Advertisement

ವರದಿ, ಭರವಸೆಯಲ್ಲೇ ಉಳಿದ ಕಡಲ್ಕೊರೆತ ತಡೆ ಯೋಜನೆ

01:16 AM Feb 27, 2023 | Team Udayavani |

ಉಡುಪಿ: ಕರಾವಳಿಯನ್ನು ಕಾಡುವ ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸೀ ವೇವ್‌ ಬ್ರೇಕರ್‌ ಮತ್ತು ಡಕ್‌ ಫ‌ೂಟ್‌ ತಂತ್ರಜ್ಞಾನ ಬಳಸುವ ಬಗ್ಗೆ ಎರಡು ಕಂಪೆನಿಗಳು ಸರಕಾರಕ್ಕೆ ಕಾರ್ಯ ಸಾಧ್ಯತೆ ವರದಿ ಸಲ್ಲಿಸಿವೆ. ಈ ಬಗ್ಗೆ ಸರಕಾರ ಇನ್ನೂ ಅಂತಿಮ ತೀರ್ಮಾನ ಮಾಡಿಲ್ಲ.

Advertisement

2022ರಲ್ಲಿ ಉಭಯ ಜಿಲ್ಲೆಯ ಉಳ್ಳಾಲ, ಸುರತ್ಕಲ್‌, ಪಡುಬಿದ್ರಿ, ಕಾಪು, ಬೆಂಗ್ರೆ, ಕೋಡಿ, ಮರವಂತೆ, ಹೊಸಹಿತ್ಲು ಮೊದಲಾದೆಡೆ ಭಾರೀ ಕಡಲ್ಕೊರೆತ ವಾಗಿತ್ತು. ಸಿಎಂ ಬಸವರಾಜ ಬೊಮ್ಮಾಯಿ  ಕಡಲ್ಕೊರೆತವನ್ನು ಖುದ್ದು ವೀಕ್ಷಿಸಿ ಶಾಶ್ವತ ಪರಿಹಾರದ ಭರವಸೆ ನೀಡಿದ್ದರು. ಆದರೆ ಈವರೆಗೆ ಪ್ರಾಯೋಗಿಕ ಪ್ರಯತ್ನವೂ ಆಗಿಲ್ಲ.

ರಾಜ್ಯ ಬಜೆಟ್‌ನಲ್ಲಿ ಕಡಲ್ಕೊರೆತ ತಡೆಗೆ ಪ್ರತ್ಯೇಕ ಅನುದಾನ ಮೀಸಲಿಟ್ಟಿಲ್ಲ. ಹಿಂದಿನ ವರ್ಷಗಳಲ್ಲಿ ವೈಜ್ಞಾನಿಕ ವಿಧಾನ ಅನುಸರಿಸದೆ ಕಡಲ್ಕೊರೆತ ಪ್ರದೇಶಗಳಿಗೆ ಕಲ್ಲುಹಾಕಲಾಗಿದ್ದು, ಮಳೆಗಾಲ ಮುಗಿಯುವುದ ರೊಳಗೆ ಬಹುತೇಕ ಕಲ್ಲುಗಳು ಸಮುದ್ರ ಪಾಲಾಗಿವೆ ಅಥವಾ ಮರಳಿನಡಿ ಸೇರಿವೆ. 2022ರಲ್ಲಿ ಕಲ್ಲು ಹಾಕಿದ ಗುತ್ತಿಗೆದಾರರಿಗೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಬಿಲ್‌ ನೀಡಿಲ್ಲ ಎಂಬ ಆರೋಪವೂ ಇದೆ.

ಎರಡು ವರದಿ ಸಿದ್ಧ
ಕೇರಳದಲ್ಲಿ ಅಳವಡಿಸಿರುವ ಸೀ ವೇವ್‌ ಬ್ರೇಕರ್‌ ತಂತ್ರಜ್ಞಾನ ಮಾದರಿಯನ್ನು ಉಳ್ಳಾಲ ಹಾಗೂ ಮರವಂತೆಯಲ್ಲಿ ಡಕ್‌ಫ‌ೂಟ್‌ ತಂತ್ರಜ್ಞಾನ ಅಳವಡಿಸಿ ಕಡಲ್ಕೊರೆತ ತಡೆಗೆ ಶಾಶ್ವತ ಪರಿಹಾರಕ್ಕಾಗಿ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಎರಡು ಸಂಸ್ಥೆಗಳಿಗೆ ತಿಳಿಸಲಾಗಿತ್ತು. ಸಂಸ್ಥೆಯ ಅಧಿಕಾರಿಗಳು ಹಾಗೂ ತಜ್ಞರು ಸ್ಥಳ ಪರಿಶೀಲಿಸಿ ಸರಕಾರಕ್ಕೆ ಕಾರ್ಯಸಾಧ್ಯತೆಯ ವರದಿ ಸಲ್ಲಿಸಿದ್ದಾರೆ. ಎರಡು ವರದಿಗಳಲ್ಲೂ ಈ ತಂತ್ರಜ್ಞಾನಗಳ ಮೂಲಕ ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ನೀಡಬಹುದು ಎಂಬು ದನ್ನು ಉಲ್ಲೇಖೀಸಲಾಗಿದೆ ಎಂದು ಮೀನುಗಾರಿಕೆ ಇಲಾಖೆ ಸಚಿವ ಎಸ್‌. ಅಂಗಾರ “ಉದಯವಾಣಿ’ಗೆ ತಿಳಿಸಿದರು.

ಎಷ್ಟು ಅನುದಾನ ಬೇಕು?
ಸೀ ವೇವ್‌ ಬ್ರೇಕರ್‌ ಅನುಷ್ಠಾನಕ್ಕೆ ಪ್ರತೀ ಕಿ.ಮೀ.ಗೆ ಕನಿಷ್ಠ 25 ಕೋ. ರೂ. ಅಗತ್ಯವಿದೆ. ಇದನ್ನು ಪ್ರಾಯೋಗಿಕವಾಗಿ ಉಳ್ಳಾಲದ ಬೆಟ್ಟಂಪಾಡಿಯಲ್ಲಿ ಅನುಷ್ಠಾನಕ್ಕೆ ಸಿದ್ಧತೆ ಮಾಡಿಕೊಳ್ಳಲಾ ಗುತ್ತಿದೆ. ಡಕ್‌ಫ‌ೂಟ್‌ ತಂತ್ರಜ್ಞಾನಕ್ಕೆ ಪ್ರತೀ ಕಿ.ಮೀ.ಗೆ ಕನಿಷ್ಠ 10 ಕೋ.ರೂ. ಅಗತ್ಯವಿದೆ. ಈ ಎರಡು ಪ್ರಯತ್ನವನ್ನು ಏಕಕಾಲದಲ್ಲಿ ಪ್ರಾಯೋಗಿಕವಾಗಿ ಉಭಯ ಜಿಲ್ಲೆಯಲ್ಲಿ ಅನುಷ್ಠಾನಕ್ಕೆ ದೊಡ್ಡ ಮೊತ್ತದ ಅನುದಾನ ಅಗತ್ಯ ವಿದೆ. ಸರಕಾರ ನಿರ್ದಿಷ್ಟ ಅನುದಾನ ಮೀಸಲಿಟ್ಟ ಬಳಿಕವೇ ಕಾಮಗಾರಿ ಆರಂಭವಾಗಲಿದೆ. ಯೋಜನೆಯ ಶಾಶ್ವತ ಅನುಷ್ಠಾನಕ್ಕೆ ಕನಿಷ್ಠ 500 ಕೋ.ರೂ.ಗಳಿಗೂ ಅಧಿಕ ಅನುದಾನದ ಅಗತ್ಯವಿದೆ ಎಂದು ಹೇಳಲಾಗುತ್ತಿದೆ.

Advertisement

ಸಿಎಂ ಜತೆ ಚರ್ಚೆ
ಸೀ ವೇವ್‌ ಬ್ರೇಕರ್‌ ಹಾಗೂ ಡಕ್‌ಫ‌ೂಟ್‌ ತಂತ್ರಜ್ಞಾನ ಅನುಷ್ಠಾನಕ್ಕಾಗಿ ಈಗಾಗಲೇ ಎರಡು ಪ್ರತ್ಯೇಕ ವರದಿ ಇಲಾಖೆಗೆ ಸಲ್ಲಿಕೆಯಾಗಿದೆ. ಈ ಸಂಬಂಧ ಶೀಘ್ರದಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಅನುದಾನ ಒದಗಿಸಲು ಕೋರಿಕೊಳ್ಳಲಾಗುವುದು. ಅನುದಾನದ ಲಭ್ಯತೆ ಆಧಾರದಲ್ಲಿ ಏಕಕಾಲದಲ್ಲಿ ಎರಡು ಯೋಜನೆಗಳ ಪ್ರಾಯೋಗಿಕ ಅನುಷ್ಠಾನ ಮಾಡಲಿದ್ದೇವೆ.
-ಎಸ್‌. ಅಂಗಾರ, ಮೀನುಗಾರಿಕೆ ಇಲಾಖೆ ಸಚಿವ

-ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next