ಚಿಕ್ಕಬಳ್ಳಾಪುರ: ಕೇಂದ್ರ, ರಾಜ್ಯ ಹಾಗೂ ಜಿಲ್ಲಾ ವಲಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯ ಅಭಿವೃದ್ಧಿಗಾಗಿ ವಿಶೇಷ ಘಟಕದಡಿ ಬಿಡುಗಡೆಯಾಗುವ ಅನುದಾನವನ್ನು ನಿಯಮಾನುಸಾರ ಪೂರ್ಣ ಬಳಕೆ ಮಾಡಬೇಕು. ನಿಯಮಿತ ಸಮಯಕ್ಕೆ ಕ್ರಿಯಾ ಯೋಜನೆ ಅಥವಾಕಾಲಮಿತಿಯಲ್ಲಿ ಕಾಮಗಾರಿ ಕೈಗೊಳ್ಳದೆ ಅನುದಾನ ಬಾಕಿ ಉಳಿಸಿದರೆ ಆಯಾ ಇಲಾಖೆ ಅಧಿಕಾರಿ ಹೊಣೆಗಾರರಾಗಿರುತ್ತಾರೆ ಹಾಗೂ ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಆರ್.ಲತಾ ಸೂಚಿಸಿದರು.
ಜಿಲ್ಲಾಧಿಕಾರಿಗಳ ನ್ಯಾಯಾಲಯ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆದ ಎಸ್‌ಸಿಪಿ ಮತ್ತು ಟಿ.ಎಸ್.ಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿ ಇಲಾಖೆಗೆ ಬಿಡುಗಡೆಯಾಗುವ ಅನುದಾನಕ್ಕೆ ಅನುಗುಣವಾಗಿ ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ಕ್ರಿಯಾ ಯೋಜನೆ ರೂಪಿಸಿ, ಸಂಬಂಧಪಟ್ಟ ಇಲಾಖೆ ಅಥವಾ ಅಧಿಕಾರಿ ಗಳಿಂದ ಅನುಮೋದನೆ ಪಡೆದುಕೊಳ್ಳಬೇಕು ಎಂದರು.
ಎಚ್ಚರಿಕೆ: ಮುಂದಿನ ಸಭೆಯೊಳಗೆ ಪ್ರತಿ ಇಲಾಖೆಯಿಂದ ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಗಳ ಶೇ.80 ರಷ್ಟು ಪ್ರಗತಿಯನ್ನು ಎಲ್ಲಾ ಇಲಾಖೆಗಳು ಸಾಧಿಸಲೇಬೇಕು. ಇಲ್ಲದಿದ್ದರೆ ಸಂಬಂಧಿಸಿದ ಇಲಾಖೆಗಳ ಜಿಲ್ಲಾಮುಖ್ಯಸ್ಥರನ್ನು ಹೊಣೆಗಾರರನ್ನಾಗಿಸಿ ಕಾನೂನು ಪ್ರಕಾರ ಸೂಕ್ತ ಕ್ರಮ ಜರುಗಿಸುವುದಾಗಿ ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದರು.
ವಿವಿಧ ಇಲಾಖೆಗಳಿಗೆ ಎಸ್.ಸಿ.ಪಿ/ ಟಿ.ಎಸ್.ಪಿ ಯೋಜನೆಯಡಿ ನೀಡಲಾಗುವ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡುವಂತೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಎಸ್‌ಸಿಪಿ/ ಟಿಎಸ್‌ಪಿ ಯೋಜನೆಯಡಿ ವಿವಿಧ ಇಲಾಖೆಗಳಿಗೆ ಬಿಡುಗಡೆಯಾಗಿರುವ ಅನುದಾನ ಹಾಗೂ ಸದರಿ ಅನುದಾನವನ್ನು ಯಾವ ಉದ್ದೇಶಗಳಿಗೆ ವೆಚ್ಚ ಮಾಡಲಾಗಿದೆ ಎಂಬುವುದರ ಬಗ್ಗೆ ಪ್ರತಿ ತಿಂಗಳು ವರದಿಯನ್ನು ಸಮಾಜ ಕಲ್ಯಾಣಇಲಾಖೆಗೆ ಸಲ್ಲಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಗಂಗಾ ಕಲ್ಯಾಣ ಯೋಜನೆಯಡಿ ಕೃಷಿಕರಿಗೆ ಬೋರ್‌ವೆಲ್ ಸೌಲಭ್ಯಗಳನ್ನು ತ್ವರಿತವಾಗಿ ನೀಡಿ. ಬೋರ್‌ವೆಲ್‌ಗಳಿಗೆ ಅಗತ್ಯ ವಿದ್ಯುತ್ ಸೌಲಭ್ಯ ನೀಡಬೇಕು ಎಂದು ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ತೇಜಾನಂದರೆಡ್ಡಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಣುಕಾ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಶೇಷಾದ್ರಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.