Advertisement

ಶಿಲ್ಪಿಗಳ ಕೈಯಲಿ ಐತಿಹಾಸಿಕ್ಲಹಂಪಿಯ ವೈಭವ ಅನಾವರಣ!

03:38 PM Aug 03, 2018 | |

ಹೂವಿನಹಡಗಲಿ: ಐತಿಹಾಸಿಕ ಹಂಪಿಯ ವಿಜಯನಗರ ಅರಸರ ಕಾಲದ ಶಿಲ್ಪಕಲಾ ವೈಭವವನ್ನು ಕಲಾವಿದರು ತನ್ನ ಕುಸುರಿಯಲ್ಲಿ ಅನಾವರಣಗೊಳಿಸಿದ್ದಾರೆ. ಕೆತ್ತನೆ ಮಾಡಿದ ಒಂದೊಂದು ವಿಗ್ರಹವೂ ಕಲಾಪ್ರೇಮಿಗಳನ್ನು ಆಕರ್ಷಿಸುತ್ತಿವೆ.!

Advertisement

ಹೌದು, ಪಟ್ಟಣದಲ್ಲಿ ರಂಗಭಾರತಿ, ಎಂ.ಪಿ. ಪ್ರಕಾಶ್‌ ಸಮಾಜಮುಖೀ ಟ್ರಸ್ಟ್‌ ವತಿಯಿಂದ ಸುಮಾರು 12 ದಿನಗಳ
ಕಾಲ ಆಯೋಜಿಸಿರುವ ರಾಜ್ಯ ಮಟ್ಟದ ಸಮಕಾಲೀನ ಶಿಲ್ಪಕಲಾ ಶಿಬಿರದಲ್ಲಿ ಕಲಾವಿದನ ಕುಸುರಿಯಲ್ಲಿ ಅರಳಿದ ಕಲಾವಿಗ್ರಹಗಳು ಜನಾಕರ್ಷಣೆ ಪಡೆದಿವೆ.

ಕಳೆದ ಜು.20ರಂದು ಆರಂಭಗೊಂಡಿರುವ ಶಿಲ್ಪಕಲಾ ಶಿಬಿರದಲ್ಲಿ ರಾಜ್ಯದ ವಿವಿಧೆಡೆಯಿಂದ ಪಾಲ್ಗೊಂಡಿರುವ 20ಕ್ಕೂ ಹೆಚ್ಚು ಶಿಲ್ಪಿಗಳು ಕನ್ನಡ ನಾಡಿನ ರಾಜ, ಮಹಾರಾಜರ  ಮನೆತನದಲ್ಲಿ ಅರಳಿದ ಕಲೆ, ಶಿಲ್ಪಕಲೆಯ ಶ್ರೀಮಂತಿಕೆಯ ಛಾಪು ಮತ್ತೂಮ್ಮೆ ಅನಾವರಣಗೊಳಿಸಿದ್ದಾರೆ.

ಶಿಲ್ಪಿಗಳಾದ ಮಹಾದೇವ, ಪಿ.ರಾಜಶೇಖರ್‌ ಅವರು, ವಿಶ್ವ ವಿಖ್ಯಾತ ಹಂಪಿಯಲ್ಲಿನ ವಿಜಯನಗರ ಅರಸರ ಕಾಲದ ಶಿಲ್ಪಕಲಾ ವೈಭವವನ್ನು ತನ್ನ ಕೆತ್ತಿನೆಯಲ್ಲಿ ಸೆರೆ ಹಿಡಿದಿದ್ದಾರೆ. ಅಲ್ಲದೇ, ಕಲ್ಲಿನ ರಥದ ಶಿಲ್ಪಕಲೆ ಮನಮೋಹಕವಾಗಿದೆ.

ಮಾತ್ರವಲ್ಲ, ಮಂಡ್ಯದ ಶಿಲ್ಪಿ ಪಿ. ಸಂದೀಪ್‌, ದಾವಣಗೆರೆ ಶಿಲ್ಪಿ ಪ್ರಕಾಶ್‌ ಆಚಾರ್‌ ತನ್ನ ಕುಸುರಿಯಲ್ಲಿ ಒಡಮೂಡಿರುವ
ಇಡೀಯಾದ ಹಂಪಿಯ ಶಿಲ್ಪಕಲೆ ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಹಂಪಿಯಲ್ಲಿನ ವಿಜಯವಿಠಲ ದೇವಸ್ಥಾನ, ಹಜಾರ ರಾಮ ದೇವಸ್ಥಾನ, ಶ್ರೀವಿರೂಪಾಕ್ಷೇಶ್ವರ ದೇವಸ್ಥಾನ, ಲೋಟಸ್‌ ಮಹಲ್‌, ಉಗ್ರ ನರಸಿಂಹ, ಆನೆ ಸಾಲು ಒಳಗೊಂಡಂತೆ ಸಂಪೂರ್ಣ ವಿಜಯನಗರ ಅರಸರ ಕಾಲದ ಕಲೆಯನ್ನು ಒಂದೇ ಕಲ್ಲಿನಲ್ಲಿ ಕೆತ್ತಿರುವುದು ಕಲಾಪ್ರೇಮಿಗಳ ಆಸಕ್ತಿ ಇನ್ನಷ್ಟು ಕುತೂಲಹ ಕೆರಳಿಸುತ್ತದೆ.

Advertisement

ಅಶೋಕ ಸ್ತಂಭದಲ್ಲಿ ಒಂದೆಡೆ ಬುದ್ಧನ ವಿಗ್ರಹ, ಮೂರು ಕಡೆ ಸಿಂಹವಿರುವ ವಿಗ್ರಹ ಹೆಚ್ಚು ಆಕರ್ಷಣೆಯಾಗಿದೆ. ಇನ್ನು ಭೂಮಿಯ ಮೇಲೆ ಹೆಚ್ಚು ಕಾಲ ಜೀವಿಸುವ ಪ್ರಾಣಿ ಆಮೆಯ ವಿಗ್ರಹ. ಅದರ ಮೇಲೆ ಎರಡು ಕೈಯಲ್ಲಿ ತೆರೆದ ಪುಸ್ತಕ. ನಂತರ ಅದರಲ್ಲಿ ಗಿಡ ಬೆಳೆಸಿ ಶಿಕ್ಷಣ ಪಡೆದರೆ ಮನುಷ್ಯನ ಜ್ಞಾನ ವೃದ್ಧಿಯಾಗುತ್ತದೆ ಎಂಬ ಭಾವಾರ್ಥ ಸೂಚಿಸುವ ಕಲಾಕೃತಿ ಪ್ರಸ್ತುತ ದಿನದಲ್ಲಿ ಪುಸ್ತಕ ಪ್ರೀತಿ ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಪ್ರತಿಯೊಬ್ಬರೂ ಜ್ಞಾನ ವೃದ್ಧಿಗಾಗಿ ಪುಸ್ತಕವನ್ನು ಓದಬೇಕು ಎನ್ನುವ ಅಂಶವನ್ನು ತಿಳಿಸಿಕೊಡುತ್ತದೆ. ಬಾದಾಮಿಯ ಚಾಲುಕ್ಯರ ಕಾಲದಲ್ಲಿ
ಶಿಲ್ಪಕಲೆ ಅಭಿವೃದ್ಧಿಯನ್ನು ತೋರುವ ಗುಹಾಂತರ ದೇವಾಲಯ, ಮಾಲಗಿತ್ತಿ ಶಿವಾಲಯ, ಐಹೊಳೆ, ದುರ್ಗಾ ಟೆಂಪಲ್‌, ಚಾಲುಕ್ಯರ ರಾಜ ಲಾಂಛನ ಪರಿಚಸುವ ಶಿಲ್ಪಕಲೆ ನಿಜಕ್ಕೂ ಒಂದು ಶಿಲ್ಪಕಲಾ ಲೋಕವನ್ನೇ ಸೃಷ್ಟಿ ಮಾಡಿದಂತಿದೆ. ಸಾಲದೆಂಬಂತೆ, ಅಫ್ಘಾನಿಸ್ತಾನದ ಗಾಂಧಾರ ಶೈಲಿಯಲ್ಲಿರುವ ಬುದ್ಧನ ವಿಗ್ರಹ ನಿಜಕ್ಕೂ ಅತ್ಯದ್ಭುತವಾಗಿದೆ.

ಒಟ್ಟಾರೆ ಶಿಬಿರದ ನಿರ್ದೇಶಕ ಉತ್ತರ ಕನ್ನಡ ಜಿಲ್ಲೆಯ ಶಿಲ್ಪಿ ಚಂದ್ರಶೇಖರ್‌ನಾಯ್ಕ , ಸಂಚಾಲಕ ಸ್ಥಳೀಯ ಸೋಗಿ ಗ್ರಾಮದ ಶಿಲ್ಪಿ ಕೆ.ವಿರೂಪಾಕ್ಷಪ್ಪ ಸತತವಾಗಿ 12 ದಿನಗಳ ಕಾಲ ಶಿಲ್ಪಕಲಾ ಶಿಬಿರದ ಯಶಸ್ಸಿಗೆ ಶ್ರಮಿಸಿದ್ದಾರೆ

ಈ ಸಮಕಾಲೀನ ಶಿಲ್ಪಕಲಾ ಶಿಬಿರಕ್ಕೆ ರಾಜ್ಯದ ವಿವಿಧೆಡೆಯಿಂದ ಕಲಾವಿದರು ಆಗಮಿಸಿದ್ದಾರೆ. ಎಲ್ಲರೂ ಶಿಬಿರದಲ್ಲಿ ಹಗಲಿರುಳು ತಮ್ಮ ಕೆತ್ತನೆಯ ಕೈ ಚಳಕ ತೋರಿಸಿದ್ದಾರೆ. ನಾವು ಈಗಾಗಲೇ ರಾಜ್ಯದಲ್ಲಿ ಸುಮಾರು 5ರಿಂದ 6 ಜಿಲ್ಲೆಯಲ್ಲಿ 15ಕ್ಕೂ ಹೆಚ್ಚಿನ ಶಿಬಿರಗಳಲ್ಲಿ ಭಾಗವಹಿಸಿದ್ದೇವು. ಪ್ರಸ್ತುತ ಶಿಬಿರದಲ್ಲಿ ಹೆಚ್ಚಿನ ಜವಾಬ್ದಾರಿ ನೀಡಿರುವುದರಿಂದ ಎತ್ತರದ ಶಿಲ್ಪಕಲೆಯ ವಿಗ್ರಹಗಳನ್ನು ಕೆತ್ತಲಾಗಿದೆ. 

ಇತರೆ ಶಿಬಿರದಲ್ಲಿ ಕೇವಲ 3 ರಿಂದ 4 ಅಡಿ ಎತ್ತರದ ವಿಗ್ರಹಗಳನ್ನು ಕೆತ್ತಲಾಗುತ್ತಿತ್ತು. ಆದರೆ ಇಲ್ಲಿ ಸುಮಾರು 6 ರಿಂದ 7 ಅಡಿ ಎತ್ತರದ ವಿಗ್ರಹಗಳನ್ನು ಕೆತ್ತಲಾಗಿದ್ದು ಒಂದು ಹೊಸ ಪ್ರಯೋಗದಂತಿದೆ.  ಚಂದ್ರಶೇಖರ್‌ನಾಯ್ಕ, ಶಿಬಿರದ ನಿರ್ದೇಶಕರು. 

„ವಿಶ್ವನಾಥ ಹಳ್ಳಿಗುಡಿ

Advertisement

Udayavani is now on Telegram. Click here to join our channel and stay updated with the latest news.

Next