Advertisement

ಸಂತ್ರಸ್ತರಿಗೆ ಗುಜರಿ ನೆರವು!

01:06 PM Aug 20, 2019 | Suhan S |

ಬೆಳಗಾವಿ: ಸಂತ್ರಸ್ತರಿಗೆ ನೀಡುವ ನೆರವು ಗುಜರಿಯಲ್ಲ. ಬದಲಾಗಿ ಗುಜರಿ ಮಾರಿ ನೆರವು. ಇಂಥ ವಿನೂತನ ವಿಚಾರ ಹೊಳೆದದ್ದೇ ತಡ ಈ ಸಂಘಟನೆ ಕೆಲಸ ಆರಂಭಿಸಿಯೇ ಬಿಟ್ಟಿತು.

Advertisement

ಹಳೆ ಕಬ್ಬಿಣ, ಪಾತ್ರೆ, ಪ್ಲಾಸ್ಟಿಕ್‌, ಫ್ಯಾನ್‌, ಸೈಕಲ್ಗಳಂಥ ಮೋಡಕಾ ವಸ್ತುಗಳನ್ನೇ ಲೋಡ್‌ಗಟ್ಟಲೇ ಸಂಗ್ರಹಿಸಿ ಮಾರಾಟ ಮಾಡಿ ಲಕ್ಷಾಂತರ ರೂ. ನೆರೆ ಸಂತ್ರಸ್ತರಿಗೆ ನೀಡಲು ಮುಂದಾಗಿದೆ.

ಬೆಳಗಾವಿ ನಗರದ ಕ್ಯಾಂಪ್‌ ಪ್ರದೇಶದಲ್ಲಿರುವ ಮದೀನಾ ಮಸೀದಿ ಎಂಬ ಸಂಘಟನೆ ಪ್ರವಾಹ ಪೀಡಿತ ಸಂತ್ರಸ್ತರ ನೆರವಿಗೆ ನಿಂತಿದೆ. ಉತ್ತರ ಕರ್ನಾಟಕದಲ್ಲಿ ಪ್ರವಾಹದಿಂದ ಸಾವಿರಾರು ಜನರು ನಿರಾಶ್ರಿತರಾಗಿದ್ದು, ಸರ್ಕಾರ, ಅನೇಕ ಸಂಘ-ಸಂಸ್ಥೆಗಳು, ಮಠಾಧೀಶರು, ಶಾಲಾ-ಕಾಲೇಜುಗಳು, ನೌಕರರು, ಸಾರ್ವಜನಿಕರು ಮುಕ್ತ ಮನಸ್ಸಿನಿಂದ ಸಹಾಯ ಮಾಡುತ್ತಿದ್ದಾರೆ. ಇದಕ್ಕೆ ಪೂರಕವೆಂಬಂತೆ ಗುಜರಿಗೆ ಸೇರುವ ವಸ್ತುಗಳನ್ನೇ ರಾಶಿಗಟ್ಟಲೇ ಒಟ್ಟುಗೂಡಿಸಿ ಅದನ್ನು ಮಾರಾಟ ಮಾಡಿ ಪರಿಹಾರಧನ ಸಂಗ್ರಹಿಸುತ್ತಿದೆ.

ಸಂಘಟನೆಯ ಕರೆಯ ಮೇರೆಗೆ ಸಾರ್ವಜನಿಕರು ತಮ್ಮ ಮನೆಯಲ್ಲಿದ್ದ ಗುಜರಿ ವಸ್ತುಗಳನ್ನು ಸ್ವ ಆಸಕ್ತಿಯಿಂದ ಇಲ್ಲಿಗೆ ತಂದು ಕೊಡುತ್ತಿದ್ದಾರೆ. ಇಂಥ ವಸ್ತುಗಳನ್ನು ಅನವಶ್ಯಕವಾಗಿ ಮನೆಯಲ್ಲಿಟ್ಟು ಜಾಗ ಹಾಳು ಮಾಡುವ ಬದಲು ಇಲ್ಲಿಗೆ ತಂದು ನೆರೆ ಪೀಡಿತ ಸಂತ್ರಸ್ತರಿಗೆ ನೆರವಾಗಬಹುದೆಂದು ಜನರು ತಂಡೋಪ ತಂಡವಾಗಿ ಬಂದಿ ಇಲ್ಲಿ ಕೊಟ್ಟು ಹೋಗುತ್ತಿದ್ದಾರೆ.

ರಾಶಿಗಟ್ಟಲೇ ಸಾಮಾನು: ಗುಜರಿಗೆ ಹಾಕುವ ವಸ್ತುಗಳನ್ನು ನೀಡುವಂತೆ ಮದೀನಾ ಮಸೀದಿ ಸಂಘಟನೆಯವರು ಆಗಸ್ಟ್‌ 15ರಿಂದ ಮೂರು ದಿನಗಳ ಕಾಲ ಸಾರ್ವಜನಿಕರಿಗೆ ಸಮಯವಕಾಶ ನೀಡಿ ಅಭಿಯಾನ ಆರಂಭಿಸಿದ್ದರು. ಅದರಂತೆ ಸಂಘಟನೆಯ ನೂರಾರು ಕಾರ್ಯಕರ್ತರು ನಗರದ ಓಣಿ ಓಣಿಗಳಲ್ಲಿ ವಾಹನಕ್ಕೆ ಸ್ಪೀಕರ್‌ ಅಳವಡಿಸಿ ಜಾಗೃತಿ ಮೂಡಿಸುತ್ತ ಮೋಡಕಾ(ಗುಜರಿ) ವಸ್ತುಗಳನ್ನು ಸಂಗ್ರಹಿಸಿದ್ದಾರೆ. ಈ ಅಭಿಯಾನ ಕೇವಲ ಮೂರು ದಿನಗಳಿಗೆ ಮಾತ್ರ ಇತ್ತು. ಈ ಸಣ್ಣ ಅವಧಿಯಲ್ಲಿ 15-20 ಲೋಡ್‌ ಆಗುವಷ್ಟು ಗುಜರಿ ವಸ್ತುಗಳು ಸಂಗ್ರಹಗೊಂಡಿವೆ.

Advertisement

ಹಳೆ ಕಬ್ಬಿಣ, ಹಳೆ ಸೈಕಲ್ಗಳು, ಫ್ಯಾನ್‌, ವಾಹನಗಳು, ರೆಫ್ರಿಜರೇಟರ್‌, ಟಿವಿ, ಕಂಪ್ಯೂಟರ್‌, ವಾಶಿಂಗ್‌ ಮಷೀನ್‌, ಹಳೆ ಪಾತ್ರೆ, ಪ್ಲಾಸ್ಟಿಕ್‌ ವಸ್ತುಗಳು, ಪಂಪ್‌ಸೆಟ್‌ಗಳು, ಬ್ಯಾರಲ್ಗಳು, ಟೈರ್‌ಗಳು, ಕುರ್ಚಿ, ಟೇಬಲ್ ಹೀಗೆ ಅನೇಕ ಗುಜರಿ ವಸ್ತುಗಳನ್ನು ನಗರದ ಅಂಜುಮನ್‌ ಮೈದಾನದಲ್ಲಿ ತಂದು ಸಂಗ್ರಹಿಸಿಡಲಾಗಿದ್ದು, ಎಲ್ಲ ವಸ್ತುಗಳನ್ನು ಸುಮಾರು 30ಕ್ಕೂ ಹೆಚ್ಚು ಜನರು ಸೇರಿ ಪ್ರತ್ಯೇಕಿಸುವಲ್ಲಿ ತೊಡಗಿದ್ದಾರೆ. ಇವೆಲ್ಲವನ್ನೂ ಸವಾಲಿನ ಮೂಲಕ ಮಾರಾಟ ಮಾಡಲಿದ್ದಾರೆ.•ಗುಜರಿ ಸಾಮಾನು ಮಾರಿ ಸಂತ್ರಸ್ತರಿಗೆ ಪರಿಹಾರ• ಸಹಾಯಕ್ಕೆ ಮುಂದಾದ ಸಂಘಟನೆ

 

•ಭೈರೋಬಾ ಕಾಂಬಳೆ

Advertisement

Udayavani is now on Telegram. Click here to join our channel and stay updated with the latest news.

Next