Advertisement

ಪಣಂಬೂರು ಬೀಚ್‌ ಆಕರ್ಷಣೆಗೆ ಸ್ಕೂಬಾ ಡೈವ್‌ !

09:14 AM Mar 05, 2020 | mahesh |

ಮಹಾನಗರ: ಕರಾವಳಿ ಯಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿದ್ದು, ಇಲ್ಲಿನ ಬೀಚ್‌ಗಳು ದೇಶ- ವಿದೇಶಗಳ ಪ್ರವಾಸಿಗರನ್ನು ಸೆಳೆಯುತ್ತಿವೆ. ಇದೇ ಕಾರಣಕ್ಕೆ ಪಣಂಬೂರು ಬೀಚ್‌ನಲ್ಲಿ ಸ್ಕೂಬಾ ಡೈವ್‌ ಮುಖೇನ ಪ್ರವಾಸಿಗರನ್ನು ಆಕರ್ಷಿಸಲು ಪ್ರವಾಸೋದ್ಯಮಿಗಳು ಮುಂದಾಗಿದ್ದಾರೆ.
ಜಿಲ್ಲೆಯ ಪ್ರಮುಖ ಬೀಚ್‌ಗಳ ಪೈಕಿ ಪಣಂಬೂರು ಬೀಚ್‌ ಕೂಡ ಒಂದು. ದಿನನಿತ್ಯ ಸಾವಿರಾರು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಈಗಾಗಲೇ, ಉಡುಪಿ, ಕಾರವಾರದಲ್ಲಿ ಪ್ರವಾಸೋದ್ಯ ಮಕ್ಕೆ ಹೊಸ ಭಾಷ್ಯ ಬರೆದ ಸ್ಕೂಬಾ ಡೈವ್‌ ಮಂಗಳೂರಿನಲ್ಲಿ ನಿರೀಕ್ಷೆ ಹುಟ್ಟು ಹಾಕಿದೆ.

Advertisement

ಒಪ್ಪಿಗೆಗಾಗಿ ಜಿಲ್ಲಾಡಳಿತಕ್ಕೆ ಮನವಿ
ಮಂಗಳೂರಿನ ಸಮುದ್ರದಲ್ಲಿ ಈಗಾಗಲೇ ಕೆಲವೊಂದು ಹಡಗುಗಳು ಮುಳುಗಡೆಯಾಗಿವೆ. ಸ್ಕೂಬಾ ಡೈವಿಂಗ್‌ ಮುಖೇನ ಇವುಗಳ ಅವಶೇಷಗಳ ವೀಕ್ಷಣೆ ಮತ್ತು ಜಲಚರಗಳ ವೀಕ್ಷಣೆಗೆ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ. ಜಿಲ್ಲಾಡಳಿತದಿಂದ ಈ ಸಂಬಂಧ ಒಪ್ಪಿಗೆ ನೀಡುವಂತೆ ಪಣಂಬೂರು ಬೀಚ್‌ ಪ್ರವಾಸೋದ್ಯಮ ನಿಗಮವು ಕೋರಿಕೊಂಡಿದೆ.

ಹಿಂದಿನ ಪ್ರಸ್ತಾವ ಕೈಬಿಡಲಾಗಿದೆ
ಪಣಂಬೂರು ಕಡಲ ತೀರದಿಂದ 15 ಕಿ.ಮೀ. ದೂರದ ಕಡಲಿನಲ್ಲಿ ಮುಳುಗಿದ ಎಂ.ವಿ. ಓಷನ್‌ ಬ್ಲೆಸಿಂಗ್‌ ಎಂಬ ಹಡಗನ್ನು ಸ್ಕೂಬಾ ಡೈವಿಂಗ್‌ ನಡೆಸಿ ನೋಡಲು ಈ ಹಿಂದೆ ಯೋಜನೆಯೊಂದು ಸಿದ್ಧಗೊಂಡಿತ್ತು. ಆದರೆ ಕೆಲವೊಂದು ತಾಂತ್ರಿಕ ಕಾರಣ ದಿಂದಾಗಿ ಈ ಪ್ರಸ್ತಾವವನ್ನು ಕೈಬಿಡಲಾಗಿದೆ. ಸ್ಕೂಬ್‌ ಡೈವ್‌ ನಡೆಸಿ ಈ ಹಡಗು ವೀಕ್ಷಣೆ ನಡೆಸಿ ದರೆ ಅಷ್ಟೊಂದು ಸ್ಪಷ್ಟವಾಗಿ ಹಡಗು ಗೋಚರವಾಗದು. ಅಲ್ಲದೆ ಆ ಪ್ರದೇಶದಲ್ಲಿ ಡಿಸೆಂಬರ್‌ ಬಳಿಕ ನೀರು ಅಷ್ಟೊಂದು ತಿಳಿಯಾಗಿರುವುದಿಲ್ಲ ಎಂಬ ಕಾರಣಕ್ಕೆ ಈ ಯೋಜನೆ ಕೈಬಿಡಲಾಗಿದೆ.ಹೊಸ ಯೋಜನೆಯಂತೆ ಇದೀಗ ಸ್ಕೂಬಾ ಡೈವ್‌ ನಡೆಸಲು ಪಣಂಬೂರು ಬೀಚ್‌ನ ಬೇರೊಂದು ಪ್ರದೇಶದ ಹುಡುಕಾಟ ನಡೆಯುತ್ತಿದೆ. ಎಲ್ಲವೂ ಅಂತಿಮ  ವಾದ ಬಳಿಕ ಜಿಲ್ಲಾಡಳಿತ ಸಹಿತ ಸಂಬಂಧ ಪಟ್ಟ ಇಲಾಖೆಯ ಒಪ್ಪಿಗೆ ದೊರೆತರೆ ಮಂಗಳೂರು ಸಮುದ್ರ ಕೂಡ ಸ್ಕೂಬಾ ಡೈವ್‌ ಪ್ರವಾಸಿಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಲಿದೆ.

ಸ್ಕೂಬಾ ಡೈವ್‌ ಅಂದರೆ ಸಮುದ್ರದ ನೀರಿನೊಳಗಡೆ ಧುಮುಕುವಂತಹ ಕಲೆಯಾಗಿದೆ. ಈ ವೇಳೆ ಲೈಫ್‌ ಜಾಕೆಟ್‌, ಆಮ್ಲಜನಕ ಇರಿಸಿ ಸಮುದ್ರ ಪ್ರವೇಶಿಸಲಾಗುತ್ತದೆ. ಉಸಿರಾಟದ ಕೊಳವೆಯೊಂದಿಗೆ ನೀರಿನಾಳಕ್ಕೆ ಇಳಿಯಲಾಗುತ್ತದೆ. ಪ್ರವಾಸಿಗರು ಸಮುದ್ರದಾಳದಲ್ಲಿರುವ ಹವಳದ ದಿಬ್ಬಗಳು, ಆಕರ್ಷಕ ಮೀನುಗಳು ಹಾಗೂ ವೈವಿಧ್ಯಮಯ ಜೀವರಾಶಿಗಳನ್ನು ವೀಕ್ಷಿಸಬಹುದು.

ಕಾಪುವಿನಲ್ಲಿ ಆರಂಭ
ಕಾರವಾರದ ನೇತ್ರಾಣಿ ದ್ವೀಪ ಹೊರತುಪಡಿಸಿ ಕಾಪು ಬೀಚ್‌ನಲ್ಲಿ ಸ್ಕೂಬಾ ಡೈವ್‌ಗೆ ಅವಕಾಶ ಕಲ್ಪಿಸಲಾ ಗಿದೆ. ಕಾಪು ಬೀಚ್‌ನಿಂದ ಸಮುದ್ರದಲ್ಲಿ 8 ಕಿ.ಮೀ. ದೂರದಲ್ಲಿ “ಮೂಲ್ಕಿ ಪಾರ್‌’ ಎಂಬಲ್ಲಿ ಅವಕಾಶ ದೊರೆತಿದೆ. 10 ವರ್ಷ ಮೇಲ್ಪಟ್ಟವರಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಮುಂಗಡ ಬುಕ್ಕಿಂಗ್‌ ಕೂಡ ಲಭ್ಯವಿದ್ದು, ಓರ್ವರಿಗೆ 4,500 ರೂ. ನಿಗದಿಪಡಿಸಲಾಗಿದೆ.

Advertisement

ಪರಿಶೀಲಿಸಲಾಗುತ್ತಿದೆ
ಪಣಂಬೂರ್‌ ಬೀಚ್‌ನಲ್ಲಿ ಮುಳುಗಿದ ಹಡಗು ಅವಶೇಷ ನೋಡುವ ನಿಟ್ಟಿನಲ್ಲಿ ಸ್ಕೂಬಾ ಡೈವ್‌ ಆರಂಭಿಸಲು ಚಿಂತಿಸಲಾಗಿತ್ತು. ಆದರೆ ಹಡಗು ಸ್ಪಷ್ಟವಾಗಿ ಕಾಣದು ಎಂದು ಈ ಯೋಜನೆ ಕೈ ಬಿಡಲಾಗಿದ್ದು, ಇದೀಗ ಕಡಲಿನ ಮತ್ತೂಂದು ಸ್ಥಳ ಪರಿಶೀಲಿಸಲಾಗುತ್ತಿದೆ. ಬಳಿಕ, ಸಂಬಂಧಪಟ್ಟ ಇಲಾಖೆಗಳ ಒಪ್ಪಿಗೆ ಪಡೆದು ಸ್ಕೂಬಾ ಡೈವ್‌ ಆರಂಭಿಸಲಾಗುವುದು.
 - ಯತೀಶ್‌ ಬೈಕಂಪಾಡಿ, ಪಣಂಬೂರು ಬೀಚ್‌ ಅಭಿವೃದ್ಧಿ ನಿಗಮದ ಸಿಇಒ

- ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next