– ಉಡುಪಿಯ ಪ್ರವಾಸೋದ್ಯಮಕ್ಕೆ ಉತ್ತೇಜನ
Advertisement
ಉಡುಪಿ: ಉಡುಪಿ ಜಿಲ್ಲೆ ಸದ್ಯದಲ್ಲೇ ಹೊಸ ಸಾಹಸ ಕ್ರೀಡೆಗೆ ತೆರೆದುಕೊಳ್ಳಲಿದೆ. ಹೌದು, ಮುಂದಿನ ಸೆಪ್ಟಂಬರ್‌ನಿಂದ ಕಾಪು ಕಡಲ ಕಿನಾರೆಯಲ್ಲಿ ಸಾಹಸ ಕ್ರೀಡೆಯಾಗಿರುವ ಸ್ಕೂಬಾ ಡೈವಿಂಗ್ ಆರಂಭವಾಗಲಿದೆ. ಕೋರಲ್ ರೀಫ್ ಎಂದು ಕರೆಯಲ್ಪಡುವ ಈ ದ್ವೀಪದ ಸಮೀಪ ತಜ್ಞರ ತಂಡದಿಂದ ಸರ್ವೇ ನಡೆದಿದ್ದು, ಹೊಸ ಸಾಹಸ ಕ್ರೀಡೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಕಾಪು, ಮಲ್ಪೆ ಬೀಚ್ ಪರಿಸರದಲ್ಲಿ ಸ್ಕೂಬಾ ಡೈವಿಂಗ್ ನಿಟ್ಟಿನಲ್ಲಿ ನೈಸರ್ಗಿಕ ಕೋರಲ್ ರೀಫ್ ಅನ್ವೇಷಣೆ ನಡೆದಿದ್ದು, ಬಹುತೇಕ ಕಾಪುವನ್ನೇ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿದೆ. ಮಲ್ಪೆಯಲ್ಲಿ ಸ್ಕೂಬಾ ಡೈವಿಂಗ್ ತರಬೇತಿ ಕೇಂದ್ರವನ್ನು ಆಯೋಜಿಸುವ ಯೋಜನೆಯಿದೆ. ಆ ಮೂಲಕ ಸಚಿವ ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಮುತು ರ್ವಜಿಯಲ್ಲಿ ಉಡುಪಿಯನ್ನು ಪ್ರವಾಸೋದ್ಯಮ ಜಿಲ್ಲೆಯನ್ನಾಗಿ ಪರಿವರ್ತಿಸಲು ವಿಭಿನ್ನ ಪ್ರಯತ್ನ ನಡೆಯುತ್ತಿದೆ.
ಕಾಪು ಕಡಲಾಳದಲ್ಲಿ ಸ್ಕೂಬಾ ಡೈವಿಂಗ್ ಆಯೋಜಿಸುವ ಸಂಸ್ಥೆಗಾಗಿ ಇ-ಟೆಂಡರ್ ಕರೆಯಲಾಗಿದ್ದು, ಜು. 22 ಕೊನೆ ದಿನವಾಗಿದೆ. ಆಯೋಜಿಸುವ ಸಂಘಟಕರಿಗೆ ಹಲವು ಷರತ್ತುಗಳಿದ್ದು, ಸುರಕ್ಷೆ, ಸಿಲಿಂಡರ್, ಬೋಟ್, ತರಬೇತಿ ವ್ಯವಸ್ಥೆಯನ್ನೆಲ್ಲ ನೋಡಿದ ಆ ಬಳಿಕವಷ್ಟೇ ಅವರಿಗೆ ಅನುಮತಿ ನೀಡಲಾಗುತ್ತದೆ. ಆ ಬಳಿಕ ಅದರ ಎಲ್ಲ ಜವಾಬ್ದಾರಿಯನ್ನು ಅವರೇ ನಿರ್ವಹಿಸಲಿದ್ದು, ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಸ್ಕೂಬಾ ಡೈವಿಂಗ್‌ಗಾಗಿ 1 ಕೋಟಿ ರೂ. ಹಾಗೂ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ನೆರವು ನೀಡಲಿದೆ. ಸಂರಕ್ಷಿತ ಪ್ರದೇಶದಲ್ಲಿ ಆಳಕ್ಕೆ ಇಳಿದು ಅನುಭವಿಗಳಾದರೆ 1.15 ಗಂಟೆ, ಹೊಸಬರಾದರೆ ಅರ್ಧ ತಾಸು ಅಷ್ಟೇ ಸ್ಕೂಬಾ ಡೈವಿಂಗ್ ನಡೆಸಬಹುದು. ಈ ವೇಳೆ ಲೈಫ್ ಜಾಕೆಟ್, ಆಮ್ಲಜನಕ ಸಿಲಿಂಡರ್, ಕಪ್ಪೆ ಪಾದ ಧರಿಸಿ ತೆರಳಬೇಕು ಎನ್ನುತ್ತಾರೆ ಕಳೆದ 6 ವರ್ಷಗಳಿಂದ ಸ್ಕೂಬಾ ಡೈವಿಂಗ್ ಪರಿಣತಿ ಪಡೆದಿರುವ ಸಂದೀಪ್ ಶೆಟ್ಟಿ ಬೆಳ್ಕಲೆ.
Related Articles
ಕಡಲಾಳದಲ್ಲಿ ನಡೆಯುವ ಒಂದು ಸಾಹಸ ಕ್ರೀಡೆ ಇದಾಗಿದ್ದು, ರಾಜ್ಯದಲ್ಲಿ ಕೇವಲ ಉ.ಕ. ಜಿಲ್ಲೆಯ ನೇತ್ರಾಣಿಯಲ್ಲಿ ಮಾತ್ರ ಸ್ಕೂಬಾ ಡೈವಿಂಗ್ ನಡೆಯುತ್ತಿದೆ. ನೇತ್ರಾಣಿ ಮುರ್ಡೇಶ್ವರದಿಂದ 20 ಕಿ. ಮೀ. ದೂರದಲ್ಲಿದೆ. ಸ್ಕೂಬಾ ಡೈವಿಂಗ್ ತಿಳಿ ನೀರಿನ ಅಗತ್ಯವಿದ್ದು, ಮೇ ಅಂತ್ಯದಿಂದ ಸೆಪ್ಟಂಬರ್‌ವರೆಗೆ ಮಳೆಗಾಲದಲ್ಲಿ ಕಡಲ ಅಬ್ಬರದಿಂದಾಗಿ ಸ್ಕೂಬಾ ಡೈವಿಂಗ್ ಕಷ್ಟ.
Advertisement
ಕಾಪುವಿನಲ್ಲೇ ಯಾಕೆ?ಕಾಪು ಕಡಲಕಿನಾರೆಯಲ್ಲಿ ಸ್ಕೂಬಾ ಡೈವಿಂಗ್ ನಡೆಸಲು ಸರ್ವೇ ನಡೆಸಲಾಗಿದೆ. ಮುಖ್ಯವಾಗಿ 30 ಅಡಿ ಆಳವಿರಬೇಕಿದ್ದು, ಅದು ಇಲ್ಲಿದೆ. ಕೋರಲ್ ರೀಫ್ (ಹವಳ ದಿಬ್ಬಗಳು) ಇಲ್ಲಿದ್ದು, ಇದರಿಂದ ಸ್ಕೂಬಾ ಡೈವಿಂಗ್ ಮಾಡುವವರಿಗೂ ಸಮುದ್ರಾದಳದಲ್ಲಿ ನೋಡುವಂತಹ ನೈಸರ್ಗಿಕ ಸಂಪತ್ತುಗಳು ಸಿಗುತ್ತವೆ. ಅದಲ್ಲದೆ ಬೇರೆ ಜಾತಿಯ ಹಲವು ಮೀನುಗಳಿದ್ದು, ಇದು ಕೂಡ ಆಕರ್ಷಿಣೀಯವಾಗಿದೆ. ನೇತ್ರಾಣಿಯಲ್ಲಿ ಸ್ಕೂಬಾ ಡೈವಿಂಗ್ ಯಶಸ್ವಿಯಾಗಲು ಇದು ಕೂಡ ಒಂದು ಕಾರಣ ಎಂದು ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ಅನಿತಾ ಬಿ. ಆರ್. ಹೇಳುತ್ತಾರೆ. – ಪ್ರಶಾಂತ್ ಪಾದೆ