ಧಾರವಾಡ: ಕಳೆದ ಬಾರಿ ಕೆಲಗೇರಿಯ ಕೆರೆಯಲ್ಲಿ ಗಣೇಶ ವಿಸರ್ಜನೆ ಮಾಡದೇ ತಾತ್ಕಾಲಿಕ ಪರ್ಯಾಯ ವ್ಯವಸ್ಥೆ ಮಾಡಿ ಮಾದರಿ ಆಗಿದ್ದ ಕೆಲಗೇರಿ ಗ್ರಾಮಸ್ಥರು, ಈ ಬಾರಿಯೂ ಕೆರೆಯಲ್ಲಿ ಗಣೇಶ ವಿಸರ್ಜನೆ ನಿಷೇಧಿಸಿದ್ದಾರೆ.
ಈ ವಿಷಯವಾಗಿ ಕಲ್ಮೇಶ್ವರ ದೇವಸ್ಥಾನದಲ್ಲಿ ಗ್ರಾಮಸ್ಥರು, ವಾಲ್ಮಿ ಸಂಸ್ಥೆ, ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಕೃಷಿ ವಿಶ್ವವಿದ್ಯಾಲಯ ಹಾಗೂ ಗ್ರೀನ್ ಆರ್ಮಿ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆಯಲ್ಲಿ ಒಮ್ಮತದ ನಿರ್ಣಯ ತೆಗೆದುಕೊಂಡಿದ್ದಾರೆ.
ವಾಲ್ಮಿ ಸಂಸ್ಥೆಯ ನಿರ್ದೇಶಕ ಡಾ| ರಾಜೇಂದ್ರ ಪೊದ್ದಾರ ಮಾತನಾಡಿ, ಈ ಬಾರಿ ಕೆರೆಗೆ ಉತ್ತಮವಾದ ನೀರು ಬಂದಿದೆ. ಈ ನೀರನ್ನು ಶುದ್ಧವಾಗಿ ಉಳಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ಕರ್ತವ್ಯದಲ್ಲಿ ಕಳೆದ ಬಾರಿ ಕೆಲಗೇರಿ ಒಂದು ನಿದರ್ಶನವನ್ನು ಹುಟ್ಟಿ ಹಾಕಿದ್ದು, ಈ ಬಾರಿಯೂ ಆ ಮಾದರಿ ನಿಭಾಯಿಸಿಕೊಂಡು ಹೋಗಲು ಗ್ರಾಮಸ್ಥರೊಂದಿಗೆ ತಮ್ಮ ವಾಲ್ಮಿ ಸಂಸ್ಥೆ ಮತ್ತೆ ಬೆನ್ನುಲುಬಾಗಿ ನಿಲ್ಲುತ್ತದೆ ಎಂದು ತಿಳಿಸಿದರು.
ಉಪನಗರ ಪೊಲೀಸ್ ಠಾಣೆಯ ಸರ್ಕಲ್ ಇನ್‌ಸ್ಪೆಕ್ಟರ್ ಮಹಾಂತೇಶ ಬಸಾಪೂರ ಮಾತನಾಡಿ, ನೆರೆ ಹಾವಳಿಯಿಂದ ಜನ ತತ್ತರಿಸಿದ್ದು ದುಂದು ವೆಚ್ಚ ಮಾಡದೆ ಸರಳವಾಗಿ ಹಬ್ಬ ಆಚರಿಸಬೇಕು. ಅಶ್ಲೀಲ ಸಂಗೀತ ಹಚ್ಚದೇ, ಪಟಾಕಿಗಳನ್ನು ಉಪಯೋಗಿಸದೆ, ಮದ್ಯಪಾನ ಮಾಡಿ ಕುಣಿಯದೇ ಸರಳ, ಶಾಂತ ಹಾಗೂ ಪರಿಸರ ಸ್ನೇಹಿ ಗಣೇಶ ಚತುರ್ಥಿ ಆಚರಿಸಬೇಕು ಎಂದರು.
ಕಲ್ಮೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ರುದ್ರಗೌಡ ಪಾಟೀಲ ಮಾತನಾಡಿ, ತಾತ್ಕಾಲಿಕ ಪರ್ಯಾಯ ವ್ಯವಸ್ಥೆಯಲ್ಲಿ ವಿಸರ್ಜಿಸಿ ಪರಿಸರ ಸ್ನೇಹಿ ಉತ್ಸವ ಆಚರಿಸಬೇಕೆಂಬ ನಿರ್ಣಯವನ್ನು ಗ್ರಾಮದ ಹಿರಿಯರ ಸಮ್ಮುಖದಲ್ಲಿ ತೀರ್ಮಾನಿಸಲಾಗಿದೆ. ಎಲ್ಲರೂ ಈ ನಿರ್ಣಯಕ್ಕೆ ಬದ್ಧರಾಗಿ ಶಾಂತಿಯುತ ಹಬ್ಬವನ್ನು ಆಚರಿಸೋಣ ಎಂದು ಗ್ರಾಮಸ್ಥರಲ್ಲಿ ಮನವಿ ಮಾಡಿದರು.
ವಿಜಯಲಕ್ಷ್ಮೀ ಲೂತಿಮಠ, ಡಾ| ರಾಜು ಚವ್ಹಾಣ, ಪ್ರಕಾಶ ಗೌಡರ, ಶಿಲ್ಪಾ ಬೆಟಗೇರಿ, ನಾಗೇಶ ತಳವಾಯಿ, ಬಸಯ್ನಾ ಹಿರೇಮಠ, ಕರಿಬಸಯಯ್ಯ ಕಡ್ಲಿ, ಎನ್.ಸಿ. ಕಲ್ಲಯ್ಯನಮಠ, ಶಿವನಪ್ಪ ಸಾದರ, ಶೇಖರಗೌಡ ಪಾಟೀಲ, ಶಂಕರ ಕೋಟ್ರಿ, ಚನ್ನಬಸಯ್ಯ ಹೊಂಗಲಮಠ, ರಾಯಪ್ಪ ಮುಗದ, ಪ್ರಭು ಸಾದರ ಇದ್ದರು.