ಚಾಮರಾಜನಗರ: ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಮಹಿಳೆ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಘಟನೆಯನ್ನು ಖಂಡಿಸಿ ನಗರದಲ್ಲಿ ಎಸ್‌ಡಿಪಿಐ ಜಿಲ್ಲಾ ಸಮಿತಿಯಿಂದ ಮಂಗಳವಾರ ಸಂಜೆ ಪಂಜಿನ ಮೆರವಣಿಗೆ ನಡೆಸಲಾಯಿತು.
ನಗರದ ಲಾರಿ ನಿಲ್ದಾಣದಿಂದ ಭುವನೇಶ್ವರಿ ವೃತ್ತದವರೆಗೆ ಪಂಜಿನ ಮೆರವಣಿಗೆ ನಡೆಸಿ ಘಟನೆಯನ್ನು ಖಂಡಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ಕಲೀಲ್‌ಉಲ್ಲಾ ಅವರು, ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ, ಅತ್ಯಾಚಾರ ಮತ್ತು ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದು, ಮಹಿಳೆಯರ ಗೌರವವನ್ನು ಅಲ್ಲಿ ನಿರ್ಲಕ್ಷಿಸಲಾಗಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಳ್ವಿಕೆಯಲ್ಲಿ ಮಹಿಳೆಯರ ವಾಸಕ್ಕೆ ಉತ್ತರಪ್ರದೇಶ ಒಂದು ದುಃಸ್ವಪ್ನದ ಸ್ಥಳವಾಗಿ ಮಾರ್ಪಟ್ಟಿದೆ ಎಂದು ಆರೋಪಿಸಿದರು.
ಈ ಕ್ರೂರ ಘಟನೆಯ ದುಃಖಕರ ಮತ್ತು ಬೇಸರದ ಸಂಗತಿಯೆಂದರೆ, ಹತ್ರಾಸ್ ಹುಡುಗಿಯನ್ನು ಹತ್ಯೆ ಮಾಡಿದ ರೀತಿಯಲ್ಲಿಯೇ ಕೊಲೆಯಾದ ನಿರ್ಭಯಳಿಗೆ ನ್ಯಾಯ ಕೋರಿ ಬೀದಿಗಿಳಿದವರು ಈಗ ಮೌನವಾಗಿದ್ದಾರೆ.
ಅತ್ಯಾಚಾರ ಮತ್ತು ಕಿರುಕುಳಕ್ಕೆ ಬಲಿಯಾದವರನ್ನು ಅವರ ಸ್ಥಾನಮಾನ, ಜಾತಿ ನೋಡಿ ಪರಿಗಣಿಸಲಾಗುತ್ತದೆ ಎಂಬುದು ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದರು.
ಪಂಜಿನ ಮೆರವಣಿಗೆಯಲ್ಲಿ ಪಕ್ಷದ ಮುಖಂಡರಾದ ಮಹೇಶ್ ಗಾಳಿಪುರ, ಜಬೀನೂರ್, ಸಿ.ಎಸ್.ಸೈಯದ್ ಆರೀಫ್ ಮೊಹಮ್ಮದ್ ಅಮೀಖ್ ಸಂಘಸೇನಾ, ಕೆ.ಎಂ.ನಾಗರಾಜು ಸಿ.ಎಂ. ಕೃಷ್ಣಮೂರ್ತಿ ಮತ್ತಿತರರು ಭಾಗವಹಿಸಿದ್ದರು.