ಧಾರವಾಡ: ಇಲ್ಲಿನ ಎಸ್‌ಡಿಎಂ ವಿಶ್ವವಿದ್ಯಾಲಯದ ಸಭಾಭವನದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವವಿದ್ಯಾಲಯದ ಕುಲಪತಿ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರ ಜನ್ಮದಿನವನ್ನು ಸಂಸ್ಥಾಪಕರ ದಿನವನ್ನಾಗಿ ಆಚರಿಸಲಾಯಿತು.
ಈ ವೇಳೆ ವರ್ಚುವಲ್ ಮೂಲಕ ಮಾತನಾಡಿದ ಡಾ|ಡಿ.ವೀರೇಂದ್ರ ಹೆಗ್ಗಡೆ ಅವರು, ತಮ್ಮ ಜನ್ಮದಿನವನ್ನು ಸಂಸ್ಥಾಪಕರ ಜನ್ಮದಿನವನ್ನಾಗಿ ಆಚರಿಸಿದ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಇದಲ್ಲದೇ, ಸಿಬ್ಬಂದಿಗಳ ಪ್ರೀತಿ, ಕಾಳಜಿ, ಅಭಿಮಾನಕ್ಕೆ ಆಶೀರ್ವದಿಸಿದರು.
ಉತ್ತರ ಕರ್ನಾಟಕದಲ್ಲಿ ಶಿಕ್ಷಣ ಸಂಸ್ಥೆ ಆರಂಭಿಸುವ ಬಗ್ಗೆ ಬಹಳಷ್ಟು ಆತಂಕವಿತ್ತು. ಆದರೆ ನ.ವಜ್ರಕುಮಾರ ಅವರು ಅಭಯ ನೀಡಿ, ಹೆಗಲು ಕೊಟ್ಟು ನಿಂತಿದ್ದರಿಂದ ಸಂಸ್ಥೆ ಹೆಮ್ಮರವಾಗಿ ಬೆಳೆಯಲು ಕಾರಣವಾಗಿದೆ. ಗುಣಮಟ್ಟದ ಶಿಕ್ಷಣದಿಂದ ಎಸ್‌ಡಿಎಂ ಸಂಸ್ಥೆ ಇದೀಗ ದೇಶದಲ್ಲಿ ಪ್ರತಿಷ್ಠಿತ ಸಂಸ್ಥೆಯಾಗಿ ಬೆಳೆದಿದೆ. ನಿರಂಜನಕುಮಾರ ಶ್ರಮದ ಫಲದಿಂದ ಸಂಸ್ಥೆ ವಿಶ್ವವಿದ್ಯಾಲಯವಾಗಿ ಮಾರ್ಪಟ್ಟಿದೆ. ಮುಂದೆಯೂ ಒಗ್ಗೂಡಿ ಕೆಲಸ ಮಾಡೋಣ ಎಂದರು.
ಉಪಕುಲಪತಿ ಡಾ|ನಿರಂಜನಕುಮಾರ ಮಾತನಾಡಿ, 20ನೇ ವಯಸ್ಸಿನಲ್ಲಿ ಪಟ್ಟಾಧಿಕಾರಿಯಾಗಿ ನೇಮಕಗೊಂಡು ಸಕಲ ಜವಾಬ್ದಾರಿ ಯಶಸ್ವಿಯಾಗಿ ನಿರ್ವಹಿಸಿದ್ದಾರೆಂದರು. ಅನೇಕ ಬಡ ವಿದ್ಯಾರ್ಥಿಗಳಿಗೆ ವಿದ್ಯಾದಾನ, ಅನ್ನದಾನ, ಅಭಯ ದಾನ ಜತೆಗೆ ಸಾವಿರಾರು ಜನರಿಗೆ ಉದ್ಯೋಗ ಒದಗಿಸಿದ್ದಾರೆ. ಅವರ ಕಾರ್ಯಕ್ಕೆ ರಾಜಶ್ರೀ, ಪದ್ಮವಿಭೂಷಣ ಪ್ರಶಸ್ತಿಗಳು ಒಲಿದು ಬಂದಿವೆ ಎಂದರು.
ಹಿರಿಯ ಶಿಕ್ಷಣ ತಜ್ಞ ಗುರುರಾಜ ಕರ್ಜಗಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ನೈತಿಕತೆ, ಬದ್ಧತೆ ಅಳವಡಿಸಿಕೊಳ್ಳುವ ವಿಧಾನ ಶಿಕ್ಷಣ ಮಾತ್ರವೇ ಕಲಿಸುತ್ತದೆ. ಸಹನೆ, ತಾಳ್ಮೆ ಗುರಿ ತಲುಪಲು ವ್ಯಕ್ತಿಗೆ ಸಹಾಯ ಮಾಡುತ್ತಿವೆ ಎಂದರು. ಪದವಿಗಳು ಇತ್ತೀಚೆಗೆ ಬದುಕಿನ ಮಜಲುಗಳನ್ನು ಕಲಿಸುವ ಬದಲು ಅಂತಸ್ತು ಬೆಳೆಸಿ ಮೌಲ್ಯಗಳನ್ನು ಮಾರುವ ಹಂತಕ್ಕೆ ಬಂದಿವೆ. ಹೀಗಾಗಿ ಪದವಿ ಪಡೆಯುವುದು ಮುಖ್ಯವಲ್ಲ. ಅದು ಜೀವನದ ಮೌಲ್ಯಗಳನ್ನು ಕಲಿಸಬೇಕು ಎಂದರು.
ಪದ್ಮಲತಾ ನಿರಂಜನಕುಮಾರ,ಪ್ರೊ|ಜೀವನಂದಕುಮಾರ, ಎಸ್.ಕೆ.ಜೋಶಿ, ರಜಿಸ್ಟಾರ್ ಯು.ಎಸ್.ದಿನೇಶ, ಆಡಳಿತ ಮಂಡಳಿ ನಿರ್ದೇಶಕ ಸಾಕೇತ ಶೆಟ್ಟಿ, ವಿತ್ತಾ ಧಿಕಾರಿ ವಿ.ಜಿ.ಪ್ರಭು ಸೇರಿದಂತೆ ಹಲವರು ಇದ್ದರು. ಇದೇ ಸಂದರ್ಭದಲ್ಲಿ ಡಾ|ಡಿ.ವೀರೇಂದ್ರ ಹೆಗ್ಗಡೆ ಅವರ ಕಿರುಚಿತ್ರವನ್ನು ಪ್ರದರ್ಶಿಸಲಾಯಿತು. ಡಾ|ಎಸ್.ಕೆ.ಜೋಶಿ ಸ್ವಾಗತಿಸಿದರು. ಎಸ್ ಡಿಎಂ ದಂತ ಮಹಾವಿದ್ಯಾಲಯ ಪ್ರಾಚಾರ್ಯ ಡಾ|ಬಲರಾಮ ನಾಯ್ಕ ವಂದಿಸಿದರು.