್ನುವುದು ನಮ್ಮ ಅಭಿಪ್ರಾಯ.
– ಎಸ್‌. ಅಂಗಾರ, ಬಂದರು ಸಚಿವರು

ಉಳ್ಳಾಲದಲ್ಲಿ ಹೊಸ ತಂತ್ರಜ್ಞಾನದಲ್ಲಿ ಕಡಲ್ಕೊರೆತ ತಡೆಯಬೇಕು ಎಂಬ ಬಗ್ಗೆ ಪ್ರಸ್ತಾವನೆ ಹೋಗಿರುವುದು ಹೌದು, ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ.
-ರವಿಕುಮಾರ್‌ ಎಂ.ಆರ್‌., ಜಿಲ್ಲಾಧಿಕಾರಿ ದ.ಕ.

Advertisement

Udayavani is now on Telegram. Click here to join our channel and stay updated with the latest news.

Next