ಕೋಟ: ಸಾಸ್ತಾನ ಸಮೀಪ ಕೋಡಿ ಕನ್ಯಾಣ ಗ್ರಾ.ಪಂ. ವ್ಯಾಪ್ತಿಯ ಕೋಡಿ ಹೊಸಬೆಂಗ್ರೆ ಪ್ರದೇಶದಲ್ಲಿ ಮತ್ತೆ ಕಡಲ್ಕೊರೆತ ಹೆಚ್ಚಿದ್ದು, ಬುಧವಾರ ಇಲ್ಲಿನ ಸಂಪರ್ಕ ರಸ್ತೆ ಹಾಗೂ ಮನೆ ಅಲೆಗಳ ಹೊಡೆತದಿಂದ ಅಪಾಯಕ್ಕೆ ಸಿಲುಕಿತ್ತು.
ಈ ಹಿಂದೆ ಕೂಡ ಈ ಭಾಗದಲ್ಲಿ ಕಡಲ್ಕೊರೆತ ಹೆಚ್ಚಿದ್ದು, ಮೀನು ಗಾರಿಕೆ ಸಚಿವ ಎಸ್. ಅಂಗಾರ ಆ. 10ರಂದು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರೊಂದಿಗೆ ಭೇಟಿ ನೀಡಿ ಪರಿಶೀಲಿಸಿ ತಾತ್ಕಾಲಿಕ ಪರಿಹಾರ ಒದಗಿಸುವ ಭರವಸೆ ನೀಡಿದ್ದರು. ಆದರೆ ತತ್‌ಕ್ಷಣ ಪರಿಹಾರ ದೊರೆತಿರಲಿಲ್ಲ.
ತಾತ್ಕಾಲಿಕ ಪರಿಹಾರ: ಮಂಗಳವಾರ ಕಡಲ್ಕೊರೆತ ಇನ್ನಷ್ಟು ಹೆಚ್ಚುತ್ತಿದ್ದಂತೆ ಗ್ರಾ.ಪಂ. ಮುಖ್ಯಸ್ಥರು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಗಮನಕ್ಕೆ ತಂದಿದ್ದು ಶಾಸಕರು ತತ್‌ಕ್ಷಣ ದಂಡೆಗೆ ಕಲ್ಲು ಅಳವಡಿಸಲು ಕ್ರಮ ಕೈಗೊಂಡರು.
ಗ್ರಾ.ಪಂ. ಅಧ್ಯಕ್ಷ ಪ್ರಭಾಕರ ಮೆಂಡನ್, ಸದಸ್ಯ ಅಂತೋನಿ ಡಿ’ಸೋಜಾ, ಗೀತಾ ಖಾರ್ವಿ, ಪಿಡಿಒ ರವೀಂದ್ರ ರಾವ್, ಮಾಜಿ ಸದಸ್ಯ ಆಣ್ಣಪ್ಪ ಕುಂದರ್, ರಾಘವೇಂದ್ರ ಸುವರ್ಣ, ಗುತ್ತಿಗೆದಾರ ಅರುಣ್ ಹೆಗ್ಡೆ ಯಡಾಡಿ ಇದ್ದರು.
ಇದನ್ನೂ ಓದಿ : ಎಪಿಕ್ ಕಾರ್ಡ್‌ಗೆ ಆಧಾರ್ ನಂಬರ್ ಲಿಂಕ್ : ಪ್ರಕ್ರಿಯೆ ಚುರುಕುಗೊಳಿಸಲು ಡಿಸಿ ಸೂಚನೆ