Advertisement

ಭಾರತ ಬಂದ್‌ ಮಾಡಿದವರು ಕೋರ್ಟ್‌ ತೀರ್ಪು ಓದಿಲ್ಲ

06:10 AM Apr 04, 2018 | Karthik A |

ಹೊಸದಿಲ್ಲಿ: ಎಸ್ಸಿ, ಎಸ್ಟಿ ಕಾಯ್ದೆಯಲ್ಲಿ ತಿದ್ದುಪಡಿ ಮಾಡಿ ಕಳೆದ ತಿಂಗಳು ತಾನು ನೀಡಿದ್ದ ತೀರ್ಪಿಗೆ ತಡೆಯಾಜ್ಞೆ ತರಲು ಸುಪ್ರೀಂಕೋರ್ಟ್‌ ನಿರಾಕರಿಸಿದೆ. ತೀರ್ಪು ಮರುಪರಿಶೀಲನೆಗೆ ಕೋರಿ ಕೇಂದ್ರ ಸರಕಾರ ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಿದ ನ್ಯಾಯಾಲಯ ಮಂಗಳವಾರ ಈ ಕುರಿತು ಸ್ಪಷ್ಟನೆ ನೀಡಿದೆ. ಇದೇ ವೇಳೆ, ‘ಭಾರತ ಬಂದ್‌’ಗೆ ಕರೆನೀಡಿದವರು ತೀರ್ಪನ್ನು ಸರಿಯಾಗಿ ಓದಿಕೊಂಡಿಲ್ಲ’ ಎಂದಿದೆ. ಅಲ್ಲದೆ 10 ದಿನಗಳ ಅನಂತರ ಮೇಲ್ಮನವಿಯ ಸುದೀರ್ಘ‌ ವಿಚಾರಣೆ ನಡೆಸುವುದಾಗಿ ತಿಳಿಸಿದ ನ್ಯಾಯಾಲಯ, ಈ ಹಿಂದೆ ತನ್ನ ಹಿಂದಿನ ತೀರ್ಪಿಗೆ ಕಾರಣವಾದ ಪ್ರಕರಣದಲ್ಲಿ ಪ್ರಮುಖ ಪ್ರತಿವಾದಿಯಾಗಿದ್ದ ಮಹಾರಾಷ್ಟ್ರ ಹಾಗೂ ಇನ್ನಿತರ ರಾಜ್ಯ ಸರಕಾರಗಳು, ಈಗ ಕೇಂದ್ರ ಸರಕಾರ ಸಲ್ಲಿಸಿರುವ ಮೇಲ್ಮನವಿ ಬಗ್ಗೆ ಲಿಖೀತ ರೂಪದಲ್ಲಿ ತಮ್ಮ ಅಭಿಪ್ರಾಯಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕೆಂದು ಸೂಚಿಸಿದೆ.

Advertisement

ಮಾ. 20ರಂದು ನೀಡಲಾಗಿದ್ದ ತೀರ್ಪಿನಲ್ಲಿ, ‘ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರ ವಿರುದ್ಧದ ಜಾತಿ ನಿಂದನೆ ನಿಗ್ರಹ ಕಾಯ್ದೆ’ಯಲ್ಲಿನ ಕೆಲವು ನಿಯಮಗಳನ್ನು ಸಡಿಲಿಸಿದ್ದ ಸುಪ್ರೀಂ ಕೋರ್ಟ್‌, ದಲಿತರಿಂದ ಜಾತಿ ನಿಂದನೆ ದೂರು ದಾಖಲಾದ ತತ್‌ಕ್ಷಣವೇ ಆರೋಪಿಗಳನ್ನು ಬಂಧಿಸುವ ಕ್ರಮವನ್ನು ರದ್ದುಗೊಳಿಸಿತ್ತು. ಇದರಿಂದ ರೊಚ್ಚಿಗೆದ್ದಿರುವ ದಲಿತ ಸಂಘಟನೆಗಳು, ಸೋಮವಾರ ‘ಭಾರತ ಬಂದ್‌’ಗೆ ಕರೆ ನೀಡಿದ್ದವು. ನಾನಾ ರಾಜ್ಯಗಳಲ್ಲಿ ನಡೆದ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿ ಒಟ್ಟು 9 ಮಂದಿ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ, ಸುಪ್ರೀಂಕೋರ್ಟ್‌ನಲ್ಲಿ ತೀರ್ಪು ಮರುಪರಿಶೀಲನೆಗೆ ಅರ್ಜಿ ಸಲ್ಲಿಸಿತ್ತು. ಅಂದಹಾಗೆ, ಸೋಮವಾರದ ಗಲಭೆಗಳಲ್ಲಿ ಮೃತಪಟ್ಟವರ ಸಂಖ್ಯೆ ಮಂಗಳವಾರ 11ಕ್ಕೇರಿದೆ.

ಶಾಸಕಿ ಮನೆಗೆ ಬೆಂಕಿ: ಏತನ್ಮಧ್ಯೆ ರಾಜಸ್ಥಾನದ ಕರೌಲಿ ಜಿಲ್ಲೆಯ ಹಿಂದುವಾನ್‌ ನಗರದಲ್ಲಿ ದಲಿತ ಸಂಘಟನೆಗಳು ಮಂಗಳವಾರ ದಲಿತ ವರ್ಗಕ್ಕೆ ಸೇರಿದ ಹಾಲಿ ಶಾಸಕಿ ಬಿಜೆಪಿಯ ರಾಜಕುಮಾರಿ ಜಾಟವ್‌ ಮತ್ತು ಮಾಜಿ ಶಾಸಕ, ಕಾಂಗ್ರೆಸ್‌ನ ಭರೋಸಿಲಾಲ್‌ ಜಾಟವ್‌ ಅವರ ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ.

ರಾಜಕೀಯ ಮೇಲಾಟ: ದಲಿತ ಸಂಘಟನೆಗಳ ಪ್ರತಿಭಟನೆ ಬೆನ್ನಲ್ಲೇ ಉದ್ಭವಿಸಿದ್ದ ಕೇಂದ್ರ ಸರಕಾರ ಹಾಗೂ ವಿಪಕ್ಷಗಳ ನಡುವಿನ ವಾಕ್ಸಮರ ಮಂಗಳವಾರವೂ ಮುಂದುವರಿದಿದೆ. 

ನ್ಯಾಯಪೀಠ ಹೇಳಿದ್ದೇನು?
ಕೇಂದ್ರ ಸರಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ| ಎ.ಕೆ. ಗೋಯೆಲ್‌ ಮತ್ತು ನ್ಯಾ| ಯು.ಯು. ಲಲಿತ್‌ ಅವರನ್ನು ಒಳಗೊಂಡ  ನ್ಯಾಯಪೀಠ, “ಪ್ರತಿಭಟನೆಗೆ ಇಳಿದವರು ಸುಪ್ರೀಂ ಕೋರ್ಟ್‌ ತೀರ್ಪನ್ನು ಸರಿಯಾಗಿ ಓದಿಕೊಂಡಿಲ್ಲ  ಎಂದು ತೋರುತ್ತದೆ. ನಾವು ಎಸ್ಸಿ, ಎಸ್ಟಿ ಕಾಯ್ದೆಯನ್ನು ದುರ್ಬಲಗೊಳಿಸಿಲ್ಲ. ಬದಲಿಗೆ, ಕಾಯ್ದೆಯ ದುರುಪಯೋಗದಿಂದ ಮುಗ್ಧರು ತೊಂದರೆಗೀಡಾಗುವುದನ್ನು ತಪ್ಪಿಸುವ ಪ್ರಯತ್ನ ಮಾಡಿದ್ದೇವೆ” ಎಂದು ಸ್ಪಷ್ಟವಾಗಿ ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next