ಹಾಸನ: ಮುಸ್ಲಿಂ ಸಮುದಾಯಕ್ಕಿದ್ದ ಶೇ.4 ಮೀಸಲಾತಿ ಯನ್ನು ರಾಜ್ಯ ಸರ್ಕಾರ ರದ್ದುಮಾಡಿರುವುದನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟಿಸಿದರು.
ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಮೆರವಣಿಗೆ ಹೊರಟ ಕಾರ್ಯಕರ್ತರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸುತ್ತ, ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಕೆಲಕಾಲ ಪ್ರತಿಭಟನೆ ನಡೆಸಿ, ಆನಂತರ ಮನವಿ ಸಲ್ಲಿಸಿದರು.
ಆಯೋಗಗಳು ಹಿಂದುಳಿದ ವರ್ಗಕ್ಕೆ ಸೇರಿದ್ದವು: ರಾಜ್ಯ ಬಿಜೆಪಿ ಸರ್ಕಾರ ಮಾ.24ರಂದು ಸಂಪುಟ ಸಭೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ನೀಡಿದ್ದ 2 (ಬಿ) ಮೀಸಲಾತಿ ರದ್ದುಪಡಿಸಿದೆ. ಇದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ಮಾಡಿರುವ ವ್ಯವಸ್ಥಿತ ಷಡ್ಯಂತ್ರ. ಸಂವಿಧಾನದಲ್ಲಿ ಧರ್ಮ ಆಧಾರಿತ ಮೀಸಲಾತಿ ಇಲ್ಲ. 2 ಬಿ ಪ್ರವರ್ಗದಡಿ ಇತರೇ ಹಿಂದುಳಿದ ವರ್ಗಗಳಂತೆ ಸರ್ಕಾರ ಮುಸ್ಲಿಂ ಸಮುದಾಯ ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದ ವರ್ಗ ಎಂದು ವೈಜ್ಞಾನಿಕ ಅಧ್ಯಯನದ ಮೂಲಕ ಗುರುತಿಸಿತ್ತು. ಸ್ವಾತಂತ್ರ್ಯ ನಂತರ ನಾಗನಗೌಡ ಸಮಿತಿ, ವೆಂಕಟಸ್ವಾಮಿ ಮತ್ತು ಚಿನ್ನಪ್ಪರೆಡ್ಡಿ ಆಯೋಗ ಕೂಡ ಮುಸಲ್ಮಾನರನ್ನು ಹಿಂದುಳಿದ ವರ್ಗಗಳಿಗೆ ಸೇರ್ಪಡೆ ಮಾಡಿದ್ದವು ಎಂದು ಹೇಳಿದರು.
ಸಂವಿಧಾನದ ಆಶಯಕ್ಕೆ ವಿರುದ್ಧ ನಡೆ: ಸರ್ಕಾರ ಮುಸ್ಲಿಂ ಸಮುದಾಯವನ್ನು ಹತ್ತಿಕ್ಕುವ ದುರುದ್ದೇಶದಿಂದ 2-ಬಿ ಮೀಸಲಾತಿ ರದ್ದುಮಾಡಿ ಸಂವಿಧಾನದ ಆಶಯಕ್ಕೆ ವಿರುದ್ಧ ವಾಗಿ ನಡೆದುಕೊಂಡಿದೆ. ಸಮುದಾಯದ ಹಿತದೃಷ್ಟಿಯಿಂದ ರಾಜ್ಯಪಾಲರು ಮೀಸಲಾತಿ ರದ್ದುಪಡಿಸುವಂತೆ ಸೂಚನೆ ನೀಡಬೇಕು ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಸಂಘಟನೆ ಪದಾಧಿಕಾರಿಗಳಾದ ಸೈಯದ್ ಸಫೀರ್, ಅಮಾನುಲ್ಲಾ ಬಾಬು, ಶಜಿಲ್ ಅಹಮ್ಮದ್, ಅಮೀರ್‌ಖಾನ್, ಫೈರೋಜ್ ಪಾಷ, ಆನೆಮಹಲ್ ಸಿದ್ಧಿಕ್, ಅಹಮ್ಮದ್ ಅಲಿ ಮತ್ತಿತರರು ಪಾಲ್ಗೊಂಡಿದ್ದರು.