Advertisement

ಅಹಿಂಸಾತ್ಮಕ ಚಿತ್ರ!

03:33 PM Oct 20, 2018 | |

ಯಾರಿಗೂ ನೋವು ಮಾಡದೇ ಇರುವುದು ಬಾಪೂಜಿ ಬೋಧಿಸಿದ ಅಹಿಂಸಾ ತಣ್ತೀದ ಸಾರ. ಗಾಂಧೀಜಿಯ ಆದರ್ಶಗಳನ್ನು ಪಾಲಿಸುವ ಈ ಕಲಾವಿದ, ಕೆಲವೊಮ್ಮೆ ಆ ನಿಯಮವನ್ನು ಮುರಿಯುತ್ತಾರೆ. ಮರ, ಕಲ್ಲು, ಮಣ್ಣು, ಮೇಣದ ಮೇಲೆ ಉಳಿಯಿಂದ ನಾಜೂಕಾದ ಪೆಟ್ಟುಗಳನ್ನು ಹೊಡೆದು, ಕಲ್ಲಿಗೂ ನೋವಾಗದಂತೆ ಬಾಪೂಜಿಯನ್ನೂ, ಅವರ ಚರಕವನ್ನೂ ಸೃಷ್ಟಿಸುತ್ತಾರೆ. ಇವರ ಹೆಸರು ಶಿವಕುಮಾರ್‌. ಮಧುಗಿರಿಯವರಾದ ಇವರು, ಶಿಲ್ಪಕಲೆ ಹಾಗೂ ಚಿತ್ರಕಲೆಯಲ್ಲಿ ಪಳಗಿದ್ದು, ಗಾಂಧೀಜಿ, ಬುದ್ಧ, ಬಸವ, ಚರಕ ಸೇರಿದಂತೆ 500 ಕ್ಕೂ ಹೆಚ್ಚು ಶಿಲ್ಪ ಹಾಗೂ ಚಿತ್ರಗಳನ್ನು ರಚಿಸಿದ್ದಾರೆ. 

Advertisement

  ಪೂರ್ವಜರಿಂದ ಈ ಕಲೆಯನ್ನು ಕಲಿತ ದೊಡ್ಡಪೇಟೆ ನಿವಾಸಿ ಶಿವಕುಮಾರ್‌ಗೆ, ಜೇಡಿಮಣ್ಣು, ಮರದ ತುಂಡು, ಮೇಣ, ಬಿಳಿಯ ಹಾಳೆ… ಹೀಗೆ ಕೈಗೆ ಸಿಗುವ ಎಲ್ಲ ವಸ್ತುಗಳೂ ಕಲೆಯನ್ನು ಹೊಮ್ಮಿಸುವ ಮಾಧ್ಯಮ. ಮೂಲತಃ ಛಾಯಾಗ್ರಾಹಕರಾಗಿದ್ದ ಇವರು ಈಗ ಫ‌ುಲ್‌ಟೈಂ ಕಲಾವಿದರು. ಜಲವರ್ಣ, ತೈಲವರ್ಣ ಹಾಗೂ ರೇಖಾಚಿತ್ರ ರಚನೆಯಲ್ಲಿ ಸಿದ್ಧಹಸ್ತರು. 

ಕುಂಚದಲ್ಲಿ ಅರಳಿದ ಗಣ್ಯರು

ಬಸವಣ್ಣ, ಸ್ವಾಮಿ ವಿವೇಕಾನಂದ, ಡಾ.ಬಿ.ಆರ್‌.ಅಂಬೇಡ್ಕರ್‌, ಸರ್‌.ಎಂ. ವಿಶ್ವೇಶ್ವರಯ್ಯ, ಬಾಬೂ ಜಗಜೀವನ್‌ರಾಂ, ಇಂದಿರಾಗಾಂಧಿ, ಡಾ. ಶಿವಕುಮಾರ ಸ್ವಾಮೀಜಿ, 8 ಜಾnನಪೀಠ ಪ್ರಶಸ್ತಿ ಪುರಸ್ಕೃತರು, ದೇವೇಗೌಡ, ಕುಮಾರಸ್ವಾಮಿ, ಶೀಲಾ ದೀಕ್ಷಿತ್‌ ಹೀಗೆ ಅನೇಕ ಗಣ್ಯರ ಚಿತ್ರಗಳು ಇವರ ಕುಂಚದಲ್ಲಿ ಅರಳಿವೆ. 

ಮರದಲ್ಲಿ “ಸರ್ವಧರ್ಮ ಸಾರ’

Advertisement

ಕಾಷ್ಟ ಶಿಲ್ಪಕಲೆ (ಮರದಲ್ಲಿ ಶಿಲ್ಪಗಳನ್ನು ರೂಪಿಸುವುದು)ಯಲ್ಲಿ ಶಿವಕುಮಾರ್‌ರದ್ದು ಪಳಗಿದ ಕೈ. ಭಗವದ್ಗೀತೆ, ಕುರಾನ್‌, ಬೈಬಲ್‌ನ ತತ್ವ$¤ಗಳನ್ನು ಸಾರುವ ಶಿಲ್ಪಗಳು, ಹಂಪಿಯ ಕಲ್ಲಿನರಥ, ತಾಜ್‌ಮಹಲ್‌, ಗೋಲಗುಂಬಜ್‌, ಗಾಂಧೀಜಿ ಚರಕ, ವೀಣೆ, ತಬಲ ಹಾಗೂ ಇತರೆ ವಾದ್ಯಗಳ ಶಿಲ್ಪಗಳನ್ನು ಮರದಲ್ಲಿ ಕೆತ್ತಿದ್ದಾರೆ. 

ಯಂತ್ರಗಳನ್ನೂ ತಯಾರಿಸ್ತಾರೆ
ಈ ಕಲಾಕಾರನಲ್ಲಿ ವಿಜ್ಞಾನಿಯೊಬ್ಬನ ಕೌಶಲವೂ ಅಡಗಿರುವುದು ಇನ್ನೊಂದು ವಿಶೇಷ. ಇವರು ಕಾಷ್ಟ ಶಿಲ್ಪಕಲೆಗೆ ಬೇಕಾದ ಯಂತ್ರೋಪಕರಣಗಳನ್ನು ಸ್ವತಃ ತಯಾರಿಸುತ್ತಾರೆ. ಮರ, ನೀರಿನ ಮೋಟಾರ್‌ ಹಾಗೂ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿ,ಲಕ್ಷಾಂತರ ರೂ. ಮೌಲ್ಯದ ಪ್ಲೇನಿಂಗ್‌ ಮೆಷಿನ್‌, ಲೇತ್‌ ಮೆಷಿನ್‌, ತೋಪಡಾ, ಡ್ರಿಲ್ಲಿಂಗ್‌ ಯಂತ್ರಗಳನ್ನು ತಯಾರಿಸಬಲ್ಲರು. 

ಮಣ್ಣು, ಮೇಣದಲ್ಲೂ ಕಲೆ
ಚಿತ್ರಕಲೆ, ಶಿಲ್ಪಕಲೆಯ ಜೊತೆಗೆ ಜೇಡಿಮಣ್ಣು ಹಾಗೂ ಮೇಣದಲ್ಲಿಯೂ ಮೂರ್ತಿಗಳನ್ನು ಮಾಡುತ್ತಾರೆ. ಮೇಣದಲ್ಲಿ ಮಹಾತ್ಮಾ ಗಾಂಧಿ ಹಾಗೂ ಚರಕವನ್ನು ತಯಾರಿಸಿ, ಬೌದ್ಧ ಗುರು ದಲೈಲಾಮಾ ಅವರಿಗೂ, ಗಾಂಧೀಜಿಯ ತೈಲವರ್ಣ ಚಿತ್ರವನ್ನು ಮೈಸೂರು ಮಹಾರಾಜ ಯದುವೀರ ಕೃಷ್ಣದತ್ತ ಒಡೆಯರ್‌ ಅವರಿಗೂ ಉಡುಗೊರೆಯಾಗಿ ನೀಡಿದ್ದಾರೆ. 

ಕಲಾ ಕುಟುಂಬ
ಶಿವಕುಮಾರ್‌ ಅವರ ತಾತ, ತಂದೆ-ತಾಯಿ, ಪತ್ನಿ…ಹೀಗೆ ಇಡೀ ಕುಟುಂಬಕ್ಕೆ ಕಲೆಯಲ್ಲಿ ಆಸಕ್ತಿಯಿದೆ. ಪತ್ನಿ ಶೋಭಾರಾಣಿ ಟೈಲರಿಂಗ್‌ ಜೊತೆಗೆ, ಬಟ್ಟೆಗಳಿಂದ ಚೆಂದದ ಬೊಂಬೆಗಳನ್ನು ತಯಾರಿಸುತ್ತಾರೆ. ಗಾಯಕಿ ಹಾಗೂ ವೀಣಾ ವಾದಕಿಯಾಗಿರುವ ಇವರು, ಮಕ್ಕಳಿಗೆ ವೀಣೆ ಕ್ಲಾಸ್‌ ನಡೆಸುತ್ತಾರೆ. ಶಿವಕುಮಾರ್‌ ತಂದೆ ಪ್ರೇಮ್‌ಕುಮಾರ್‌ ರಚಿಸಿದ, ಶ್ರೀ ರಾಘವೇಂದ್ರಸ್ವಾಮಿ, ಆದಿಗುರು ಶ್ರೀ ಶಂಕರರಾಚಾರ್ಯ, ನೆಹರೂ ತೈಲವರ್ಣ ಚಿತ್ರಗಳು ಮೂರ್ನಾಲ್ಕು ದಶಕಗಳು ಕಳೆದರೂ, ಮಾಸದೆ ಹಾಗೇ ಉಳಿದಿವೆ. 

  ಇವರ ಕಲಾಪ್ರೇಮಕ್ಕೆ ತಾಲೂಕು ಹಾಗೂ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಸರಕಾರಿ ನೌಕರರ ಸಂಘದ ಪ್ರಶಸ್ತಿ, ರಾಜ್ಯಮಟ್ಟದ ಕನ್ನಡ ಗಾರುಡಿ ಪ್ರಶಸ್ತಿ, ಗಡಿನಾಡು ರಾಯದುರ್ಗದಲ್ಲಿ ಸಾಹಿತ್ಯ ಪರಿಷತ್‌ ಪ್ರಶಸ್ತಿ ಹಾಗೂ ಸ್ಥಳೀಯ ಶಿಕ್ಷಣ ಸಂಸ್ಥೆಗಳಿಂದ ಪುರಸ್ಕಾರಗಳು ದೊರೆತಿವೆ. 

– ಸತೀಶ್‌ ಎಂ.ಎಸ್‌., ಮಧುಗಿರಿ

Advertisement

Udayavani is now on Telegram. Click here to join our channel and stay updated with the latest news.

Next