Advertisement
ಸವಣೂರು ಇಡ್ಯಾಡಿಯ ಗುಣಪಾಲ ಗೌಡ ಬೆಳ್ಳಾರೆ ಪೊಲೀಸರಿಗೆ ನೀಡಿದ ದೂರಿನಂತೆ ಗುಣಪಾಲ ಗೌಡ ಮತ್ತು ಪ್ರಸಾದ್ ಇಡ್ಯಾಡಿ ಅವರ ಮಧ್ಯೆ 4 ವರ್ಷಗಳಿಂದ ಜಮೀನಿನ ವಿಚಾರದಲ್ಲಿ ತಕರಾರಿದ್ದು, ಮೇ 27ರಂದು ರಾತ್ರಿ ಗುಣಪಾಲ ಗೌಡ ಸವಣೂರಿನಿಂದ ತನ್ನ ಮನೆಯ ಕಡೆಗೆ ಸ್ಕೂಟರಿನಲ್ಲಿ ಹೋಗುತ್ತಿರುವ ವೇಳೆ ಅವರ ಮುಂದಿನಿಂದ ರಿಕ್ಷಾ ಚಲಾಯಿಸಿಕೊಂಡು ಹೋಗುತ್ತಿದ್ದ, ಪ್ರಸಾದ್ ಇಡ್ಯಾಡಿ ತನ್ನ ರಿಕ್ಷಾವನ್ನು ಸ್ಕೂಟರಿಗೆ ಅಡ್ಡ ಇಟ್ಟು ಅವಾಚ್ಯವಾಗಿ ಬೈದು, ಕೊಲ್ಲುವುದಾಗಿ ಬೆದರಿಸಿ ಕತ್ತಿಯಿಂದ ಹಲ್ಲೆ ನಡೆಸಿದ್ದ. ಗಾಯಗೊಂಡು ನೆಲಕ್ಕೆ ಬಿದ್ದ ಗುಣಪಾಲ ಬೊಬ್ಬೆ ಹೊಡೆದಾಗ ಅವರ ಮಕ್ಕಳು ಬರುವ ವೇಳೆ ಆರೋಪಿ ಪ್ರಸಾದ್ ಕತ್ತಿಯೊಂದಿಗೆ ರಿಕ್ಷಾದಲ್ಲಿ ಪರಾರಿಯಾಗಿದ್ದ. ಸ್ವಲ್ಪ ಸಮಯದ ಬಳಿಕ ಪ್ರಸಾದ್ ಇಡ್ಯಾಡಿ, ಬಾಬು ಗೌಡ ಮತ್ತು ಬಾಲಕೃಷ್ಣ ಅವರು ಘಟನೆ ನಡೆದ ಸ್ಥಳಕ್ಕೆ ಮರಳಿ ಬಂದಿದ್ದು, ಬಾಲಕೃಷ್ಣ ಅವರು ಗುಣಪಾಲ ಗೌಡರ ಮಗ ಭವಿತ್‌ಗೆ ಜೀವಬೆದರಿಕೆ ಒಡ್ಡಿ ಕತ್ತಿಯಿಂದ ಹಲ್ಲೆ ನಡೆಸಿದ್ದ. ತಡೆಯಲು ಹೋದ ರಂಜಿತ್ ಮತ್ತು ಮನೋಹರ್‌ಗೂ ಕತ್ತಿಯ ಏಟು ತಾಗಿದೆ ಎಂದು ದೂರಿನಲ್ಲಿ ತಿಳಿಸಿದಂತೆ ಪ್ರಕರಣ ದಾಖಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಪ್ರಸಾದ್ ಇಡ್ಯಾಡಿ ನೀಡಿದ ಪ್ರತಿ ದೂರಿನಂತೆ, ಆರೋಪಿಗಳಾದ ಗುಣಪಾಲ, ಮೋಕ್ಷಿತ್, ಚೇತನ್, ಭವಿತ್, ರಂಜಿತ್ ಮತ್ತು ಮನೋಹರ ಅವರು ಸೇರಿ ತನಗೆ ಹಾಗೂ ಸಹೋದರ ಬಾಲಕೃಷ್ಣ ಅವರಿಗೆ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ ಎಂದು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.