Advertisement

44ಕ್ಕೂ ಹೆಚ್ಚು ಸ್ಕೂಟರ್‌ ಕದ್ದ ಬಾಲಕರು

10:46 AM Jun 24, 2023 | Team Udayavani |

ಬೆಂಗಳೂರು: ಆಕ್ಟಿವಾ, ಆಕ್ಸಸ್‌, ಡಿಯೋ ಸ್ಕೂಟರ್‌ಗಳನ್ನೇ ಟಾರ್ಗೆಟ್‌ ಮಾಡಿಕೊಂಡು ನಗರಾದ್ಯಂತ ಹ್ಯಾಂಡ್‌ಲಾಕ್‌ ಮುರಿದು ಕದಿಯುತ್ತಿದ್ದ ಸಂಘರ್ಷಕ್ಕೊಳಗಾದ ಇಬ್ಬರು ಬಾಲಕರು ಒಂದೂವರೆ ವರ್ಷದ ಬಳಿಕ ಜೆಪಿನಗರ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದು, ಬರೊಬ್ಬರಿ 44 ದ್ವಿಚಕ್ರವಾಹನ ಜಪ್ತಿ ಮಾಡಲಾಗಿದೆ.

Advertisement

ಕೆಆರ್‌ಪುರ ಹಾಗೂ ಬಿಟಿಎಂ ಲೇಔಟ್‌ನ 16 ವರ್ಷದ ಇಬ್ಬರು ಸಂಷರ್ಷಕ್ಕೊಳಗಾದ ಬಾಲಕರು ಸಿಕ್ಕಿ ಬಿದ್ದವರು. ಬಂಧಿತರಿಂದ 35 ಲಕ್ಷ ರೂ. ಮೌಲ್ಯದ 44 ಸ್ಕೂಟರ್‌ ಜಪ್ತಿ ಮಾಡಲಾಗಿದೆ.

ಬೆಂಗಳೂರು ನಗರದ ಜೆ.ಪಿ ನಗರ ಪೊಲೀಸ್‌ ಠಾಣೆ, ಜಯನಗರ ಠಾಣೆ, ಅವಲಹಳ್ಳಿ, ತಿಲಕ್‌ ನಗರ್‌ ಠಾಣೆ, ಆಂಧ್ರ ಪ್ರದೇಶದ ಮದನಪಲ್ಲಿ ಠಾಣೆಗಳಿಗೆ ಸಂಬಂಧಪಟ್ಟಂತೆ ತಲಾ ಒಂದೊಂದು ಪ್ರಕರಣಗಳು ಸೇರಿದಂತೆ ನಗರದ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ 29 ದ್ವಿಚಕ್ರವಾಹನ ಕಳ್ಳತನ ಪ್ರಕರಣಗಳು ಪತ್ತೆಯಾಗಿದೆ.

ಪ್ರಕರಣದ ವಿವರ: ಸಿಕ್ಕಿಬಿದ್ದ ಇಬ್ಬರು ಬಾಲಕರು 8ನೇ ತರಗತಿಗೆ ವ್ಯಾಸಂಗ ಮೊಟಕುಗೊಳಿಸಿ ಸಣ್ಣ-ಪುಟ್ಟ ಕೆಲಸ ಮಾಡುತ್ತಿದ್ದರು. ಒಬ್ಬ ಬಾಲಕನ ತಂದೆ ಬಿಬಿಎಂಪಿ ಪೌರಕಾರ್ಮಿಕರಾದರೆ, ಮತ್ತೂಬ್ಬ ಬಾಲಕನ ತಂದೆ ನಿಧನಹೊಂದಿದ್ದು, ತಾಯಿ ಮನೆ ಕೆಲಸ ಮಾಡಿಕೊಂಡು ಮಗನನ್ನು ಸಾಕುತ್ತಿದ್ದಳು. 2022ರಲ್ಲಿ ಇಬ್ಬರಿಗೂ ಪರಿಚಯವಾಗಿತ್ತು. ಜಾಲಿರೈಡ್‌ ಮಾಡಲು, ವೀಲಿಂಗ್‌ ಚಟ ಹೊಂದಿದ್ದರು. ಇಬ್ಬರೂ ಜತೆಯಾಗಿ ದ್ವಿಚಕ್ರವಾಹನ ಕಳ್ಳತನ ಮಾಡಲು ಸಂಚು ರೂಪಿಸಿದ್ದರು. ಅದರಂತೆ ರಸ್ತೆ ಬದಿ ನಿಲುಗಡೆ ಮಾಡಿರುವ ಆಕ್ಸಸ್‌, ಡಿಯೋ, ಆಕ್ಟಿವಾ ಸ್ಕೂಟರ್‌ಗಳನ್ನು ಗುರುತಿಸುತ್ತಿದ್ದರು. ದ್ವಿಚಕ್ರ ವಾಹನಗಳ ಹ್ಯಾಂಡ್‌ ಲಾಕ್‌ ತುಂಡರಿಸುತ್ತಿದ್ದರು. ಬಳಿಕ ಸ್ಕೂಟರ್‌ನ ಡೂಮ್‌ ಕೆಳಗೆ ಬರುವ ವೈಯರ್‌ ಅನ್ನು ಡೈರೆಕ್ಟ್ ಮಾಡಿ ಸ್ಟಾರ್ಟ್‌ ಮಾಡಿ ಕದ್ದೊಯ್ಯುತ್ತಿದ್ದರು. ಕದ್ದ ಸ್ಕೂಟರ್‌ಗಳಲ್ಲಿ ನೈಸ್‌ ರಸ್ತೆ, ಬೆಂಗಳೂರು ಹೊರ ವೀಲಿಂಗ್‌, ಜಾಲಿ ರೈಡ್‌ ಮಾಡುತ್ತಿದ್ದರು. ಪೆಟ್ರೋಲ್‌ ಖಾಲಿಯಾದ ಬಳಿಕ ರಸ್ತೆ ಬದಿಯಲ್ಲೇ ಸ್ಕೂಟರ್‌ ಬಿಟ್ಟು ಪರಾರಿಯಾಗುತ್ತಿದ್ದರು. ಇನ್ನು ಕೆಲ ಸ್ಕೂಟರ್‌ಗಳನ್ನು ರೈಲ್ವೆ ಟ್ರ್ಯಾಕ್‌ ಪಕ್ಕದಲ್ಲಿ ನಿಲ್ಲಿಸುತ್ತಿದ್ದರು.

4 ಸಾವಿರಕ್ಕೆ ವಾಹನ ಮಾರಾಟ: ಕದ್ದ ಸ್ಕೂಟರ್‌ ಗಳನ್ನು ಮಾರಾಟ ಮಾಡಲು ಗಿರಾಕಿಗಳನ್ನು ಹುಡುಕುತ್ತಿದ್ದರು. ಹೊರ ರಾಜ್ಯದಿಂದ ಬಂದ ಅಮಾಯಕರು ಅಥವಾ ಸಣ್ಣ-ಪುಟ್ಟ ಕೆಲಸ ಮಾಡುವವರನ್ನೇ ಗುರಿಯಾಗಿಸಿ 80 ಸಾವಿರ ರೂ. ಮೌಲ್ಯದ ಸ್ಕೂಟರ್‌ಗಳನ್ನು ಕೇವಲ 4 ರಿಂದ 5 ಸಾವಿರ ರೂ.ಗೆ ಮಾರುತ್ತಿದ್ದರು. ಯಾರಾದರೂ ವಾಹನಗಳ ದಾಖಲೆ ಕೇಳಿದರೆ,” ಸಾಲ ಮಾಡಿ ಖರೀದಿಸಿದ ದ್ವಿಚಕ್ರವಾಹನಕ್ಕೆ ಸಾಲ ಪಾವತಿಸದ ವ್ಯಕ್ತಿಗಳ ವಾಹನ ಜಪ್ತಿ ಮಾಡುವ ಕೆಲಸ ಮಾಡಿಕೊಂಡಿದ್ದೇವೆ. ಮುಂಗಡವಾಗಿ 5 ಸಾವಿರ ರೂ. ಕೊಟ್ಟರೆ, ನಿಮಗೆ ಕರೆ ಮಾಡಿ ಶೀಘ್ರದಲ್ಲೇ ದಾಖಲೆ ಕೊಡುತ್ತೇವೆ. ಉಳಿದ ಬಾಕಿ 5 ಸಾವಿರ ರೂ. ಅನ್ನು ದಾಖಲೆ ಕೊಡುವ ವೇಳೆ ಕೊಟ್ಟರೆ ಸಾಕು ಎಂದು ನಂಬಿಸುತ್ತಿದ್ದರು. 25 ಸ್ಕೂಟರ್‌ ಗಳನ್ನು ಇದೇ ಮಾದರಿಯಲ್ಲಿ ಹಲವು ಜನರಿಗೆ ಕಡಿಮೆ ಬೆಲೆಗೆ ಮಾರಾಟ ಮಾಡಿದ್ದರು.

Advertisement

ಮೊದಲ ಬಾರಿಗೆ ಪೊಲೀಸ್‌ ಬಲೆಗೆ: ವೈಟ್‌ ಫೀಲ್ಡ್‌, ಕಾಡುಗೋಡಿ, ಕೆಆರ್‌ಪುರದ ಸುತ್ತ-ಮುತ್ತ ರಸ್ತೆ ಬದಿ ನಿಲುಗಡೆ ಮಾಡುತ್ತಿದ್ದ ದ್ವಿಚಕ್ರವಾಹನಗಳನ್ನೇ ಟಾರ್ಗೆಟ್‌ ಮಾಡುತ್ತಿದ್ದರು. ಮನೆಯ ಗೇಟ್‌ ಒಳಗಡೆ ಅಥವಾ ಭದ್ರತೆ ಇರುವ ಪ್ರದೇಶದಲ್ಲಿರುತ್ತಿದ್ದ ದ್ವಿಚಕ್ರ ವಾಹನ ಮುಟ್ಟುತ್ತಿರಲಿಲ್ಲ. ಪೊಲೀಸರಿಗೆ ಸಿಕ್ಕಿ ಬೀಳದಂತೆ ಸಿಸಿಕ್ಯಾಮರಾ ಅಳವಡಿಸಿರುವ ಕಡೆಗಳಲ್ಲಿ ಮುಖ ಚಹರೆ ಕಾಣದಂತೆ ಮುನ್ನೆಚ್ಚರಿಕೆ ವಹಿಸುತ್ತಿದ್ದರು. ಹೀಗಾಗಿ ಕಳೆದ ಒಂದೂವರೆ ವರ್ಷಗಳಲ್ಲಿ ಪೊಲೀಸರ ಬಲೆಗೆ ಬಿದ್ದರಲಿಲ್ಲ. ಇದೇ ಮೊದಲ ಬಾರಿಗೆ ಸಿಕ್ಕಿ ಬಿದ್ದಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಬಾಲಕರು ಸಿಕ್ಕಿಬಿದ್ದಿದ್ದು ಹೇಗೆ ? : ಜೆ.ಪಿ. ನಗರದ ನಿವಾಸಿ ಕಾಂಟ್ರಾಕ್ಟರ್‌ ಕೆಲಸ ಮಾಡುತ್ತಿರುವ ವರುಣ್‌ ತಮ್ಮ ಆಕ್ಸಿಸ್‌ ದ್ವಿಚಕ್ರವಾಹನವನ್ನು 2021 ಡಿ.29ರಂದು ಜೆ.ಪಿ. ನಗರದ 2ನೇ ಹಂತದಲ್ಲಿರುವ ಮನೆ ಮುಂದೆ ನಿಲುಗಡೆ ಮಾಡಿದ್ದರು. ಮರುದಿನ ಬೆಳಗ್ಗೆ ನೋಡಿದಾಗ ದ್ವಿಚಕ್ರವಾಹನ ಇರಲಿಲ್ಲ. ಜೆ.ಪಿ.ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿದರೂ ಆರೋಪಿಗಳ ಬಗ್ಗೆ ಸುಳಿವು ಸಿಕ್ಕಿರಲಿಲ್ಲ. ಇತ್ತೀಚೆಗೆ ಜೆ.ಪಿ.ನಗರದಲ್ಲಿ ನಡೆದ ದ್ವಿಚಕ್ರವಾಹನ ಕಳ್ಳತನ ಪ್ರಕರಣದ ಕಾರ್ಯಾಚರಣೆ ವೇಳೆ ಇಬ್ಬರು ಬಾಲಕರ ಪೈಕಿ ಒಬ್ಬನ ಮೇಲೆ ಅನುಮಾನ ಮೂಡಿತ್ತು. ಇನ್ನಷ್ಟು ಆಳಕ್ಕಿಳಿದು ಜಾಡು ಹಿಡಿದಾಗ ಇಬ್ಬರು ಬಾಲಕರು ಕಳೆದ ಒಂದೂವರೆ ವರ್ಷಗಳಿಂದ ದ್ವಿಚಕ್ರವಾಹನ ಕದಿಯುತ್ತಿರುವ ಮಾಹಿತಿ ಸಿಕ್ಕಿತ್ತು. ಕೂಡಲೇ ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ನಂತರ 44 ದ್ವಿಚಕ್ರವಾಹನ ಜಪ್ತಿ ಮಾಡಿದ್ದಾರೆ. ಇಬ್ಬರು ಬಾಲಕರು ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದು, ಪಾಲಕರಿಗೆ ಒಪ್ಪಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next