ಮುದ್ದೇಬಿಹಾಳ: ತಾಲೂಕಿನಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಬೆಳವಣಿಗೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ. ಪ್ರತಿಯೊಂದು ಶಾಲೆಯಲ್ಲೂ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕ ಪ್ರಾರಂಭಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ಹಣಮಂತಗೌಡ ಮಿರ್ಜಿ ಹೇಳಿದರು.
ಇಲ್ಲಿನ ಮಾರುತಿನಗರದಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯದಲ್ಲಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ನ ಮುದ್ದೇಬಿಹಾಳ ತಾಲೂಕು ಸ್ಥಳೀಯ ಸಂಸ್ಥೆ ಪದಾಧಿಕಾರಿಗಳು ನೀಡಿದ ಗೌರವ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ನಾನು ಹಿಂದೆ ಬಾಗಲಕೋಟೆ ಜಿಲ್ಲೆ ಬೀಳಗಿಯಲ್ಲಿ ಬಿಇಒ ಆಗಿದ್ದಾಗ ಕೋವಿಡ್ ಸಂದರ್ಭ, ಎಸ್ಸೆಸ್ಸೆಲ್ಸಿ ಪರೀಕ್ಷೆ ಸಂದರ್ಭ ಸ್ಕೌಟ್ಸ್ ಮತ್ತು ಗೈಡ್ಸ್‌ನ ಸೇವೆಯನ್ನು ಪರಿಣಾಮಕಾರಿಯಾಗಿಸಿದ್ದಕ್ಕಾಗಿ ನನಗೆ ರಾಜ್ಯ ಆಯುಕ್ತರು ಅಭಿನಂದನಾ ಪತ್ರವನ್ನು ಕೊಟ್ಟು ಪ್ರೋತ್ಸಾಹಿಸಿದ್ದರು. ನನಗೂ ಸ್ಕೌಟ್ಸ್ ಮತ್ತು ಗೈಡ್ಸ್‌ಗೂ ಅವಿನಾಭಾವ ಸಂಬಂಧ ಇದೆ. ಈ ತಾಲೂಕಿನಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಬೆಳಗಣಿಗೆಗೆ ಎಲ್ಲ ರೀತಿಯ ಸಹಕಾರ ನೀಡುತ್ತೇನೆ ಎಂದರು.
ಈ ಸಂದರ್ಭ ಮಾತನಾಡಿದ ಸಂಸ್ಥೆಯ ಉಪಾಧ್ಯಕ್ಷ ಡಿ.ಬಿ.ವಡವಡಗಿ, ಮುದ್ದೇಬಿಹಾಳದ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಗೆ ಉತ್ತಮ ಇತಿಹಾಸ ಇದೆ. ಇಲ್ಲಿನ ಸ್ವಯಂ ಸೇವಕರು ರಾಷ್ಟ್ರಪತಿ, ರಾಜ್ಯಪಾಲರ ಪುರಸ್ಕಾರವನ್ನು ಪಡೆದುಕೊಂಡು ಈ ತಾಲೂಕಿನ ಕೀರ್ತಿ ಬೆಳಗಿದ್ದಾರೆ.
ಹಿಂದಿನ ಬಿಇಒಗಳ ಅವ ಧಿಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಾಕಷ್ಟು ಬೆಳವಣಿಗೆ ಕಂಡಿದೆ. ಮಕ್ಕಳಿಗೆ ಶಿಸ್ತು ಮತ್ತು ನಾಯಕತ್ವದ ಗುಣ ಬೆಳೆಸುವ ನಿಸ್ವಾರ್ಥ ಸೇವೆಯ ಈ ಸಂಸ್ಥೆಯನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸಲು ಅಗತ್ಯ ಸಹಾಯ ಸಹಕಾರ ನೀಡುವುದರ ಜೊತೆಗೆ ಪ್ರತಿಯೊಂದು ಶಾಲೆಯಲ್ಲೂ ಘಟಕ ಪ್ರಾರಂಭಗೊಳ್ಳುವಂತೆ ಮತ್ತು ಗ್ರಾಮ ಪಂಚಾಯಿತಿಗಳಿಂದ ಸಂಸ್ಥೆಗೆ ಸರ್ಕಾರದ ನಿರ್ದೇಶನದಂತೆ ಬರಬೇಕಾದ ಶುಲ್ಕವನ್ನು ಒದಗಿಸಿಕೊಡಲು ತಾಪಂ ಕಾರ್ಯನಿರ್ವಾಹಕ ಅಧಿಕಾರಿಯವರ ಜೊತೆ ಚರ್ಚಿಸಿ ಸಂಸ್ಥೆಯನ್ನು ಆರ್ಥಿಕವಾಗಿ ಬಲಪಡಿಸಲು ಶ್ರಮಿಸಬೇಕು ಎಂದರು.
ಸಂಸ್ಥೆ ಅಧ್ಯಕ್ಷರೂ ಆಗಿರುವ ವಿಜಯಪುರ ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ ಕವಡಿಮಟ್ಟಿ, ಕಾರ್ಯದರ್ಶಿ ಜಿ.ಎಚ್.ಚವ್ಹಾಣ, ಖಜಾಂಚಿ ಜಿ.ಎನ್. ಹೂಗಾರ, ಪದಾಧಿಕಾರಿ ನಾಗಭೂಷಣ ನಾವದಗಿ, ದೈಹಿಕ ಶಿಕ್ಷಣ ಪರಿವೀಕ್ಷಕ ಆರ್.ಆರ್. ಚವ್ಹಾಣ, ಮಧ್ಯಾಹ್ನ ಬಿಸಿಯೂಟ ಯೋಜನೆಯ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸಂಗಮೇಶ ಹೊಲ್ದೂರ, ನಿರ್ಗಮಿತ ಬಿಇಒ ಆರ್.ಬಿ.ದಮ್ಮೂರಮಠ, ಶಿಕ್ಷಕರ ಸಂಘದ ಮಾಜಿ ಪದಾಧಿಕಾರಿ ತೊಂಡಿಹಾಳ ಮತ್ತಿತರರು ಇದ್ದರು. ಇದೇ ವೇಳೆ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ವತಿಯಿಂದ ಮಿರ್ಜಿಯವರಿಗೆ ಅಭಿನಂದನಾ ಪತ್ರ ನೀಡಲಾಯಿತು.